ಮಹಾಲಿಂಗಪುರ: ಮಹಾಲಿಂಗಪುರ ನೂತನ ತಾಲ್ಲೂಕು ರಚನೆಯ ಮನವಿಯನ್ನು ವಿಲೇ ಮಾಡಿರುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನಸಭೆ ಅಧಿವೇಶನದಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿ ತಾಲ್ಲೂಕು ಹೋರಾಟ ಸಮಿತಿ ಸದಸ್ಯರು ಬುಧವಾರ ದಿಢೀರ್ ರಸ್ತೆ ತಡೆ ನಡೆಸಿದರು.
ಚನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕಂದಾಯ ಸಚಿವರ ಹೇಳಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಖಂಡನಾ ನಿರ್ಣಯ ಕೈಗೊಂಡರು. ನಂತರ ಪುರಸಭೆ ಮುಖ್ಯಾಧಿಕಾರಿ ಎನ್.ಎ. ಲಮಾಣಿ ಅವರ ಮೂಲಕ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದರು.
‘ಮಹಾಲಿಂಗಪುರ ತಾಲ್ಲೂಕು ಹೋರಾಟ 4ನೇ ವರ್ಷದಲ್ಲಿ ಮುಂದುವರಿದಿದೆ. ಭೌಗೋಳಿಕ ಹಿನ್ನೆಲೆ ಹೊಂದಿದ್ದು, ತಾಲ್ಲೂಕಾಗಲು ಯೋಗ್ಯವಿದೆ. ಸರ್ಕಾರ ನೂತನ ತಾಲ್ಲೂಕು ರಚನೆಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸದನದಲ್ಲಿ ಶಾಸಕ ಸಿದ್ದು ಸವದಿ ಸಭಾಪತಿಗೆ ಮನವಿ ಮಾಡುವ ಸಂದರ್ಭ ಮಧ್ಯೆ ಪ್ರವೇಶಿಸಿದ ಕಂದಾಯ ಸಚಿವರು, ಆ ಮನವಿಯನ್ನು ವಿಲೇ ಮಾಡಲಾಗಿದೆ ಎಂಬ ಉತ್ತರ ನೀಡಿದ್ದು ಸಮಂಜಸವಲ್ಲ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಜಮಖಂಡಿ ತಾಲ್ಲೂಕಿನ ಹಳ್ಳಿಗಳನ್ನು ಒಳಗೊಂಡಂತೆ ತಾಲ್ಲೂಕಿನ ಬೇಡಿಕೆ ಇಟ್ಟಿಲ್ಲ. ಮೊದಲಿನಿಂದಲೂ ಮುಧೋಳ ತಾಲ್ಲೂಕಿನಲ್ಲಿ ಇದ್ದು, ಈಗಲೂ ಮುಧೋಳ ಹೋಬಳಿಯಲ್ಲಿ ಇದ್ದೇವೆ. ಕಂದಾಯ ತೆರಿಗೆಯನ್ನು ಮುಧೋಳದಲ್ಲಿ ಪಾವತಿಸುತ್ತೇವೆ. ಹೀಗಾಗಿ, ಮುಧೋಳ ತಾಲ್ಲೂಕಿನಲ್ಲಿ ಅಂದಾಯ 84 ಹಳ್ಳಿಗಳಿದ್ದು, ಆ ಹಳ್ಳಿಗಳನ್ನು ವಿಂಗಡನೆ ಮಾಡಿ ಮಹಾಲಿಂಗಪುರವನ್ನು ನೂತನ ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು’ ಎಂದು ಆಗ್ರಹಿಸಿದರು.
‘ಅಂದಾಜು 35 ವರ್ಷಗಳಿಂದ ತಾಲ್ಲೂಕು ರಚನೆಗೆ ಸರ್ಕಾರಕ್ಕೆ ಆಗ್ರಹಿಸಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ. ಮುಖ್ಯಮಂತ್ರಿ, ಶಾಸಕರು, ಉಸ್ತುವಾರಿ ಸಚಿವರು, ಕಂದಾಯ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ತಾಲ್ಲೂಕು ಕೇಂದ್ರಕ್ಕೆ ಮಹಾಲಿಂಗಪುರ ಸೂಕ್ತವಿರುವುದಾಗಿ ಜಿಲ್ಲಾಧಿಕಾರಿ ಸಲ್ಲಿಸಿದ ಪ್ರಸ್ತಾವಕ್ಕೆ ಉಸ್ತುವಾರಿ ಸಚಿವರು, ಶಾಸಕರು ಒಪ್ಪಿಗೆ ಪತ್ರ ಸಲ್ಲಿಸಿದ್ದಾರೆ. ಹೀಗಾಗಿ, ಹೋರಾಟಗಾರರ, ಉಸ್ತುವಾರಿ ಸಚಿವರ, ಶಾಸಕರ ಸಭೆ ಕರೆದು ಸೂಕ್ತವಾಗಿ ಪರಿಶೀಲಿಸದೇ ಕಂದಾಯ ಸಚಿವರು ಸ್ವಂತ ನಿರ್ಧಾರದ ಮೇಲೆ ಮನವಿಯನ್ನು ವಿಲೇ ಹಾಕಿದ್ದಾರೆ’ ಎಂದು ಆರೋಪಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ, ಗಂಗಾಧರ ಮೇಟಿ, ಶಿವನಗೌಡ ಪಾಟೀಲ, ವೀರೇಶ ಆಸಂಗಿ, ಸಿದ್ದುಗೌಡ ಪಾಟೀಲ, ಸಿದ್ದು ಶಿರೋಳ, ಪಂಡಿತ ಪೂಜಾರ, ಬಂದು ಪಕಾಲಿ, ರಫೀಕ್ ಮಾಲದಾರ, ಹಣಮಂತ ಜಮಾದಾರ, ಈಶ್ವರ ಮುರಗೋಡ, ರಾಜು ತೇರದಾಳ, ರಾಜೇಂದ್ರ ಮಿರ್ಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.