ADVERTISEMENT

ಬೀಳಗಿ: ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ರಸ್ತೆ ತಡೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 4:14 IST
Last Updated 12 ನವೆಂಬರ್ 2025, 4:14 IST
ಬೀಳಗಿ ತಾಲ್ಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಭಾರತೀಯ ಕಿಸಾನ ಸಂಘದ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು
ಬೀಳಗಿ ತಾಲ್ಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಭಾರತೀಯ ಕಿಸಾನ ಸಂಘದ ನೇತೃತ್ವದಲ್ಲಿ ತಾಲ್ಲೂಕಿನಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಲು ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದರು   

ಬೀಳಗಿ: ಮೆಕ್ಕೆಜೋಳವನ್ನು ನ್ಯಾಯಯುತ ಹಾಗೂ ಲಾಭದಾಯಕ ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯದ ಎಲ್ಲ ತಾಲ್ಲೂಕಿನಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತ ಬಾಗಲಕೋಟ ಜಿಲ್ಲಾ ಘಟಕ, ಬೀಳಗಿ ತಾಲ್ಲೂಕು, ಸಿದ್ದಾಪೂರ ಗ್ರಾಮ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಸಿದ್ದಾಪೂರ ಗ್ರಾಮದಲ್ಲಿ ನೂರಾರು ರೈತರು ಮಂಗಳವಾರ ಜಮಖಂಡಿ ಬಾಗಲಕೋಟೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ ನಂತರ ಗ್ರಾಮ ಪಂಚಾಯತಿವರೆಗೆ ಜಾತಾ ಮೂಲಕ ತೆರಳಿ ಕಂದಾಯ ಇಲಾಖೆ ಅಧಿಕಾರಿ ಮಂಜುನಾಥ ಧರೆಗೊಂಡ, ಮೂಲಕ ಪ್ರಧಾನಿ ಮತ್ತು‌ ಮುಖ್ಯಮಂತ್ರಿಗೆ‌ ಮನವಿ ಸಲ್ಲಿಸಿದರು.

ಭಾರತೀಯ ಕಿಸಾನ ಸಂಘದ ಜಿಲ್ಲಾಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ ಮಾತನಾಡಿ ಸತತವಾಗಿ ಸುರಿದ ಭಾರಿ ಮಳೆಯಿಂದ ಅತಿವೃಷ್ಟಿಯಾಗಿ ರೈತರು ಬೀಜ ರಸಗೊಬ್ಬರ,ಕ್ರೀಮಿನಾಶಕ ಔಷಧಿ, ಕೃಷಿ ಕಾರ್ಮಿರಿಗೆ ಎಂದು ಎಕರೆಗೆ ₹30 ರಿಂದ ₹40 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿದ ಮೆಕ್ಕೆ ಜೋಳ, ಈರುಳ್ಳಿ ಸೇರಿದಂತೆ ಇನ್ನಿತ್ತರ ಬೆಳೆಗಳು ನೀರುಪಾಲಾಗಿ ಹಾಳಾಗಿ ಅಪಾರ ಪ್ರಮಾಣ ಹಾನಿಯಾಗಿದ್ದು ಅಳಿದುಳಿದ ಮೆಕ್ಕೆಜೋಳ, ಈರುಳ್ಳಿ ಯನ್ನು ಮಾರಾಟ ಮಾಡಬೇಕೆಂದರೇ ಅವುಗಳ ಬೆಲೆ ಸಂಪೂರ್ಣ ಕುಸಿತ ಕಂಡಿದ್ದು ರೈತನ ಗಾಯದ ಮೇಲೆ ಬರೆ ಎಳೆದಂತ ಪರಸ್ಥಿತಿ ಉಂಟಾಗಿದ್ದು ಮೆಕ್ಕೆಜೋಳವನ್ನು ದಲ್ಲಾಳಿಗಳು, ಮದ್ಯವರ್ತಿಗಳು ₹1400 ರಿಂದ ₹1600 ವರೆಗೆ ಖರೀದಿಸುತ್ತಿದ್ದು ಇದರಿಂದಾಗಿ ತಾನು ಬಿತ್ತನೆಗೆ ಸಾಲ ಶೂಲ ಮಾಡಿ ಖರ್ಚು ಮಾಡಿದ ಹಣ ಮರಳಿ ಬರದೇ ಕೈ ಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿ ಕೆಲವು ರೈತರು ಸಾಲದ ಸುಳಿಯಿಂದ ಹೊರಗೆ ಬರದಂತಾಗಿ ತೊಂದರೆ ಅನುಭವಿಸುವಂತಾಗಿದ್ದು, ರೈತರ ಅನೂಕೂಲಕ್ಕಾಗಿ ಸರ್ಕಾರ ರಾಜ್ಯದ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಮೆಕ್ಕೆ ಜೋಳದ ಖರೀದಿ ಕೇಂದ್ರ ಪ್ರಾರಂಭಿಸಿ ರೈತರಿಗೆ ನ್ಯಾಯಯುತ ಲಾಭದಾಯಕ ಬೆಂಬಲ ಬೆಲೆ ನೀಡಬೇಕು ಎಂದು ಆಗ್ರಹ ಪಡಿಸಿದರು.

ADVERTISEMENT

ಮೆಕ್ಕೆ ಜೋಳದ ಶೇಖರಣೆಗೆ ಆಧುನಿಕ ಗೋದಾಮುಗಳನ್ನು ನಿರ್ಮಿಸುವ ಮೂಲಕ ಆವಕದ ಒತ್ತಡವನ್ನು ಕಡಿಮೆ ಮಾಡಬೇಕು. ಇಥೆನಾಲ್, ಕೋಳಿ ಆಹಾರ, ಮತ್ತು ಇತರ ಉಪ-ಉತ್ಪನ್ನಗಳ ತಯಾರಿಕೆಗೆ ಸ್ಥಳೀಯ ಕಾರ್ಖಾನೆಗಳನ್ನು ಸ್ಥಾಪಿಸಿ, ಬೇಡಿಕೆಯನ್ನು ಹೆಚ್ಚಿಸಬಹುದು. ಬೆಲೆ ಕುಸಿತದ ಸಂದರ್ಭದಲ್ಲಿ ಪರ್ಯಾಯ ಬೆಳೆಗಳ ಬಗ್ಗೆ ರೈತರಿಗೆ ತರಬೇತಿ ನೀಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕೋಶಾಧ್ಯಕ್ಷ ಎಮ್.ವಾಯ್. ವಡವಾಣಿ ಹೇಳಿದರು.

ಉತ್ತರ ಪ್ರಾಂತ ಕಾರ್ಯಕಾರಿಣಿ ಸದಸ್ಯ ಸುಬ್ಬರಾಯಗೌಡ ಪಾಟೀಲ ಮಾತನಾಡಿ ಅತಿವೃಷ್ಟಿಯಿಂದ ಹಾನಿಯಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಶೀಘ್ರದಲ್ಲಿ ಪರಿಹಾರ ಒದಗಿಸಬೇಕು ಫಸಲ ಭೀಮಾ ಯೋಜನೆಯಡಿ ಬೆಳೆಗಳಿಗೆ ವಿಮೆ ಮಾಡಿಸಿ ನಷ್ಟ ಅನುಭವಿಸಿದ ರೈತರಿಗೆ ಕ್ಲೇಮ್ ನೀಡಬೇಕು ಈ ಎಲ್ಲ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸಬೇಕು ಇಲ್ಲದಿದ್ದಲ್ಲಿ ಹಂತ ಹಂತವಾಗಿ ಉಗ್ರ ಪ್ರತಿಭಟನೆ ಮಾಡಲಾಗುವದು ಎಂದು ಸರಕಾರಕ್ಕೆ ಎಚ್ಚರಿಸಿದರು.

ಭೀಮಪ್ಪಯ್ಯ ದಿಗಂಬರಿಮಠ, ಗ್ರಾಮ ಘಟಕದ ಅಧ್ಯಕ್ಷ ಸಿದ್ದಪ್ಪ ಕೂಗಟಿ,ರೈತ ಮುಖಂಡರಾದ ಈರಪ್ಪ ಮಹಾಲಿಂಗಪೂರ, ಬುಡನ್ ಕೆರೂರ, ಸುಭಾಸ ಜಮ್ಮನಕಟ್ಟಿ, ಡಿ.ಬಿ.ಬಡಿಗೇರ, ಪಡಿಯಪ್ಪ ನಡಗಡ್ಡಿ,ರಂಗನಾಥ ಕರಮಂತನವರ,ನಾಗಪ್ಪ ವಡವಾಣಿ,ಮುತ್ತಪ್ಪ ದಳವಾಯಿ, ಲಕ್ಷ್ಮಣ್ಣ ಮುಧೋಳ,ಗಂಗಪ್ಪ ಕೂಗಟಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.