ಮಹಾಲಿಂಗಪುರ: ಪಟ್ಟಣದಲ್ಲಿ ಮಹಾಲಿಂಗೇಶ್ವರ ಜಾತ್ರೆಯ ಮೂರನೇ ದಿನವಾದ ಭಾನುವಾರ ರಾತ್ರಿ ಮರುರಥೋತ್ಸವ ಸಡಗರದಿಂದ ಜರುಗಿತು.
ಶನಿವಾರ ರಾತ್ರಿ ಮಹಾಲಿಂಗೇಶ್ವರ ಮಠದಿಂದ ಆರಂಭಗೊಂಡಿದ್ದ ಅಹೋರಾತ್ರಿ ರಥೋತ್ಸವ ಭಾನುವಾರ ಮುಂಜಾನೆ ಚನ್ನಗಿರೇಶ್ವರ ದೇವಸ್ಥಾನ ತಲುಪಿತು. ಮರಳಿ ಮಹಾಲಿಂಗೇಶ್ವರ ಮಠದವರೆಗೆ ಅಹೋರಾತ್ರಿ ಸಾಗುವ ರಥೋತ್ಸವಕ್ಕೆ ಭಾನುವಾರ ರಾತ್ರಿ ಚಾಲನೆ ನೀಡಲಾಯಿತು.
ರಥವನ್ನು ವಿದ್ಯುತ್‍ದೀಪ, ಬೃಹತ್ ಹೂಮಾಲೆ, ಕಬ್ಬು–ಬಾಳೆಗಿಡದಿಂದ ರಥ ಸಿಂಗರಿಸಲಾಗಿತ್ತು. ಉಚ್ಚಾಯಿ, ನಂದಿಕೋಲ ಇದ್ದವು. ಭಕ್ತರು ‘ಮಹಾಲಿಂಗೇಶ್ವರ ಮಹಾರಾಜಕಿ ಜೈ’ ಎಂಬ ಜಯಘೋಷ ಮೊಳಗಿಸಿ, ರಥ ಎಳೆದರು. ಬೆಂಡು, ಬೆತ್ತಾಸು, ಉತ್ತತ್ತಿ ಹಾರಿಸಿದರು. ವಿವಿಧ ವಾದ್ಯ ಮೇಳ ಮೆರುಗು ತಂದವು.
ಜಂಗಿ ನಿಕಾಲಿ ಕುಸ್ತಿ ಇಂದು: ಜಾತ್ರೆ ಅಂಗವಾಗಿ ಸೆ.8ರಂದು ಮಧ್ಯಾಹ್ನ 2 ಗಂಟೆಗೆ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜಂಗಿ ನಿಕಾಲಿ ಕುಸ್ತಿಗಳು ನಡೆಯಲಿವೆ.
ಮಹಾರಾಷ್ಟ್ರ ಕೇಸರಿ ಸಿಕಂದರ ಶೇಖ, ಹರಿಯಾಣ ಕೇಸರಿ ವೀರೇಂದ್ರ, ದಾವಣಗೆರೆಯ ಡಬಲ್ ಕರ್ನಾಟಕ ಕೇಸರಿ ಕಾರ್ತಿಕ ಕಾಟೆ, ಹರಿಯಾಣ ಕೇಸರಿ ಹರೀಶ ಕುಮಾರ, ಕರ್ನಾಟಕ ಕಂಠೀರವ ಶಿವಯ್ಯ ಪೂಜಾರಿ, ಕುರಣಿವಾಡಿಯ ಅಬುಬಕರ್ ಚೌಸ್, ಕೊಲ್ಲಾಪುರದ ಕರ್ನಾಟಕ ಕೇಸರಿ ನಾಗರಾಜ ಬಸಿಡೋನಿ, ಪಂಜಾಬ ಕೇಸರಿ ಪ್ರದೀಪಸಿಂಗ, ಗೋಡಗೇರಿಯ ಪ್ರಕಾಶ ಇಂಗಳೆ, ಮಹಾರಾಷ್ಟ್ರದ ಅಕ್ಷಯ ಪಾಟೀಲ ಸೇರಿದಂತೆ ವಿವಿಧ ಪ್ರಖ್ಯಾತ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.