ADVERTISEMENT

ಬಾದಾಮಿ: ಮಣ್ಣಿನ ಮಡಕೆಗಳಿಗೆ ಭಾರಿ ಬೇಡಿಕೆ, ಭರ್ಜರಿ ವ್ಯಾಪಾರ ವಹಿವಾಟು

ಎಸ್.ಎಂ.ಹಿರೇಮಠ
Published 26 ಫೆಬ್ರುವರಿ 2024, 6:18 IST
Last Updated 26 ಫೆಬ್ರುವರಿ 2024, 6:18 IST
ಬಾದಾಮಿ ಮುಖ್ಯ ರಸ್ತೆ ಪಕ್ಕದಲ್ಲಿ ಮಣ್ಣಿನ ಕೊಡಗಳ ವ್ಯಾಪಾರ ವಹಿವಾಟು ನಡೆಯಿತು
ಬಾದಾಮಿ ಮುಖ್ಯ ರಸ್ತೆ ಪಕ್ಕದಲ್ಲಿ ಮಣ್ಣಿನ ಕೊಡಗಳ ವ್ಯಾಪಾರ ವಹಿವಾಟು ನಡೆಯಿತು   

ಬಾದಾಮಿ: ಫೆಬ್ರುವರಿ ಆರಂಭದಲ್ಲೇ ಬೇಸಿಗೆಯ ಉರಿಬಿಸಿಲಿಗೆ ಜನರು ನಿಟ್ಟುಸಿರು ಬಿಡುವಂತಾಗಿದೆ. ಈ ಬಾರಿ ಬಿಸಿಲಿನ ತಾಪದಿಂದ ನೀರನ್ನು ತಂಪಾಗಿರಿಸಲು ಜನರು ಮಣ್ಣಿನ ಪಾತ್ರೆಗಳ ಮೊರೆ ಹೋಗಿದ್ದಾರೆ. ಪಟ್ಟಣದ ಅಂಚೆ ಇಲಾಖೆ ಎದುರಿಗೆ ಮಣ್ಣಿನ ಮಡಕೆಗಳ ವ್ಯಾಪಾರ ವಹಿವಾಟು ಕಂಡುಬಂದಿತು. 

ಹಿಂದಿನ ವರ್ಷ ಮಾರ್ಚ್‌ನಲ್ಲಿ ಬೇಸಿಗೆಯ ಉರಿ ಆರಂಭವಾದರೆ ಈ ಬಾರಿ ಮಳೆಯ ಕೊರತೆಯಿಂದ ತಿಂಗಳು ಮುಂಚೆಯೇ ಬಿಸಿಲಿನ ಧಗೆ ಶುರುವಾಗಿದೆ. ನಿತ್ಯ 35- 37 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದ ದಾಖಲೆ ಕಂಡು ಬರುತ್ತಿದೆ. ಮುಂಬರುವ ಮೂರು ತಿಂಗಳು ಬಿಸಿಲು ಇನ್ನೂ ಹೆಚ್ಚಾಗಬಹುದು ಎಂದು ಜನರು ಆತಂಕದಲ್ಲಿದ್ದಾರೆ. 12 ಗಂಟೆ ನಂತರ ರಸ್ತೆಯಲ್ಲಿ ಜನರ ಸಂಚಾರ ವಿರಳವಾಗಿದೆ. ಕೆಲವರು ತಂಪಾದ ಪಾನೀಯ ಅಂಗಡಿಗಳಿಗೆ ಮೊರೆ ಹೋಗುತ್ತಿದ್ದಾರೆ.

ಬೇಸಿಗೆಯಲ್ಲಿ ಮನೆಯಲ್ಲಿ ನೀರು ತಂಪಾಗಿರಿಸಲು ಮಾರುಕಟ್ಟೆಯಲ್ಲಿ ಮಣ್ಣಿನ ವಸ್ತುಗಳ ಮಾರಾಟ ಆರಂಭವಾಗಿದೆ.  ಬಡವರ ಫ್ರಿಡ್ಜ್ ’ ಎಂದೇ ಪ್ರಸಿದ್ಧಿಯಾದ ಮಣ್ಣಿನ ಮಡಕೆ, ಹರವೆ ಮತ್ತು ಕೆಂಪು ಮಣ್ಣಿನ ಕೊಡಗಳು ಮಾರಾಟ ನಡೆದಿದೆ. ಮನೆಯಲ್ಲಿ ನೀರನ್ನು ತಂಪಾಗಿರಿಸಲು ಕೆಲವರು ಮಣ್ಣಿನ ಪಾತ್ರೆಗಳ ಖರೀದಿಗೆ ಮೊರೆಹೋಗಿದ್ದಾರೆ.

ADVERTISEMENT

‘ಹಿಂದಕ ತಾಮ್ರದ ಹಂಡೆ, ಕೊಡ ಮತ್ತ ಮಣ್ಣಿನ ಕೊಡ ಇರತಿದ್ದವು. ನೀರು ತಂಪಾಗಿರತಿತ್ತು. ಈಗ ಪ್ಲಾಸ್ಟಿಕ್ ಕೊಡ ಬಂದಾವು. ಬ್ಯಾಸಿಗ್ಗೆ ನೀರು ಕಾಯತಾವು. ಸಿರಿವಂತರ ಮನ್ಯಾಗ ನೀರ ತಂಪಾಗೂವು ಇರತಾವರಿ. ಬಡವರಿಗೆ ಖರೀದಿ ಮಾಡಾಕ ಆಗೂದಿಲ್ಲ. ಮಣ್ಣಿನ ಹರವಿ, ಕೊಡ ಇವ.. ನಮ್ಮ ಪ್ರಿಜ್ಜರಿ’ ಎಂದು ಮುತ್ತಲಗೇರಿ ಗ್ರಾಮದ ಕರಿಯಮ್ಮ ಹೇಳಿದರು.

‘ಕಪ್ಪು ಮಣ್ಣಿನ ಹರವಿ ₹150 ರಿಂದ 200ಕ್ಕ ಮಾರತೀವಿ. ಕೆಂಪು ಮಣ್ಣಿನ ಕೊಡ ₹250 ರಿಂದ 400 ತನಕ ಮಾರಾಟ ಮಾಡತೀವಿ. ಸ್ವಲ್ಪ ಹೆಚ್ಚು ಕಡಿಮಿ ನೋಡಿ ಮಾರಾಟ ಮಾಡತೀವಿರಿ’ ಎಂದು ಜಾಲಿಹಾಳ ಗ್ರಾಮದ ರತ್ನಮ್ಮ ಕುಂಬಾರ ಹೇಳಿದರು.

‘ಕೆರಿ ಮಣ್ಣ ತಂದು ಸಣ್ಣಗ ಕಲಸತೀವಿರಿ. ತಿಗರಿ ಮೂಲಕ ಸಣ್ಣವು, ದೊಡ್ಡವು ಗಡಗಿ, ಹರವಿ, ಕೊಡ, ಸಣ್ಣ ಬಿಂದಗಿ, ತತ್ರಾಣಿ ಮಾಡ್ತೀವಿ. ಇದರ ಜೊತೆಗೆ ಒಲೆ, ಮುಚ್ಚಳ, ಪಣತಿ ಮಾಡತೀವಿ. ಆದರ ಈಗ ಮಣ್ಣಿನ ವಸ್ತು ತೊಗೊಳ್ಳು ಮಂದಿ ಕಡಿಮಿ ಆಗೈತಿ. ಈ ಉದ್ಯೋಗ ಬಿಟ್ಟು ನಮಗ ಬ್ಯಾರೆ ಉದ್ಯೋಗ ಗೊತ್ತಿಲ್ಲ’ ಎಂದರು.

‘ಅಡುಗೆ ಮಾಡಲು ಹೊಸ ಮನೆಗೆ ಮುಹೂರ್ತ ನೋಡಿ ಜೋಡು ಒಲೆಗಳನ್ನು ಹಾಕಿ ಪೂಜೆ ಮಾಡುತ್ತಿದ್ದರು. ದೀಪಾವಳಿ, ಯುಗಾದಿ ಪಾಡ್ಯೆಗೆ ನೂರಾರು ಒಲೆಗಳ ಮಾರಾಟವಾಗುತ್ತಿದ್ದವು. ಈಗ ಹೊಸ ಮನೆಗಳಿಗೆ ಗ್ಯಾಸ್ ಕಟ್ಟೆ ನಿರ್ಮಿಸುತ್ತಾರೆ. ಒಲೆಗಳ ಮಾರಾಟ ಕಡಿಮೆಯಾಗಿದೆ’ ಎಂದು ಮಹಾಂತೇಶ ಕುಂಬಾರ ಹೇಳಿದರು.

‘ಮಗ ಮಹಾಂತೇಶ ಡಿಗ್ರಿ ಓದ್ಯಾನರಿ. ಅವನಿಗೂ ಉದ್ಯೋಗ ಇಲ್ಲ. ನನ್ನ ಸಹಾಯಕ್ಕೆ ಬರತಾನ. ಹೊಟ್ಟಿ ಬಟ್ಟೀಗೆ ಕೊರತಿ ಇಲ್ಲರಿ. ಕುಂಬಾರಿಕೆ ಬದುಕು ತ್ರಾಸ ಇದ್ದರೂ ಇದ್ದುದರಲ್ಲಿಯೇ ಜೀವನಾ ಸಾಗೈತ್ರಿ ’ ಎಂದು ರತ್ನಮ್ಮ ಕುಂಬಾರ ಸಂತಸವನ್ನು ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.