ADVERTISEMENT

ಹಾಲಿನ ಪುಡಿ, ರಾಗಿಮಾಲ್ಟ್‌ ಮಾರಾಟ ಪ್ರಕರಣ: 60 ಜನ ಮುಖ್ಯ ಶಿಕ್ಷಕರ ವಿಚಾರಣೆ ಆರಂಭ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 7:10 IST
Last Updated 8 ಜೂನ್ 2025, 7:10 IST
   

ಬಾಗಲಕೋಟೆ: ರಾಜ್ಯ ಸರ್ಕಾರದ ಅಕ್ಷರ ದಾಸೋಹ ಯೋಜನೆಯಡಿ ಶಾಲಾ ಮಕ್ಕಳಿಗೆ ಪೂರೈಕೆ ಮಾಡಿದ್ದ ಹಾಲಿನಪುಡಿ ಹಾಗೂ ರಾಗಿಮಾಲ್ಟ್ ಅನ್ನು ಅಕ್ರಮವಾಗಿ ಮಾರಾಟ ಮಾಡಿರುವ  ಆರೋಪ‍ದ ಪ್ರಕರಣದಲ್ಲಿ ಜಿಲ್ಲೆಯಬೀಳಗಿ, ಹುನಗುಂದ, ಬಾದಾಮಿ ತಾಲ್ಲೂಕಿನ 60 ಪ್ರಾಥಮಿಕ, ಪ್ರೌಢಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ವಿಚಾರಣೆ ಮಾಡಲು ವಿಚಾರಣಾಧಿಕಾರಿಗಳ ನೇಮಕ ಮಾಡಲಾಗಿದೆ.

ಹಾಲಿನಪುಡಿ, ರಾಗಿಮಾಲ್ಟ್ ಹಾಗೂ ಇನ್ನಿತರ ಪದಾರ್ಥಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿರುವ ಹಿನ್ನಲೆಯಲ್ಲಿ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಎಲ್ಲ ಶಿಕ್ಷಕರು ಆರೋಪವನ್ನು ನಿರಾಕರಿಸಿದ ಹಿನ್ನಲೆಯಲ್ಲಿ ಪ್ರಕರಣ ಸತ್ಯಾಸತ್ಯತೆ ತಿಳಿದುಕೊಳ್ಳಲು ವಿಚಾರಣೆ ಸೂಕ್ತವೆಂದು ವಿಚಾರಣೆ ಆರಂಭಿಸಲಾಗಿದೆ.

ವಿಚಾರಣಾಧಿಕಾರಿಗಳು ಪ್ರತಿ ಆರೋಪದ ಬಗ್ಗೆ ನಿಯಮಾನುಸಾರ ವಿಚಾರಣೆ ನಡೆಸಬೇಕು. ಸ್ಪಷ್ಟ ನಿರ್ಣಯಗಳನ್ನೊಳಗೊಂಡ ವಿಚಾರಣಾ ವರದಿಯನ್ನು ಆದೇಶ ತಲುಪಿದ ಎರಡು ತಿಂಗಳಲ್ಲಿ ಶಿಸ್ತು ಪ್ರಾಧಿಕಾರವಾದ ಉಪನಿರ್ದೇಶಕ ಕಚೇರಿಗೆ ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್‌.ಜಿ. ಮಿರ್ಜಿ ಆದೇಶಿಸಿದ್ದಾರೆ.

ADVERTISEMENT

ಏನಿದು ಪ್ರಕರಣ...?


2024 ಅಕ್ಟೋಬರ್ ತಿಂಗಳಲ್ಲಿ ಬಾದಾಮಿ ತಾಲ್ಲೂಕಿನ ಸೂಳಿಕೇರಿ ಗ್ರಾಮದ ಗೋದಾಮವೊಂದರಲ್ಲಿ ₹18 ಲಕ್ಷ ಮೌಲ್ಯದ 4.5 ಮೆಟ್ರಿಕ್ ಟನ್ ಹಾಲಿನ ಪುಡಿ ಹಾಗೂ ಕೆಲ ರಾಗಿಮಾಲ್ಟ್ ಪ್ಯಾಕೇಟ್‍ಗಳನ್ನು ಬಾಗಲಕೋಟೆಯ ಸಿಇಎನ್‌ ಪೊಲೀಸ್‌ ಠಾಣೆಯ ಪೋಲಿಸರು ವಶಪಡಿಸಿಕೊಂಡಿದ್ದರು.

ಆರೋಪಿ ಸಿದ್ದಪ್ಪ ಕಿತ್ತಲಿ ಎಂಬುವವರನ್ನು ಬಂಧಿಸಿದರು. ‘ಸಿದ್ದಪ್ಪ ಗುತ್ತಿಗೆದಾರರಿಂದ ಸಬ್‌ಲೀಸ್‌ ಪಡೆದುಕೊಂಡು ಹಾಲಿನಪುಡಿಯನ್ನು ಶಾಲೆಗಳಿಗೆ ಸರಬರಾಜು ಮಾಡುತ್ತಿದ್ದ. ಇದೇ ವೇಳೆ ಶಾಲೆಯಿಂದಲೇ ಹಾಲಿನ ಪುಡಿ, ರಾಗಿಮಾಲ್ಟ್‌ ಅನ್ನು ಖರೀದಿಸುತ್ತಿದ್ದಾಗಿ’ ಪೊಲೀಸರ ಮುಂದೆ ಹೇಳಿಕೆ ನೀಡಿದ್ದನು.

ಪೊಲೀಸ್‌ ಇಲಾಖೆ ನಿರ್ಲಕ್ಷ್ಯ

ಬಾಗಲಕೋಟೆ: ಜಿಲ್ಲೆಯ ಹಲವು ಶಾಲೆಗಳ ಮುಖ್ಯ ಶಿಕ್ಷಕರು ಹಾಲಿನ ಪುಡಿ, ರಾಗಿಮಾಲ್ಟ್‌ ಮಾರಾಟ ಮಾಡಿದ್ದಕ್ಕೆ ಆರೋಪಿಯಿಂದ ಹಣವನ್ನು ‘ಫೋನ್‌ ಪೇ’ ಮೂಲಕ ಪಡೆದಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.

ದಾಳಿ ನಂತರ ಆರೋಪಿ ಹೇಳಿಕೆ ಆಧರಿಸಿ 127 ಶಿಕ್ಷಕರಿಗೆ ಪೊಲೀಸರು ನೋಟಿಸ್‌ ಜಾರಿಗೊಳಿಸಿದ್ದರು. ಶಿಕ್ಷಕರಿಂದ ವಿವರಣೆ ಪಡೆದ ನಂತರ ನ್ಯಾಯಾಲಯಕ್ಕೆ ಕೇವಲ ನಾಲ್ವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದೆ. ಶಾಲೆಗಳಿಂದ ಮಾರಾಟವಾಗದಿದ್ದರೆ, ಆರೋಪಿ ಬಳಿ ಅಷ್ಟೊಂದು ದೊಡ್ಡ ಪ್ರಮಾಣದ ಹಾಲಿನಪುಡಿ ಎಲ್ಲಿಂದ ಬರಲು ಸಾಧ್ಯ ಎಂಬ ಪ್ರಶ್ನೆಗೂ ಉತ್ತರ ಹುಡುಕುವ ಗೋಜಿಗೆ ಹೋಗಿಲ್ಲ.

ಮುಖ್ಯಶಿಕ್ಷಕ ಅಮಾನತು

ಹಾಲಿನಪುಡಿ ಮಾರಾಟ ಪ್ರಕರಣದಲ್ಲಿ ಈಗಾಗಲೇ ಬೀಳಗಿ ತಾಲ್ಲೂಕಿನ ಪ್ರಾಥಮಿಕ ಶಾಲೆಯೊಂದರ ಮುಖ್ಯಶಿಕ್ಷಕರೊಬ್ಬರನ್ನು  ಅಮಾನತು ಮಾಡಲಾಗಿದೆ.

ಆ ಮುಖ್ಯ ಶಿಕ್ಷಕರು ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಇಲಾಖೆಯು ಅವರಿಂದ ₹40 ಸಾವಿರ ದಂಡ ವಸೂಲಿ ಮಾಡಿದೆ. ಹಲವು ಶಿಕ್ಷಕರು ದಾಖಲೆಗಳನ್ನು ಒದಗಿಸಲು ವಿಫಲರಾಗಿರುವ ಹಿನ್ನಲೆಯಲ್ಲಿ ವಿಚಾರಣೆಗೆ ಇಲಾಖೆ ಮುಂದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.