ADVERTISEMENT

ಶಿಕ್ಷಕರಿಗೆ ಬಡ್ತಿ: ವ್ಯಾಪಕ ಅವ್ಯವಹಾರ

ಜಿಲ್ಲಾ ಪಂಚಾಯ್ತಿ ಮಾಸಿಕ ಕೆಡಿಪಿ ಸಭೆಯಲ್ಲಿ ಮಹಾಂತೇಶ ಉದಪುಡಿ ಆರೋಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2020, 15:08 IST
Last Updated 13 ಅಕ್ಟೋಬರ್ 2020, 15:08 IST
ಬಾಗಲಕೋಟೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ ಮಾಸಿಕ ಕೆಡಿಪಿ ಸಭೆ ನಡೆಯಿತು
ಬಾಗಲಕೋಟೆಯಲ್ಲಿ ಸೋಮವಾರ ಜಿಲ್ಲಾ ಪಂಚಾಯ್ತಿ ಮಾಸಿಕ ಕೆಡಿಪಿ ಸಭೆ ನಡೆಯಿತು   

ಬಾಗಲಕೋಟೆ: ‘ಜಿಲ್ಲೆಯಲ್ಲಿ ಶಿಕ್ಷಕರಿಗೆ ಬಡ್ತಿ ನೀಡುವ ವಿಚಾರದಲ್ಲಿನಿಯಮಾವಳಿ ಗಾಳಿಗೆ ತೂರಿ ವ್ಯಾಪಕ ಅವ್ಯವಹಾರ ನಡೆಸಲಾಗಿದೆ. ಹಿರಿಯ ಅಧಿಕಾರಿಗಳ ಕುಮ್ಮಕ್ಕಿನಿಂದಲೇ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮಹಾಂತೇಶ ಉದಪುಡಿ ಆರೋಪ ಮಾಡಿದರು.

ನಗರದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯ್ತಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೇ ಯಾವುದೇ ಕೆಲಸ ಆಗುವುದಿಲ್ಲ. ಶಿಕ್ಷಕರು ಬಡ್ತಿ ಪಡೆಯಲು ₹50 ಸಾವಿರ ಲಂಚ ಕೊಡಬೇಕು.
ಹೊಸ ಶಾಲೆಗೆ ಪರವಾನಗಿ ಪಡೆಯಲು ₹1 ಲಕ್ಷ ಕೊಡಬೇಕಿದೆ. ಮಧ್ಯವರ್ತಿಗಳ ಮೂಲಕ ದುಡ್ಡು ಮಾಡಲಾಗುತ್ತಿದೆ. ಒಟ್ಟಾರೆ ಶಿಕ್ಷಣ ಇಲಾಖೆಯೇ ಹಳ್ಳ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಇಲಾಖೆಯ ಮಾನದಂಡಗಳನ್ನು ಗಾಳಿಗೆ ತೂರಿ ಶಾಲೆಗೆ ಪರವಾನಗಿ ನೀಡಿರುವುದು ಹಾಗೂ ಬಡ್ತಿ ನೀಡುವಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ಅದಕ್ಕೆ ಬೇಕಾದ ಸಾಕ್ಷ್ಯಗಳನ್ನು ನಾನು ಕೊಡಲಿದ್ದೇನೆ. ನಾನು ಮಾಡುತ್ತಿರುವ ಆರೋಪ ಸಾಬೀತಾದರೆ ಡಿಡಿಪಿಐ ರಾಜೀನಾಮೆ ಕೊಡುವರಾ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಹಾಜರಿದ್ದ ಡಿಡಿಪಿಐ ಶ್ರೀಶೈಲ ಬಿರಾದಾರ ಅದಕ್ಕೆ ಪ್ರತಿಕ್ರಿಯಿಸಿ, ನಾನೇಕೆ ರಾಜೀನಾಮೆ ಕೊಡಲಿ. ತನಿಖೆ ಮಾಡಿ ಎಂದು ಹೇಳಿದರು. ಅವ್ಯವಹಾರದ ತನಿಖೆಗೆ ಸಮಿತಿಯೊಂದನ್ನು ರಚಿಸಿ ಎಂದು ಉದಪುಡಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ ಅವರನ್ನು ಈ ವೇಳೆ ಒತ್ತಾಯಿಸಿದರು.

ಇಳಕಲ್ ನಗರ ಹಾಗೂ ಅನಗವಾಡಿ ಗ್ರಾಮದಲ್ಲಿ ಆಯುಷ್ ಇಲಾಖೆಯ ಆಸ್ಪತ್ರೆ ನಿರ್ಮಾಣ ಕಾಮಗಾರಿಯಲ್ಲೂ ಭ್ರಷ್ಟಾಚಾರ ನಡೆದಿದೆ. ವೈದ್ಯರೇ ಕಟ್ಟಡದ ಸುಣ್ಣ–ಬಣ್ಣ ಮಾಡುವ ಹೊಣೆ ಹೊತ್ತಿದ್ದಾರೆ. ಅದರ ಬಗ್ಗೆಯೂ ತನಿಖೆಯಾಗಲಿ ಎಂದು ಉದಪುಡಿ ಆಗ್ರಹಿಸಿದರು.

ಸಭೆಯಲ್ಲಿ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ಖೋತ, ಜಿಲ್ಲಾ ಪಂಚಾಯ್ತಿ ಸಿಇಒ ಟಿ.ಭೂಬಾಲನ್, ಪ್ರೊಬೆಷನರಿ ಐಎಎಸ್ ಅಧಿಕಾರಿ ಯಶವಂತ ಗುರುಕಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.