
ಬಾಗಲಕೋಟೆ: ‘ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ರೈತರ ನಡುವಿನ ಸಂಬಂಧ ಗಟ್ಟಿಗೊಳ್ಳಬೇಕಾದರೆ ವಿಶ್ವವಿದ್ಯಾಲಯದಲ್ಲಿ ರೈತ ಸಂಪರ್ಕ ಕೇಂದ್ರ ತೆರೆಯುವುದು ಅಗತ್ಯವಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೂಚಿಸಿದರು.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಭಾನುವಾರ ಆರಂಭವಾದ ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ರೈತರಿಗೆ ಬೇಕಾಗುವ ಹೊಸ ಸಂಶೋಧನೆ, ತಳಿಗಳ ಅಭಿವೃದ್ಧಿ ಹಾಗೂ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಸೇರಿದಂತೆ ಮಾರುಕಟ್ಟೆಯ ಮಾಹಿತಿ ನೀಡುವ ಕೆಲಸ ಆಗಬೇಕು’ ಎಂದರು.
‘ವಿಶ್ವವಿದ್ಯಾಲಯದ ವಿಜ್ಞಾನಗಳಿಗಿಂತ ಶಿಕ್ಷಣ ಪಡೆಯದ ರೈತರು ಕೃಷಿ, ತೋಟಗಾರಿಕೆಯಲ್ಲಿ ಹೆಚ್ಚಿನ ಜ್ಞಾನ ಹೊಂದಿದ್ದು, ಅದರಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ. ಅವರ ಜ್ಞಾನವನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಲ್ಲಿ ಹಂಚಿಕೊಳ್ಳುವ ಅವಕಾಶ ಕಲ್ಪಿಸಬೇಕಿದೆ. ಸವಳು–ಜವಳು ಭೂಮಿಯಲ್ಲಿ ಯಾವ ಬೆಳೆ ಬೆಳೆಯಬೇಕೆಂಬುದನ್ನು ರೈತರಿಗೆ ತಿಳಿಸಿಕೊಡುವ ಕೆಲಸವಾಗಬೇಕು’ ಎಂದರು.
‘ಅಲ್ಲದೇ ಮುಖ್ಯವಾಗಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯ, ಕೃಷಿ, ತೋಟಗಾರಿಕ ಹಾಗೂ ಕೃಷಿ ಮಾರುಕಟ್ಟೆ ಕೂಡಿಕೊಂಡು ಮಾರುಕಟ್ಟೆ ಮಾಹಿತಿ ನೀಡುವ ಕಾರ್ಯವಾಗಬೇಕು’ ಎಂದು ತಿಳಿಸಿದರು.
ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ‘ತೋಟಗಾರಿಕೆ ವಿ.ವಿಗೆ ಬಂದಾಗ ಬೆಂಗಳೂರಿನ ಲಾಲ್‍ಬಾಗ್‌ಗೆ ಹೋದಂತಹ ನೆನಪು ಬರುತ್ತದೆ. ಲಾಲ್‍ಬಾಗ್ ಹಾಗೆ ಹಲವು ಬಗೆಯ ಹೂವುಗಳನ್ನು ಕಾಣುತ್ತಿದ್ದೇವೆ. ಕೇಂದ್ರದಿಂದ ಅವಶ್ಯಕ ಯೋಜನೆಗಳನ್ನು ವಿ.ವಿಗೆ ತರುವೆ. ರೈತರು ಆರ್ಥಿಕವಾಗಿ ಸಬಲರಾದಾಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ‘ಬಾಗಲಕೋಟೆ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಬೈಕಾದ ನೈಸರ್ಗಿಕ ಅನುಕೂಲವಿದೆ. ವಿ.ವಿಯಲ್ಲಿನ ಸಂಶೋಧನೆಯನ್ನು ರೈತರಿಗೆ ತಲುಪಿಸುವ ಕೆಲಸ ಆಗಬೇಕು. ಈರುಳ್ಳಿ ಉತ್ತಮ ಬೆಲೆ ಸಿಗದೇ ಕಣ್ಣೀರು ಹಾಕುವಂತಾಯಿತು. ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತಾಗಬೇಕು’ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ‘ಕೃಷಿ ಮತ್ತು ತೋಟಗಾರಿಕೆಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಯಂತ್ರೋಪಕರಣ ಖರೀದಿಸಲು ಸರ್ಕಾರ ಸಹಾಯಧನ ಮಾಡುತ್ತಿದೆ. ಡ್ರೋನ್ ಬಾಡಿಗೆಗೂ ಸಿಗುತ್ತದೆ. ತಂತ್ರಜ್ಞಾನ ಬಳಸಿಕೊಳ್ಳಬೇಕು’ ಎಂದರು.
ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತನಾಡಿ, ‘ರೈತರು ಸಮಾಜದಲ್ಲಿ ಧೈರ್ಯವಾಗಿ ಜೀವನ ನಡೆಸುವಂತಾಗಬೇಕು. ಕೃಷಿ ಮತ್ತು ತೋಟಗಾರಿಕೆ ಬೆಳೆಯಲ್ಲಿ ಲಾಭವನ್ನು ಯಾವ ತೀರಿ ಪಡೆಯಬೇಕು ಎಂಬುದು ಮುಖ್ಯವಾಗುತ್ತದೆ’ ಎಂದು ಹೇಳಿದರು.
ಬೆಳಗಾವಿ ವಿಭಾಗದ ಆಯುಕ್ತರಾದ ಜಾನಕಿ ಕೆ.ಎಂ, ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿದರು. ಚಿತ್ತರಗಿ-ಇಳಕಲ್ ವಿಜಯ ಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ತೋವಿವಿ ಕುಲಪತಿ ವಿಷ್ಣುವರ್ಧನ, ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ತೋವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಎಸ್.ಎನ್. ವಾಸುದೇವನ್, ಎಚ್.ಜಿ.ಮನೋಹರ, ಅನಿತಾ ಕೆ.ವಿ, ತಮ್ಮಯ್ಯ ಎನ್, ಬಾಲಾಜಿ ಕುಲಕರ್ಣಿ ಹಾಗೂ ಜನಾರ್ಧನ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.