ಮಹಾಲಿಂಗಪುರ: ಪಟ್ಟಣದ ಭಗೀರಥ ವೃತ್ತದ ಬಳಿ ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಕಟ್ಟಡ ಪೂರ್ಣಗೊಂಡಿದ್ದರೂ ಉದ್ಘಾಟನೆಗೆ ಮುಹೂರ್ತ ಕೂಡಿಬಂದಿಲ್ಲ.
ಸದ್ಯ ಎಪಿಎಂಸಿ ಆವರಣದಲ್ಲಿ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ ಇದ್ದು, 2022ರ ಫೆಬ್ರವರಿಯಲ್ಲಿ ಆರಂಭಗೊಂಡಿದೆ. ಪ್ರತಿ ತಿಂಗಳು ₹ 94,500 ಬಾಡಿಗೆಯನ್ನು ಎಪಿಎಂಸಿಗೆ ನೀಡಲಾಗುತ್ತಿದೆ. 62 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿದ್ದಾರೆ. ಸುಸಜ್ಜಿತ ನೂತನ ವಸತಿ ನಿಲಯದ ಕಟ್ಟಡದಲ್ಲಿ ಎಲ್ಲ ಮೂಲಸೌಲಭ್ಯಗಳನ್ನು ಒದಗಿಸಲಾಗಿದ್ದರೂ ವಿದ್ಯಾರ್ಥಿಗಳ ಬಳಕೆಗೆ ಸಿಗುತ್ತಿಲ್ಲ. ಸ್ವಂತ ಕಟ್ಟಡವಿದ್ದರೂ ಬಾಡಿಗೆ ಕಟ್ಟಡದಲ್ಲಿ ಇರಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದಾಗಿದೆ.
ಹೊಸ ಕಟ್ಟಡದಲ್ಲಿ ಏನೇನಿದೆ?: ಪುರಸಭೆಯಿಂದ 30 ವರ್ಷಕ್ಕೆ ಜಾಗ ಲೀಸ್ ಪಡೆದು ₹ 4.95 ಕೋಟಿ ವೆಚ್ಚದಲ್ಲಿ 1,140 ಚದರ ಅಡಿ ವಿಸ್ತೀರ್ಣದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ವಸತಿ ನಿಲಯ ನಿರ್ಮಿಸಲಾಗಿದೆ. ಎರಡಂತಸ್ತಿನ ಕಟ್ಟಡ, ಮಧ್ಯಭಾಗದಲ್ಲಿ ವಿಶಾಲ ಜಾಗ, 17 ಕೊಠಡಿ, ಶೌಚಾಲಯ, ಸ್ನಾನಗೃಹ, ಗ್ರಂಥಾಲಯ, ಕುಡಿಯಲು ಶುದ್ಧ ನೀರು, ಕುರ್ಚಿ, ಟೇಬಲ್, ಕಬೋರ್ಡ್, ಬಿಸಿ ನೀರು ಸ್ನಾನಕ್ಕೆ ಸೋಲಾರ್, ಡಬಲ್ ಡಕ್ಕರ್ ಕಾಟ್, ವಿದ್ಯುತ್ ಕಡಿತವಾದರೆ ಜನರೇಟರ್ ವ್ಯವಸ್ಥೆಯನ್ನು ನೂತನ ಕಟ್ಟಡ ಹೊಂದಿದೆ. 100 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿರುವ ಈ ಕಟ್ಟಡದ ಪ್ರತಿ ಕೊಠಡಿಯಲ್ಲಿ ಆರು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗಿದೆ.
ಸುರಕ್ಷತೆ ಮರೀಚಿಕೆ: ವಿದ್ಯಾರ್ಥಿಗಳಿಗೆ ಎಲ್ಲ ಮೂಲಸೌಲಭ್ಯ ಹೊಂದಿರುವ ಈ ವಸತಿ ನಿಲಯದಲ್ಲಿ ಬೆಡ್ ಹಾಗೂ ಕಾಂಪೌಂಡ್ ಇಲ್ಲ. ಕಟ್ಟಡ ನಿರ್ಮಾಣಕ್ಕೂ ಮೊದಲು ಇದ್ದ ಕಾಂಪೌಂಡ್ ಹಾಳಾಗಿದೆ. ಹೀಗಾಗಿ, ವಸತಿ ನಿಲಯಕ್ಕೆ ಸುರಕ್ಷತೆ ಮರೀಚಿಕೆಯಾಗಿದೆ. ಧ್ವಜಾರೋಹಣ ಕಟ್ಟೆ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಅಲ್ಲದೆ, ವಸತಿ ನಿಲಯದ ಕಟ್ಟಡ ಪೂರ್ಣಗೊಂಡು ಎರಡು ತಿಂಗಳಾದರೂ ಉದ್ಘಾಟನೆಗೊಳ್ಳದೇ ಇರುವುದರಿಂದ ಇಡೀ ವಸತಿ ನಿಲಯ ದೂಳಿನಿಂದ ಆವೃತವಾಗಿದೆ. ಸ್ವಚ್ಛತೆ ಇಲ್ಲದೇ ಸುತ್ತಲೂ ಗಿಡಗಂಟಿ ಬೆಳೆದು ನಿಂತಿದೆ.
ದೂಳಿನಿಂದ ಆವೃತವಾದ ನೂತನ ಕಟ್ಟಡ ಕಾಂಪೌಂಡ್, ಬೆಡ್ ಇಲ್ಲ ಸುತ್ತಲೂ ಬೆಳೆದು ನಿಂತ ಗಿಡಗಂಟಿಗಳು
ಶೇ 10ರಷ್ಟು ಫಿನಿಶಿಂಗ್ ಕೆಲಸ ಬಾಕಿ ‘ನೀರಾವರಿ ನಿಗಮದವರು ವಸತಿ ನಿಲಯದ ನೂತನ ಕಟ್ಟಡ ಹಸ್ತಾಂತರಿಸಿದ ನಂತರ ಕಾಂಪೌಂಡ್ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಇಲಾಖೆ ಹಂತದಲ್ಲಿ ಕೈಗೊಳ್ಳಲಾಗುವುದು. ಈಚೆಗಷ್ಟೇ ಭೇಟಿ ನೀಡಿದ್ದೇನೆ. ಕಟ್ಟಡ ಪೂರ್ಣಗೊಂಡಿದ್ದರೂ ಶೇ 10ರಷ್ಟು ಫಿನಿಶಿಂಗ್ ಕೆಲಸ ಬಾಕಿ ಇದೆ. ಅದನ್ನು ಬೇಗ ಮುಗಿಸುವಂತೆ ಗುತ್ತಿಗೆದಾರನಿಗೆ ಸೂಚಿಸಿದ್ದೇನೆ. ಆದಾದ ನಂತರ ಶಾಸಕರು ಸಚಿವರ ಜತೆ ಮಾತನಾಡಿ ಉದ್ಘಾಟನಾ ದಿನ ನಿಗದಿ ಮಾಡಲಾಗುವುದು’ ಎಂದು ಮುಧೋಳ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಂ. ಪಾಟೀಲ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.