ತೇರದಾಳ: ತಾಲ್ಲೂಕಿನ ತಮದಡ್ಡಿಯಲ್ಲಿ ದಿನೇ ದಿನೇ ಕೃಷ್ಣಾ ನದಿಯ ನೀರು ಹೆಚ್ಚಾಗುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮಳೆ ಕಡಿಮೆಯಾಗಿರುವ ಕುರಿತು ಸಮಾಧಾನಗೊಳ್ಳುವ ಸಂತ್ರಸ್ತರು, ಗ್ರಾಮದಲ್ಲಿ ಮಾತ್ರ ಅಪಾಯದ ಮಟ್ಟ ಮೀರುತ್ತಿರುವ ನೀರನ್ನು ಕಂಡು ಗಾಬರಿಗೊಳ್ಳುತ್ತಿದ್ದಾರೆ.
ಗ್ರಾಮವನ್ನು 2012ರಲ್ಲಿ ಹಿಪ್ಪರಗಿ ಬ್ಯಾರೇಜ್ ಹಿನ್ನೀರಿನ ಮುಳುಗಡೆ ಗ್ರಾಮವೆಂದು ಸರ್ಕಾರ ಘೋಷಿಸಿದ್ದು, ಅವರಿಗೆ ಪುನರ್ವಸತಿ ಕಲ್ಪಿಸಿಕೊಡುವ ಜಾಗದ ವಿವಾದ ಉಚ್ಛ ನ್ಯಾಯಾಲಯದಲ್ಲಿದೆ. ಅದನ್ನು ಬಗೆಹರಿಸಿ ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲು ಪ್ರಯತ್ನಿಸಿ ಎಂದು ಮಂಗಳವಾರ ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಬಂದಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕೇಳಬೇಕೆಂದು ಸಂತ್ರಸ್ತರು ಕಾದಿದ್ದರು. ಆದರೆ ತಾಲ್ಲೂಕಿನ ತಮದಡ್ಡಿ ಹಾಗೂ ಹಳಿಂಗಳಿಗೆ ಸಚಿವರು ಭೇಟಿ ನೀಡದ್ದರಿಂದ ಅವರು ಅಸಮಾಧಾನಗೊಂಡರು.
ಗ್ರಾಮ ಪಂಚಾಯ್ತಿ ಮುಂಭಾಗದಿಂದ ನದಿಯತ್ತ ತೆರಳಲು ಇರುವ ರಸ್ತೆ ಮಂಗಳವಾರ ಜಲಾವೃತವಾಗಿದೆ. ಒಂದು ಅಡಿಯಷ್ಟು ನೀರು ಹೆಚ್ಚಾಗಿದೆ. ಅಲ್ಲಿನ ದುರ್ಗಾದೇವಿ ದೇವಸ್ಥಾನ ಕೂಡ ಜಲಾವೃತವಾಗಿದೆ. ನದಿ ಪಾತ್ರದ ಬಹುತೇಕ ಜಾನುವಾರುಗಳನ್ನು ಸ್ಥಳಾಂತರಿಸಿದ್ದು ಅವರು ತೇರದಾಳ ರಸ್ತೆ ಬದಿ ಅವುಗಳನ್ನು ಬಯಲಿನಲ್ಲಿ ಕಟ್ಟಿದ್ದಾರೆ. ಆದರೆ ಇಲ್ಲಿಯವರೆಗೆ ಮೇವಿನ ಪೂರೈಕೆ ಮಾಡಿಲ್ಲ. ಇಲ್ಲಿಯವರೆಗೆ 1000 ಸಾವಿರ ಎಕರೆ ಬೆಳೆ ಜಲಾವೃತವಾಗಿದೆ ಎಂದು ಸಂತ್ರಸ್ತರು ದೂರಿದರು.
‘ನದಿ ದಂಡೆಯ ಸಾಕಷ್ಟು ರೈತರ ಪ್ರಮುಖ ಆದಾಯದ ಮೂಲ ಹೈನುಗಾರಿಕೆ. ಹಾಗಾಗಿ ಜಾನುವಾರುಗಳಿಗೆ ಸುರಕ್ಷಿತ ಶೆಡ್ ನಿರ್ಮಾಣ ಮಾಡಿ ಸುರಕ್ಷಿತವಾಗಿಟ್ಟಿರುತ್ತೇವೆ. ಪ್ರವಾಹ ಬಂದಾಗ ಅವುಗಳನ್ನು ಬಯಲಿಗೆ ಕಟ್ಟುವುದರಿಂದ ಹಾಲಿನ ಇಳುವರಿಯಲ್ಲಿ ಗಣನೀಯವಾಗಿ ಇಳಿಕೆಯಾಗುತ್ತದೆ. ಮತ್ತು ಸೊಳ್ಳೆ, ನೋಣ ಕಚ್ಚಿ ಅವುಗಳಿಗೆ ಮೈ ತುಂಬ ಚಿಕ್ಕ ಗಂಟುಗಳಾಗುತ್ತಿವೆ. ಇದೆಲ್ಲದರ ಮಧ್ಯೆ ಸರ್ಕಾರ ಸಂತ್ರಸ್ತರ ಜಾನುವಾರುಗಳಿಗೆ ಮೇವು ಪೂರೈಕೆ ಮಾಡಿಲ್ಲ’ ಎಂದು ಸಂತ್ರಸ್ತ ನಂದೆಪ್ಪ ನಂದೆಪ್ಪನವರ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.