ADVERTISEMENT

ಹುಬ್ಬಳ್ಳಿ: ತೋಟಗಾರಿಕೆ ವಿಭಾಗದಿಂದ ಆಯುರ್ವೇದ ಸಸಿಗಳ ಪ್ರದರ್ಶನ

ರೋಗ ನಿವಾರಣೆಗೆ ಸಸಿಗಳೂ ಮದ್ದು

ಸುಷ್ಮಾ ಸವಸುದ್ದಿ
Published 16 ಸೆಪ್ಟೆಂಬರ್ 2025, 4:12 IST
Last Updated 16 ಸೆಪ್ಟೆಂಬರ್ 2025, 4:12 IST
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಆಯುರ್ವೇದ ಸಸಿಗಳನ್ನು ಜನರು ವೀಕ್ಷಿಸಿದರು
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿಟ್ಟ ಆಯುರ್ವೇದ ಸಸಿಗಳನ್ನು ಜನರು ವೀಕ್ಷಿಸಿದರು   

ಹುಬ್ಬಳ್ಳಿ: ಸಣ್ಣ–ಪುಟ್ಟ ರೋಗಕ್ಕೂ ಆಸ್ಪತ್ರೆಗೆ ತೆರಳಿ, ಔಷಧ ಪಡೆಯುವುದು ನಮಗೆ ಅಭ್ಯಾಸವಾಗಿದೆ. ಹಿತ್ತಲಲ್ಲಿ ಬೆಳೆದ ಗಿಡ, ಬಳ್ಳಿ, ಸೊಪ್ಪುಗಳೇ ರೋಗಕ್ಕೆ ಮದ್ದಾಗಬಲ್ಲವು ಎಂಬ ಮಾಹಿತಿಯ ಕೊರತೆಯೂ ಇದಕ್ಕೆ ಕಾರಣ. ಇಲ್ಲಿನ ಕೃಷಿ ಮೇಳದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಔಷಧ ಗುಣವುಳ್ಳ ಸಸಿಗಳನ್ನು ಪ್ರದರ್ಶಿಸಿದ್ದಾರೆ.

ಆಡುಸೋಗೆ, ಶಂಖಪುಷ್ಟಿ, ನೆಲಬೇವು, ಲಾವಂಚ, ಮದರಂಗಿ, ಬಿಳಿ ಚಿತ್ರಮೂಲ, ಶತಾವರಿ, ಬಸಳೆ, ಮುಂಗರವಳ್ಳಿ, ಗುಗ್ಗಳ, ಸ್ಟೀವಿಯಾ ಸೇರಿ ನೂರಾರು ಔಷಧ ಸಸಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ನಾವು ಮನೆ ಅಂಗಳದಲ್ಲಿ, ಹಿತ್ತಲದಲ್ಲಿ, ಬಾಲ್ಕನಿಗಳಲ್ಲಿ ಬೆಳೆಯುವ ತುಳಸಿ, ನಿತ್ಯ ಮಲ್ಲಿಗೆ, ಅಲೋವೆರಾ, ದಾಸವಾಳಗಳಲ್ಲೂ ಔಷಧೀಯ ಗುಣವಿದೆ. 

ಜ್ವರ, ಕೆಮ್ಮು, ವಾಂತಿ, ಭೇದಿ, ಬಿಳಿ ಸೆರಗು, ರಕ್ತ ಮೂಲವ್ಯಾಧಿ, ಊತಜ್ವರ, ಮಲೇರಿಯಾ, ಬಿಕ್ಕಳಿಕೆ, ಚರ್ಮರೋಗ, ಕಾಮಾಲೆ, ಮೂತ್ರ ಕೋಶದ ಕಲ್ಲು ನಿವಾರಣೆ, ಜೀರ್ಣಕಾರಕ, ಗಾಯ ನಿವಾರಕ, ಶಕ್ತಿ ವರ್ಧಕ, ಬಾಯಿ ಹುಣ್ಣು, ಮೂಳೆ ಮುರಿತ, ಕಿವಿನೋವು, ಕ್ಷಯರೋಗ, ಮಧುಮೇಹ ನಿವಾರಕ... ಹೀಗೆ ಅನೇಕ ರೋಗಗಳಿಗೆ ಔಷಧೀಯ ಗುಣ ಹೊಂದಿರುವ ಸಸಿಗಳು ಇಲ್ಲಿ ಲಭ್ಯ ಇವೆ.

ADVERTISEMENT

‘ಕೆಲ ಸಸಿಗಳ ಎಲೆ ಬಳಕೆಯಾದರೆ, ಇನ್ನೂ ಕೆಲ ಸಸಿಗಳ ಬೇರು, ಕಾಂಡಗಳು ಔಷಧ ತಯಾರಿಕೆಗೆ ಉಪಯುಕ್ತ. ಆಯುರ್ವೇದ ಔಷಧ ತಯಾರಿಕೆಯಲ್ಲಿ ಈ ಸಸಿಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಆಯುರ್ವೇದ ಔಷಧಗಳ ಬಳಕೆ ಕಡಿಮೆಯಾದ್ದರಿಂದ ಇವುಗಳನ್ನು ಬೆಳೆಯುವರು ಸಂಖ್ಯೆ ಕಡಿಮೆಯಾಗಿದೆ. ಹೀಗಾಗಿ ಹಲವು ಸಸಿಗಳ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ’ ಎಂದು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ತಿಳಿಸಿದರು.

‘ಮಾರುಕಟ್ಟೆ ಕೊರತೆ’

‘ಔಷಧ ಗುಣವುಳ್ಳ ಸಸಿಗಳಿಗೆ ಮಾರುಕಟ್ಟೆ ಕಡಿಮೆಯಿರುವ ಕಾರಣ ರೈತರು ಬೆಳೆಯುವುದು ಕಡಿಮೆ. ಒಂದು ವೇಳೆ ಬೆಳೆದರೂ ಮೊದಲೇ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು. ಉತ್ತರ ಕರ್ನಾಟಕ ಭಾಗದ ಮಣ್ಣು ಈ ಸಸಿಗಳ ಬೆಳೆಗೆ ಸೂಕ್ತವಾಗಿದೆ. ಉತ್ತಮ ಇಳುವರಿ ಕೊಡಬಲ್ಲ ಮಾರುಕಟ್ಟೆವುಳ್ಳ ಸಸಿಗಳನ್ನು ಮಾತ್ರ ಬೆಳೆಯುವಂತೆ ರೈತರಿಗೆ ತಿಳಿಸುತ್ತೇವೆ. ಗದಗ ಜಿಲ್ಲೆಯ ರೈತರು ಹೆಚ್ಚಾಗಿ ಈ ಸಸಿಗಳನ್ನು ಬೆಳೆಯುತ್ತಾರೆ’ ಎಂದು  ವಿ.ವಿಯ ತೋಟಗಾರಿಕೆ ವಿಭಾಗದ ಪ್ರಾಧ್ಯಾಪಕ ವೇಣುಗೋಪಾಲ ತಿಳಿಸಿದರು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.