ADVERTISEMENT

ಕಳೆಗೆಟ್ಟ ಬದುಕಿಗೆ ಕಹಳೆಯೇ ಆಸರೆ 

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 5:41 IST
Last Updated 17 ನವೆಂಬರ್ 2019, 5:41 IST
ಕಹಳೆ ವಾದಕ ನೀಲಪ್ಪ ಕಾಳಿ
ಕಹಳೆ ವಾದಕ ನೀಲಪ್ಪ ಕಾಳಿ   

ಬಾಗಲಕೋಟೆ: ರಾಜ ಮಹಾರಾಜರ ಕಾಲದಲ್ಲಿ ಯುದ್ಧದ ಸನ್ನಿವೇಶ, ಶವ ಸಂಸ್ಕಾರ ಸೇರಿದಂತೆ ಅನೇಕ ಕಾರ್ಯಕ್ರಮಗಳಲ್ಲಿ ಕಹಳೆ ನುಡಿಸುತ್ತಿದ್ದ ತಾಲ್ಲೂಕಿನ ಕಾಳಿ ವಂಶದವರಾದ ನೀಲಪ್ಪ ಇಂದಿಗೂ ತಮ್ಮ ವಂಶಪಾರಂಪರಿಕವಾಗಿ ಬಂದಿರುವ ಕಹಳೆ ಉದುವುದನ್ನು ಮುಂದುವರೆಸಿದ್ದಾರೆ.

ಕಹಳೆ ಎಂಬ ಹೆಸರು ಗ್ರಾಮೀಣ ಭಾಷೆಯಲ್ಲಿ ಕಾಳಿ ಕಾಳಿ ಎಂದು ಕರೆಯಲ್ಪಡುವುದರಿಂದ ಈ ಕುಟುಂಬಕ್ಕೆ ಕಾಳಿ ಎಂದು ಹೆಸರು ಬಂದಿದೆ. ಕಳೆದ ಐದುತಲೆಮಾರಿನಿಂದ ಕಹಳೆ ಉದುತ್ತಿರುವ ನೀಲಪ್ಪನ ಕುಟುಂಬದ ಪೂರ್ವಜರು ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿಯೂ ಕಹಳೆ ಉದುತ್ತಿದ್ದರು ಎಂದು ಹೇಳುವವರ (ಹೆಳವರ) ಹೊತ್ತಿಗೆಯಲ್ಲಿ ಸಿಗುತ್ತದೆ.

‘ನಮ್ಮ ಮುತ್ತಾತನ ಅಪ್ಪ ಕನಕಪ್ಪ ಎಂಬುವರು 9 ಕಳಸದ ಭಾರವಾದ ಕಹಳೆಯನ್ನು ಗಂಟೆಗಟ್ಟಲೆ ಉದುತ್ತಿದ್ದರು. ಉಸಿರು ಹಿಡಿತದಿಂದ ತನಗರಿವಿಲ್ಲದೇ ಯೋಗಾಭ್ಯಾಸ ಮಾಡಿದತ್ತಾಗಿದ್ದರಿಂದ 120 ವರ್ಷ ಬದುಕಿದ್ದರು’ ಎಂದು ಕಹಳೆ ವಾದಕ ನೀಲಪ್ಪ ಕಾಳಿ ಹೇಳುತ್ತಾರೆ.

ADVERTISEMENT

‘ಕನಕಪ್ಪಸಮೀಪದ ಗದ್ದನಕೇರಿಯ ಮಳೆರಾಜೇಂದ್ರ ಮಠದ ಸೇವೆ ಮಾಡುತ್ತಾ, ಆ ಮಠದ ಪೂಜ್ಯರ ಹಿಂದೆ ಕಹಳೆ ಉದುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದರು.ಇವರ ಕಾಯಕ ನಿಷ್ಠೆಯನ್ನು ನೋಡಿದ ಮಠದ ಪೂಜ್ಯರು ಏನಾದರೂ ಕೇಳುಕೊ ಎಂದಾಗ ಎರಡು ಹೊತ್ತು ಊಟ ಹಾಗೂ ನಿಮ್ಮ ದರ್ಶನ ಸಾಕು ಎಂದು ಕೇಳಿದ್ದರಂತೆ. ಅಂದಿನಿಂದ ಇಲ್ಲಿಯವರೆಗೆ ನಮ್ಮ ಕುಟುಂಬಕ್ಕೆ ಊಟದ ಕೊರತೆಯಾಗಿಲ್ಲ’ ಎನ್ನುತ್ತಾರೆ.

ನೀಲಪ್ಪ ಕೂಡ ಇದೇ ಮಠದಲ್ಲಿ ಕಹಳೆ ಉದುವ ಕಾಯಕವನ್ನು ಮುಂದುವರೆಸಿದ್ದಾರೆ. ಇಳಿ ವಯಸ್ಸಿನಲ್ಲಿ ಕಣ್ಣು ಮಂದಾಗಿದ್ದು,ಕುಟುಂಬ ಸಾಗಿಸುವುದು ಕಷ್ಟಕರವಾಗಿದೆ. ಸದೃಢವಾಗಿದ್ದಾಗ ಯಾವುದಾದರು ಜಾತ್ರೆ, ಮಠ ಮಂದಿರಗಳ ಕಾರ್ಯಕ್ರಮದಲ್ಲಿ ಕಹಳೆ ಉದಿ ಅಲ್ಪ ಸ್ವಲ್ಪ ದುಡಿದ ಹಣದಿಂದ ಜೀವನ ನಡೆಸುತ್ತಿದ್ದರು. ಸದ್ಯ ಜೀವನ ನಡೆಸುವುದು ಕಷ್ಟವಾಗಿದೆ.

ಶತಮಾನಗಳಿಂದ ಕಹಳೆ ಉದುವ ಈ ಬಡ ಕಲಾವಿದರ ಅಳಿವಿನ ಅಂಚಿನಲ್ಲಿರುವ ಕಹಳೆ ವಾದ್ಯದ ಪುನಶ್ಚೇತನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಇಂತಹ ಕಲಾವಿದರನ್ನು ಗುರುತಿಸಿ ಕನಿಷ್ಠ ಮಾಶಾಸನವನ್ನಾದರೂ ನೀಡಿದರೆ ಕಳೆಗೆಟ್ಟ ಕಹಳೆವಾದಕರ ಜೀವನದಲ್ಲಿ ಉತ್ಸಾಹ ಬರಬಹುದು.

–ಸುನಂದಾ ಕಿಶೋರಿ, ವಾರ್ತಾ ಇಲಾಖೆಯ ತರಬೇತುದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.