ಮಹಾಲಿಂಗಪುರ: ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲು ಹಿಂದೇಟು ಹಾಕುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅ.13ರಂದು ಮುತ್ತಿಗೆ ಹಾಕಲು ಉದ್ದೇಶಿಸಿದ್ದ ನಿರ್ಧಾರವನ್ನು ತಾಲ್ಲೂಕು ಹೋರಾಟ ಸಮಿತಿ ಹಿಂಪಡೆದಿದೆ.
ಪಟ್ಟಣದ ಗೋಕಾಕ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಹಮ್ಮಿಕೊಂಡ ತಾಲ್ಲೂಕು ಹೋರಾಟ ಸಮಿತಿ ಸಭೆಯಲ್ಲಿ ಈ ಕುರಿತು ಮುಖಂಡರು ತಿಳಿಸಿದರು.
ಈಚೆಗೆ ಬೆಂಗಳೂರಿಗೆ ತೆರಳಿದ್ದ ತಾಲ್ಲೂಕು ಹೋರಾಟ ಸಮಿತಿ ನಿಯೋಗದ ಜತೆ ಮುಖ್ಯಮಂತ್ರಿ ಸರಿಯಾಗಿ ಸ್ಪಂದಿಸಿರಲಿಲ್ಲ. ಇದರಿಂದ ಬೇಸತ್ತಿದ್ದ ಸಮಿತಿ ಮುಖಂಡರು, ಬಂಡಿಗಣಿಗೆ ಅ.13ರಂದು ಆಗಮಿಸಲಿರುವ ಮುಖ್ಯಮಂತ್ರಿಗೆ ಮುತ್ತಿಗೆ ಹಾಕುವ ಹಾಗೂ ಕಪ್ಪು ಬಾವುಟ ಪ್ರದರ್ಶನ ಮಾಡಲು ನಿರ್ಧರಿಸಿದ್ದರು.
ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಜಿಲ್ಲಾಡಳಿತ ಸೂಚನೆ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯೆಲ್ ತಮ್ಮೊಂದಿಗೆ ಸಭೆ ನಡೆಸಿದ್ದು, ಮುಖ್ಯಮಂತ್ರಿ ಜತೆಗೆ ಭೇಟಿ ಮಾಡಿಸಿ ಚರ್ಚೆಗೆ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಅದರಿಂದಾಗಿ ಮುತ್ತಿಗೆ ನಿರ್ಧಾರ ಹಿಂಪಡೆದಿರುವುದಾಗಿ ಸಮಿತಿ ಮುಖಂಡರು ತಿಳಿಸಿದರು.
‘ವಿಧಾನಸಭೆ ಅಧಿವೇಶನದಲ್ಲಿ ಮಹಾಲಿಂಗಪುರ ತಾಲ್ಲೂಕು ರಚನೆ ಕುರಿತು ಶಾಸಕ ಸಿದ್ದು ಸವದಿ ಅವರ ಹೇಳಿಕೆಗೆ ಪ್ರತ್ಯುತ್ತರವಾಗಿ ಸಚಿವ ಕೃಷ್ಣ ಬೈರೆಗೌಡ ಗೊಂದಲದ ಹೇಳಿಕೆ ನೀಡಿದ್ದಾರೆ. ಇದನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಲಾಗುವುದು’ ಎಂದು ಮುಖಂಡರು ತಿಳಿಸಿದರು.
ಧರೆಪ್ಪ ಸಾಂಗಲಿಕರ, ಮಹಾಂತೇಶ ಹಿಟ್ಟಿನಮಠ ಮಾತನಾಡಿದರು. ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಅಧ್ಯಕ್ಷತೆ ವಹಿಸಿದ್ದರು. ಮಹಾದೇವ ಮಾರಾಪುರ, ನಿಂಗಪ್ಪ ಬಾಳಿಕಾಯಿ, ಚನ್ನು ದೇಸಾಯಿ, ಮಾರುತಿ ಕರೋಶಿ, ಹಣಮಂತ ಜಮಾದಾರ, ದುಂಡಪ್ಪ ಚನ್ನಾಳ, ಮುತ್ತಪ್ಪ ಹೊಸಪೇಟಿ, ಮಹಾಲಿಂಗಪ್ಪ ನಾಯಿಕ, ಡಿ.ಬಿ.ನಾಗನೂರ, ಮಹಾದೇವ ಕೋಳಿಗುಡ್ಡ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.