ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕು ಹೋರಾಟ ಸಮಿತಿ ವತಿಯಿಂದ ಬುಧವಾರ ಎತ್ತಿನ ಬಂಡಿ ಮೆರವಣಿಗೆ ಹಾಗೂ ಬಾರಕೋಲ ಚಳುವಳಿ ನಡೆಯಿತು.
ಪಟ್ಟಣದ ಎಪಿಎಂಸಿ ಗಣಪತಿ ದೇವಸ್ಥಾನದ ಬಳಿ ಎತ್ತಿನ ಬಂಡಿ ಮೆರವಣಿಗೆ ಹಾಗೂ ಬಾರಕೋಲ ಚಳುವಳಿಗೆ ಚಾಲನೆ ನೀಡಲಾಯಿತು. ಸುತ್ತಲಿನ ಗ್ರಾಮಗಳಿಂದ ಆಗಮಿಸಿದ 50ಕ್ಕೂ ಹೆಚ್ಚು ಎತ್ತಿನ ಬಂಡಿಗಳು ಮೆರವಣಿಗೆಗೆ ಮೆರಗು ನೀಡಿದವು. ಬಸವೇಶ್ವರ ವೃತ್ತ, ಡಬಲ್ ರಸ್ತೆ, ನಡುಚೌಕಿ, ಜವಳಿ ಬಜಾರ್, ಗಾಂಧಿ ವೃತ್ತದ ಮಾರ್ಗವಾಗಿ ಚನ್ನಮ್ಮ ವೃತ್ತ ತಲುಪಿ ಸಭೆಯಾಗಿ ಮಾರ್ಪಟ್ಟಿತು. ಚನ್ನಮ್ಮ ವೃತ್ತದಲ್ಲಿ ಎತ್ತಿನ ಬಂಡಿ ಮೂಲಕ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಸಂಗಪ್ಪ ಎಂ., ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹೋರಾಟಗಾರರ ಅಹವಾಲು ಆಲಿಸಿದರು. ನಂತರ ತಾಲ್ಲೂಕು ರಚನೆ ಕುರಿತು ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಕಂದಾಯ ಸಚಿವರಿಗೆ ಸಲ್ಲಿಸಿರುವ ಪತ್ರದ ಪ್ರತಿಯನ್ನು ಹೋರಾಟ ಸಮಿತಿ ಮುಖಂಡರಿಗೆ ನೀಡಿ ಪ್ರತಿಭಟನೆ ಹಿಂಪಡೆಯುವಂತೆ ಮನವಿ ಮಾಡಿದರು.
ಹೆಚ್ಚುವರಿ ಎಸ್ಪಿ ಮಹಾಂತೇಶ್ವರ ಜಿಡ್ಡಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ್ ಗಿರೀಶ ಸ್ವಾದಿ, ಡಿವೈಎಸ್‍ಪಿ ಎಸ್.ರೋಶನ್ ಜಮೀರ್, ಸಿಪಿಐ ಸಂಜೀವ ಬಳೆಗಾರ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
‘ತಾಲ್ಲೂಕು ಕೇಂದ್ರಕ್ಕೆ ಎಲ್ಲ ಅರ್ಹತೆ ಹೊಂದಿರುವ ಮಹಾಲಿಂಗಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ. ಕಳೆದ 1220 ದಿನದಿಂದ ಅನಿರ್ದಿಷ್ಟ ಮುಷ್ಕರ ನಡೆದಿದೆ. ಕಳೆದ ತಿಂಗಳು ಮಹಾಲಿಂಗಪುರ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದೇವೆ. ತಾಳ್ಮೆ ಪರೀಕ್ಷಿಸುವುದು ಒಳಿತಲ್ಲ. ಇದೇ ಅಧಿವೇಶನದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಹೋರಾಟ ಸಮಿತಿ ನಿಯೋಗ ಭೇಟಿ ಮಾಡಲು ದಿನ ನಿಗದಿ ಮಾಡಬೇಕು’ ಎಂದು ಹೋರಾಟಗಾರರು ಆಗ್ರಹಿಸಿದರು.
‘ಅಧಿವೇಶನ ಮುಗಿಯುವುದರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ತಾಲ್ಲೂಕು ಹೋರಾಟ ಸಮಿತಿಯ ನಿಯೋಗವನ್ನು ಭೇಟಿ ಮಾಡಿಸಲಾಗುವುದು’ ಎಂದು ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ, ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಭರವಸೆ ನೀಡಿದ ನಂತರ ಹೋರಾಟಗಾರರು ಪ್ರತಿಭಟನೆ ಹಿಂಪಡೆದರು.
ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಗಂಗಾಧರ ಮೇಟಿ, ಧರೆಪ್ಪ ಸಾಂಗಲಿಕರ, ಮಹಾಲಿಂಗಪ್ಪ ಸನದಿ, ರಂಗನಗೌಡ ಪಾಟೀಲ ಮಾತನಾಡಿದರು. ಮುಂಜಾಗ್ರತಾ ಕ್ರಮವಾಗಿ ಬಸ್ ಸಂಚಾರವನ್ನು ನಿಷೇಧಿಸಲಾಗಿತ್ತು. ಪಟ್ಟಣದ ಎಲ್ಲಾ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡಿ ಸಾರ್ವಜನಿಕರು ಬೆಂಬಲ ಸೂಚಿಸಿದರು. ಹೋರಾಟ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ ಸಂಸ್ಥೆ ಸದಸ್ಯರು, ಸಮಾಜದ ಮುಖಂಡರು ಸೇರಿದಂತೆ ಸುತ್ತಲಿನ ಗ್ರಾಮಗಳ ಮುಖಂಡರು ಭಾಗವಹಿಸಿದ್ದರು.
ಉಸ್ತುವಾರಿ ಸಚಿವರ ಪತ್ರದಲ್ಲೇನಿದೆ?
‘ಮಹಾಲಿಂಗಪುರ ಪಟ್ಟಣ ಭೌಗೋಳಿಕವಾಗಿ ತಾಲ್ಲೂಕು ಕೇಂದ್ರವಾಗಲು ಯೋಗ್ಯವಿದೆ. ಸಾರ್ವಜನಿಕರ ಹಾಗೂ ಆಡಳಿತ ಹಿತದೃಷ್ಟಿಯಿಂದ ಹೊಸದಾಗಿ ತಾಲ್ಲೂಕು ಕೇಂದ್ರವನ್ನಾಗಿ ಮಾಡಲು ಎಲ್ಲ ಮಾನದಂಡಗಳು ಪೂರೈಸುತ್ತವೆ. ಮಹಾಲಿಂಗಪುರ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ತಮ್ಮ ಸಂಪೂರ್ಣ ಸಹಮತ ಇದೆ. ಸರ್ಕಾರ ಶೀಘ್ರದಲ್ಲಿ ತಾಲ್ಲೂಕು ಕೇಂದ್ರವಾಗಿ ಘೋಷಿಸಬೇಕೆಂದು ಕೋರುತ್ತೇನೆ’ ಎಂದು ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಕಂದಾಯ ಸಚಿವರಿಗೆ ಬುಧವಾರ ಪತ್ರ ಬರೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.