ಮಹಾಲಿಂಗಪುರ: ಗೋಕಾಕ ರಸ್ತೆಯ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಕ್ರೀಡಾಂಗಣವನ್ನು ತಕ್ಷಣವೇ ಅಭಿವೃದ್ಧಿಪಡಿಸಬೇಕೆಂದು ಕ್ರೀಡಾಂಗಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾದೇವ ಕಡಬಲ್ಲವರ ಒತ್ತಾಯಿಸಿದರು.
ಕ್ರೀಡಾಂಗಣದ ಅವ್ಯವಸ್ಥೆ ಕುರಿತು ಸಮಿತಿಯಿಂದ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
‘ಪಟ್ಟಣದಲ್ಲಿ ಏಕೈಕ ಕ್ರೀಡಾಂಗಣ ಇದಾಗಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ಸಂಪೂರ್ಣ ಕೆಸರುಗದ್ದೆಯಾಗಿ ಮಾರ್ಪಾಡಾಗುತ್ತದೆ. ಇದರಿಂದ ಕ್ರೀಡಾಪಟುಗಳಿಗೆ ಆಟವಾಡಲು ಕ್ರೀಡಾಂಗಣವೇ ಇಲ್ಲದಂತಾಗಿದೆ. ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಕೌಜಲಗಿ ನಿಂಗಮ್ಮ ಭವನ, ವಸತಿ ನಿಲಯ ಇದೇ ಆವರಣದಲ್ಲಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೂ ಶಾಲೆ, ಕಾಲೇಜಿಗೆ ಬರಲು ತೊಂದರೆಯಾಗಿದೆ ಎಂದು ಆರೋಪಿಸಿದರು.
‘ಕ್ರೀಡಾಂಗಣಕ್ಕೆ ಕಾಂಪೌಂಡ್ ಇಲ್ಲದ ಕಾರಣ ಸಂಜೆ ಆಗುತ್ತಿದ್ದಂತೆ ಕುಡುಕರು, ಕಳ್ಳರು, ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ರಾತ್ರಿ ವೇಳೆ ಸಾರ್ವಜನಿಕರು ಬಯಲು ಶೌಚವಾಗಿ ಬಳಸುತ್ತಿದ್ದಾರೆ. ಅನೈತಿಕ ಚಟುವಟಿಕೆ ತಾಣವಾಗಿದೆ. ಖಾಸಗಿ ವಾಹನಗಳು ಕ್ರೀಡಾಂಗಣದಲ್ಲಿ ಎಲ್ಲೆಂದರಲ್ಲಿ ನಿಲ್ಲುತ್ತಿದ್ದು, ಇದರಿಂದ ಕ್ರೀಡಾಂಗಣ ಇಕ್ಕಟ್ಟಾಗಿ ಮತ್ತಷ್ಟು ತೊಂದರೆಯಾಗಿದೆ’ ಎಂದು ದೂರಿದರು.
‘2013ರಲ್ಲಿ ಕ್ರೀಡಾಂಗಣ ನಿರ್ಮಾಣವಾಗಿದೆ. ಕಳೆದ ಮೂರು ವರ್ಷಗಳ ಹಿಂದೆ ಕ್ರೀಡಾಂಗಣದ ಅಭಿವೃದ್ಧಿಗೆ ₹50 ಲಕ್ಷ ಮಂಜೂರಾಗಿದ್ದು, ಇನ್ನುವರೆಗೆ ಕೆಲಸ ಪ್ರಾರಂಭವಾಗಿಲ್ಲ. ಪ್ರೌಢಶಾಲೆ ಮುಖ್ಯಶಿಕ್ಷಕರು, ಕಾಲೇಜು ಪ್ರಾಚಾರ್ಯರು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದರು.
‘ಕ್ರೀಡಾಂಗಣದ ಅಭಿವೃದ್ಧಿಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಒಂದು ವಾರದೊಳಗೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಕ್ರೀಡಾಪಟುಗಳೆಲ್ಲ ಸೇರಿ ಚನ್ನಮ್ಮ ವೃತ್ತದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ವೃತ್ತದಲ್ಲೇ ಆಟವಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಬಂದು ಪಕಾಲಿ, ಗಂಗಾಧರ ಮೇಟಿ, ರಾಜಶೇಖರ ಶೆಟ್ಟರ, ಬಸೀರ ಕೆಂಭಾವಿ, ಅವಿನಾಶ ಜಾಧವ, ಪ್ರತಾಪ ಗೌಡಪ್ಪಗೋಳ, ಮಹೇಶ ಸಿಂಧೆ, ವಿಶಾಲ ಸವಸುದ್ದಿ, ಕಿರಣ ಭಜಂತ್ರಿ, ಪ್ರದೀಪ ಭಾವಿಕಟ್ಟಿ, ಮಲೀಕ ಬರಗಿ, ಆಫ್ರಿದಿ ಪಕಾಲಿ, ನಾಸೀರ ಸೌದಾಗರ, ಪರಶುರಾಮ ಪೂಜೇರಿ, ಲಕ್ಷ್ಮಣ ಬ್ಯಾಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.