ADVERTISEMENT

ಮಲಪ್ರಭಾ ನದಿ ಪ್ರವಾಹ ಸಂತ್ರಸ್ತರ ಪ್ರತಿಭಟನೆ

ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿಲ್ಲ ಎಂಬ ಆರೋಪ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 7:33 IST
Last Updated 10 ಸೆಪ್ಟೆಂಬರ್ 2019, 7:33 IST

ಬಾಗಲಕೋಟೆ: ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗಿದೆ ಹಾಗೂ ಅಗತ್ಯವಿರುವಷ್ಟು ತಾತ್ಕಾಲಿಕ ಶೆಡ್ ಗಳನ್ನು ನಿರ್ಮಿಸಿಲ್ಲ ಎಂದು ಆರೋಪಿಸಿ ಬಾದಾಮಿ ತಾಲೂಕಿನ ಬೀರನೂರಿನ ಮಲಪ್ರಭಾ ನದಿ ಪ್ರವಾಹ ಸಂತ್ರಸ್ತರು ಮಂಗಳವಾರ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಕಾರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾತ್ಕಾಲಿಕ ಶೆಡ್ ಎಂದು ಕಾಟಾಚಾರಕ್ಕೆ ತಗಡುಗಳ ಬಡಿಯಲಾಗಿದೆ. ನೆಲಹಾಸು, ಶೌಚಾಲಯ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಪ್ರಾಣಿಗಳಿಗಿಂತಲೂ ಕಡೆಯಾಗಿ ಬದುಕಬೇಕಿದೆ. ಗ್ರಾಮದಲ್ಲಿ ಇನ್ನೂ 61 ಕುಟುಂಬಗಳಿಗೆ ವಸತಿ ವ್ಯವಸ್ಥೆ ಇಲ್ಲ. ಈಗಲೂ ರಸ್ತೆ ಬದಿ ಗುಡಾರ ಹಾಕಿಕೊಂಡು ಬದುಕುತ್ತಿದ್ದಾರೆ. ಅವರಿಗೆ ವಸತಿ ವ್ಯವಸ್ಥೆ ಮಾಡುವಂತೆ ಕೋರಿದರೂ ತಾಲ್ಲೂಕು ಆಡಳಿತ ಅದಕ್ಕೆ ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ ತಹಶಿಲ್ದಾರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಆದರೂ ಸಂತ್ರಸ್ತರ ಆಕ್ರೋಶದ ಬಿಸಿಗೆ ತಹಶೀಲ್ದಾರ ಕಾರು ಮುಂದಕ್ಕೆ ಹೋಗಲು ಅರ್ಧಗಂಟೆಗೂ ಹೆಚ್ಚು ಕಾಲ ದಾರಿ ಕಾಣದಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.