ADVERTISEMENT

15 ದಿನಗಳಾದರೂ ಬಾರದ ನೀರು; ಸಂಕಷ್ಟದಲ್ಲಿ ರೈತರು

ಮಲಪ್ರಭಾ ಎಡದಂತೆ ಕಾಲುವೆ ನಿರ್ಮಾಣ ದಿನದಿಂದಲೂ ವಡವಟ್ಟಿ–ಕಳಸ ಗ್ರಾಮಕ್ಕೆ ಮರೀಚಿಕೆಯಾದ ನೀರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 6:54 IST
Last Updated 5 ಆಗಸ್ಟ್ 2025, 6:54 IST
ಕುಳಗೇರಿ ಕ್ರಾಸ್ ಸಮೀಪದ ಬೀರನೂರ ಗ್ರಾಮದ ಕಣಿವೆ ಮೇಲ್ಭಾಗದಲ್ಲಿ ಹಾಯ್ದು ಹೋಗಿರುವ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಬಾರದಿರುವುದು
ಕುಳಗೇರಿ ಕ್ರಾಸ್ ಸಮೀಪದ ಬೀರನೂರ ಗ್ರಾಮದ ಕಣಿವೆ ಮೇಲ್ಭಾಗದಲ್ಲಿ ಹಾಯ್ದು ಹೋಗಿರುವ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಬಾರದಿರುವುದು   

ಕುಳಗೇರಿ ಕ್ರಾಸ್: ಸವದತ್ತಿ ತಾಲ್ಲೂಕಿನ ಮುನವಳ್ಳಿ ಬಳಿ ನಿರ್ಮಿಸಲಾದ ‘ಇಂದಿರಾ ಜಲಾಶಯ’ದಿಂದ ಮಲಪ್ರಭಾ ಎಡದಂಡೆ ಕಾಲುವೆಗೆ ನೀರು ಬಿಡಲಾಗಿದೆ. ನೀರು ಬಿಟ್ಟು ಹದಿನೈದು ದಿನಗಳು ಕಳೆದರೂ ಬೀರನೂರ, ಗೋವನಕೊಪ್ಪ, ವಡವಟ್ಟಿ ಹಾಗೂ ಕಳಸ ಗ್ರಾಮಗಳ ಭೂಮಿಗೆ ನೀರು ತಲುಪಿಲ್ಲ. ರೈತರು ನೀರಿಗಾಗಿ ಕಾಯುತ್ತಿದ್ದಾರೆ.

ಬಾದಾಮಿ ತಾಲ್ಲೂಕಿನ ಕಾಕನೂರ ಗ್ರಾಮದ ಬಳಿ ಮಲಪ್ರಭಾ ಎಡದಂಡೆ ಕಾಲುವೆ ನೀರು ಹಂಚಿಕೆಯಾಗಿರುವ ರಾಮದುರ್ಗ ತಾಲ್ಲೂಕಿನ ಚಿಕ್ಕತಡಸಿ ಗ್ರಾಮದ ಭೂಮಿಗೆ ನೀರು ಹರಿಯಲಾರಂಭಿಸಿ ವಾರವೇ ಕಳೆದಿವೆ. ಆಲೂರು ಎಸ್.ಕೆ, ತಳಕವಾಡ, ಬೀರನೂರ, ಗೋವನಕೊಪ್ಪ, ವಡವಟ್ಟಿ ಹಾಗೂ ಕಳಸ ಗ್ರಾಮಗಳಿಗೆ ಒಂದು ಹನಿ ನೀರು ಬಂದಿಲ್ಲ.

ಮೆಕ್ಕೆಜೋಳ, ಈರುಳ್ಳಿ, ಸೂರ್ಯಕಾಂತಿ, ಹತ್ತಿ, ಕಬ್ಬು ಬೆಳೆಗಳು ಸಮರ್ಪಕವಾಗಿ ಮಳೆಯಾಗದೆ ಒಣಗುತ್ತಿವೆ. ಕಾಲುವೆ ನೀರು ಬಂದರೂ ಬೆಳೆಗಳನ್ನು ಉಳಿಸಿಕೊಳ್ಳಬಹುದು ಎಂದು ರೈತರು ನೀರಿಗಾಗಿ ಆಗ್ರಹಿಸುತ್ತಿದ್ದಾರೆ. ಇನ್ನು ಎರಡ್ಮೂರು ದಿನಗಳಲ್ಲಿ ನೀರು ಬರುತ್ತದೆ ಎಂದು ಅಧಿಕಾರಿಗಳು ಹೇಳಿಕೊಂಡು ಹೋಗುತ್ತಿರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ.

ADVERTISEMENT

ಬಾದಾಮಿ ತಾಲ್ಲೂಕಿನ ಕಾಕನೂರ ಗ್ರಾಮದ ಕಣಿವೆ ಬಳಿ ಮಲಪ್ರಭಾ ಎಡದಂಡೆ ಕಾಲುವೆ ನೀರು ಹಂಚಿಕೆಯಾಗುತ್ತಿದೆ. ಈ ಕಾಲುವೆ ವ್ಯಾಪ್ತಿಗೆ 3,500 ಹೆಕ್ಟೇರ್ ಜಮೀನು ಬರುತ್ತದೆ. ಮೇಲಿನ ಭಾಗದ ರೈತರು ನೀರನ್ನು ಬಳಸಿಕೊಂಡ ಮೇಲೆ ಕೆಳಭಾಗಕ್ಕೆ ಹೋಗಲು ಬಿಟ್ಟರೆ ಕೆಳಗಿನವರ ಬೆಳೆಯೂ ಉಳಿಯುತ್ತದೆ ಎಂದು ರೈತರು ತಿಳಿಸಿದರು.

ನೀರು ಬೇಕಿಲ್ಲದಿದ್ದರೂ ಗೇಟ್‌ ತೆಗೆದು ನೀರು ಹರಿಸುವುದರಿಂದ ಆ ನೀರು ಮುಂದೆ ಮಲಪ್ರಭಾ ನದಿ ಸೇರುತ್ತಿದೆ. ಇದನ್ನು ತಡೆಯಬೇಕಾದ ಅಧಿಕಾರಿಗಳೂ ಕ್ರಮಕೈಗೊಳ್ಳುತ್ತಿಲ್ಲ ಎಂಬುದು ರೈತರ ದೂರು.

ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ಗ್ರಾಮದ ಭಾಗಶಃ ಜಮೀನುಗಳಿಗೆ ಹಾಗೂ ವಡವಟ್ಟಿ ಗ್ರಾಮದ ಹಲವು ಹೆಕ್ಟೇರ್ ಭೂಮಿಗೆ ಕಾಲುವೆ ನಿರ್ಮಾಣವಾದ ದಿನದಿಂದಲೂ ಮಲಪ್ರಭಾ ಕಾಲುವೆ ನೀರು ಮರೀಚಿಕೆಯಾಗಿದೆ. ಕಾಲುವೆ ನಿರ್ಮಾಣ ಮಾಡಿಯೂ ಉಪಯೋಗವಿಲ್ಲದಂತಾಗಿದೆ. ಕೋಟ್ಯಂತರ ರೂಪಾಯಿ ಅನುದಾನ ವ್ಯರ್ಥವಾಗಿದೆ ಎಂದು ದೂರುತ್ತಾರೆ ಗೋವನಕೊಪ್ಪ ಗ್ರಾಮದ ಪಿಕೆಪಿಎಸ್ ಮಾಜಿ ಅಧ್ಯಕ್ಷ ಮುದಕಣ್ಣ ಹೆರಕಲ್.

ಮಳೆಯೂ ಇಲ್ಲ ಕಾಲುವೆಗೆ ನೀರೂ ಇಲ್ಲ

ಕುಳಗೇರಿ ಕ್ರಾಸ್: ಮೋಡ ಕವಿದ ವಾತಾವರಣವಿದ್ದರೂ ಒಂದು ವಾರದಿಂದ ಮಳೆಯಾಗುತ್ತಿಲ್ಲ. ಇತ್ತ ಕಾಲುವೆಗೂ ನೀರು ಹರಿದು ಬರುತ್ತಿಲ್ಲ. ಬಿತ್ತಿದ ಬೆಳೆ ಕಳೆದುಕೊಳ್ಳುವ ಆತಂಕ ರೈತರದ್ದಾಗಿದೆ. ‘ಒಂದು ವಾರದಿಂದ ಮಳೆ ಪ್ರಮಾಣ ತೀರಾ ಕಡಿಮೆಯಾಗಿದೆ. ಬಿತ್ತನೆ ಬೀಜ ರಸಗೊಬ್ಬರಕ್ಕಾಗಿ ಈಗಾಗಲೇ ಸಾವಿರಾರು ರೂಪಾಯಿ ವೆಚ್ಚ ಮಾಡಲಾಗಿದೆ. ನೀರು ಬಾರದಿರುವುದರಿಂದ ಬೆಳೆಗಳು ಹಾಳಾಗುತ್ತಿವೆ ಎಂದು ಬೀರನೂರ ಗ್ರಾಮದ ರೈತ ಬಸವರಾಜ ಹತ್ತಿ ‘ಪ್ರಜಾವಾಣಿ’ ಯೊಂದಿಗೆ ಸಮಸ್ಯೆ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.