ಬಾಗಲಕೋಟೆ: ‘ಮೈಸೂರಿನ ಮುಡಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ನಿವೇಶನ ಹಂಚಿಕೆ ಮಾಡಿರುವ ಪ್ರಕರಣದ ತನಿಖೆಯಾಗಿ, ಸತ್ಯ ಹೊರಬರುವವರೆಗೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಆಗ್ರಹಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಪರ ಎಂದು ಹೇಳಿಕೊಂಡು ಬಂದಿದ್ದಾರೆ. ಹಾಗಿದ್ದರೆ, ಪ್ರಾಮಾಣಿಕರಾಗಿದ್ದರೆ ರಾಜೀನಾಮೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಮುಡಾ ನಿವೇಶನ ಹಂಚಿಕೆಯಲ್ಲಿ ₹5 ಸಾವಿರ ಕೋಟಿ ಹಗರಣವಾಗಿದೆ. ಪ್ರತಿಭಟನೆ ಮಾಡುತ್ತಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆ ಮೂಲಕ ಪ್ರತಿಭಟನೆ ಹಕ್ಕನ್ನು ಕಾಂಗ್ರೆಸ್ ಸರ್ಕಾರ ಹತ್ತಿಕ್ಕುತ್ತಿದೆ’ ಎಂದು ಆರೋಪಿಸಿದರು.
‘ಮುಡಾ ಸ್ವಾಧೀನದಲ್ಲಿದ್ದಾಗಲೇ ಭೂಮಿಯನ್ನು ಸಿದ್ದರಾಮಯ್ಯ ಅವರ ಪತ್ನಿಯ ತಮ್ಮ ಖರೀದಿಸುತ್ತಾರೆ. ಅದನ್ನು ಸಿದ್ದರಾಮಯ್ಯ ಅವರ ಪತ್ನಿಗೆ ದಾನವಾಗಿ ನೀಡುತ್ತಾರೆ. ರಾಜಕೀಯ ಪ್ರಭಾವವಿಲ್ಲದೇ ಇದೆಲ್ಲ ಸಾಧ್ಯವಾಗುವುದಿಲ್ಲ. ಬಾದಾಮಿಯ ಶಾಸಕರಾಗಿದ್ದಾಗ ಅವರೆಷ್ಟು ಪ್ರಾಮಾಣಿಕರಾಗಿದ್ದರು ಎಂಬುದು ಗೊತ್ತಿದೆ’ ಎಂದು ವ್ಯಂಗ್ಯವಾಡಿದರು.
‘1992 ರಿಂದ 2004ರ ವರೆಗೆ ಮುಡಾ ನಿವೇಶನ ಮಾಡಿದರೂ ಇವರಿಗೆ ಗೊತ್ತಾಗುವುದಿಲ್ಲ ಎಂದರೆ ನಂಬಲು ಸಾಧ್ಯವೇ? ವಿಷಯ ಗೊತ್ತಿದ್ದರೂ ನಿವೇಶನ ಪಡೆಯುವ ಉದ್ದೇಶದಿಂದ ಸುಮ್ಮನಿದ್ದರು. 1991ರ ನಿಯಮದ ಪ್ರಕಾರ ಒಂದು ಎಕರೆ ಭೂಮಿಗೆ 60X40 ಅಳತೆಯ ಒಂದು ನಿವೇಶನ ನೀಡಬೇಕಿತ್ತು. ಆದರೆ, ಹೆಚ್ಚಿಗೆ ಪಡೆದುಕೊಂಡಿದ್ದು ಏಕೆ’ ಎಂದು ಪ್ರಶ್ನಿಸಿದರು.
‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಮುಖ್ಯಮಂತ್ರಿಯ ಗಮನಕ್ಕೆ ಬರದೇ ನಡೆದಿರುವುದಿಲ್ಲ. ದಿನಕ್ಕೊಂದು ಸತ್ಯ ಹೊರಬರುತ್ತಿದೆ. ರಾಜ್ಯ ಸರ್ಕಾರದ ಆಡಳಿತ ಹಳಿ ತಪ್ಪಿದೆ’ ಎಂದರು.
‘ಕೇಂದ್ರದ ವಿಕಸಿತ ಭಾರತ ಕಾರ್ಯಕ್ರಮಗಳಿಗೆ ರಾಜ್ಯದಿಂದ ಸಹಕಾರ ಸಿಗುತ್ತಿಲ್ಲ. ಅಧಿಕಾರ, ಮತಕ್ಕೆ ಮಾತ್ರ ಅವರ ಹೋರಾಟ ಸೀಮಿತವಾಗಿದೆ’ ಎಂದು ದೂರಿದರು.
ಮುಖಂಡರಾದ ರಾಜು ನಾಯ್ಕರ, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.