ADVERTISEMENT

ಮುಧೋಳ | ಕೃಷ್ಣಾ ಯೋಜನೆಗೆ ಹಣ ನೀಡದಿದ್ದರೆ ಹೋರಾಟ: ಸಂಸದ ಗೋವಿಂದ ಕಾರಜೋಳ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 13:23 IST
Last Updated 9 ಫೆಬ್ರುವರಿ 2025, 13:23 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಮುಧೋಳ: ‘ರಾಜ್ಯದಲ್ಲಿ ಕಾಂಗ್ರೆಸ್ ದುರಾಡಳಿತದಲ್ಲಿ ತೊಡಗಿದೆ. ಶಾಸಕರು, ಮುಖ್ಯಮಂತ್ರಿ ಸಲಹೆಗಾರರು ಬೆಸತ್ತು ಹೋಗಿದ್ದಾರೆ. ರಾಜ್ಯದಲ್ಲಿ ಒಂದೇ ಒಂದು ಅಭಿವೃದ್ಧಿ ಕಾರ್ಯಗಲು ಆರಂಭವಾಗಿಲ್ಲ. ಹಿಂದಿನ ಸರ್ಕಾರದ ಯೋಜನೆಗೆ ಹಣ ನೀಡದೇ ಕುಂಟುತ್ತಾ ಸಾಗುತ್ತಿವೆ’ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೈಕ್ರೋ ಫೈನಾಸ್ಸ್‌ ಕಿರುಕುಳದಿಂದ ಬಡವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಗುತ್ತಿಗೆದಾರರಿಗೆ ಹಣ ನೀಡದೇ ಸತಾಯಿಸುತ್ತಿರುವುದರಿಂದ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ಹಿಡಿದಿದ್ದಾರೆ. ಸಾರ್ವಜನಿಕರು ಸರ್ಕಾರದ ಧೋರಣೆಯಿಂದ ರೋಸಿ ಹೊಗಿದ್ದಾರೆ’ ಎಂದು ದೂರಿದರು.

‘ಕೃಷ್ಣಾ ಕಣಿವೆಯ ಎರಡನೇ ಹಂತದ ಯೋಜನೆಯಲ್ಲಿ ಒಂದು ಲಕ್ಷ ಎಕರೆ ಭೂಮಿಗೆ ಹಣ ನೀಡಬೇಕು. 20 ಗ್ರಾಮಗಳ ಸ್ಥಳಾಂತರಗೊಳಿಸಲು ಪರಿಹಾರ ನೀಡಬೇಕು. ಸರ್ಕಾರ ಕುಂಟುನೆಪ ಹೇಳಿ ದಿನದೂಡುತ್ತಿದೆ. ಬಾಗಲಕೋಟೆಯಲ್ಲಿ ನಡೆದ ಸಂತ್ರಸ್ತರ ಹೋರಾಟದಲ್ಲಿ ಸರ್ಕಾರ ಯಾವುದೇ ಸ್ಪಷ್ಟ ಭರವಸೆ ನೀಡದೇ ಸ್ವತಃ ಸಂತ್ರಸ್ತರಾದ ಮಾಜಿ ಸಚಿವ ಅಜಯಕುಮಾರ ಸರನಾಯಿಕ ಅವರಿಂದ ಮಾತನಾಡಿಸಿದರು. ಮುಖ್ಯಮಂತ್ರಿ ಹಾಗೂ ವಿಜಯಪುರ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಖಚಿತ ಭರವಸೆ ನೀಡಲಿಲ್ಲ’ ಎಂದು ಆರೋಪಿಸಿದರು.

ADVERTISEMENT

‘1964 ರಿಂದ 2023ರ ವರೆಗೆ ಯೋಜನೆಗೆ ಬಿಜೆಪಿ ಅವಧಿಯಲ್ಲಿ ನೀಡಿದ ಅನುದಾನ ಕಾಂಗ್ರಸ್ ಸರ್ಕಾರಗಳು ನೀಡುತ್ತಿಲ್ಲ. ಉತ್ತರ ಕರ್ನಾಟಕ ಹಾಗೂ ಕೃಷ್ಣಾ ಯೋಜನೆಯನ್ನು ಇದೇ ರೀತಿ ನಿರ್ಲಕ್ಷಿಸಿದರೆ ಸಹಿಸುವುದಿಲ್ಲ. 130 ಟಿಎಂಸಿ ನೀರು ಬಳಕೆ ಮಾಡಿ ₹15 ಲಕ್ಷ ಎಕರೆಗೆ ನೀರು ಹರಿಸಬೇಕು. ಸಮಾಧಾನದಿಂದ ಕಾಯ್ದಿದ್ದು ಸಾಕು ಇನ್ನೂ ಕಲವೇ ದಿನಗಳಲ್ಲಿ ಸಂತ್ರಸ್ತರ ಸಭೆ ಕರೆದು ಚರ್ಚಿಸಲಾಗುವುದು. ನಾನು ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೋರಾಟದ ರೂಪರೇಷ ಸಿದ್ಧಪಡಿಸುತ್ತೇವೆ’ ಎಂದು ಕಾರಜೋಳ ತಿಳಿಸಿದರು.

‘ರಾಜ್ಯದ ಗುತ್ತಿಗೆದಾರರನ್ನು ಬದುಕಿಸಲು ಸರ್ಕಾರ ಕೂಡಲೇ ₹50 ಸಾವಿರ ಕೋಟಿ ಬಿಡುಗಡೆ ಮಾಡಬೇಕು. ಶಾಸಕರು ಅನುದಾನಕ್ಕಾಗಿ ಪರದಾಡುತ್ತಿದ್ದಾರೆ. ಮುಖ್ಯಮಂತ್ರಿ ಅವರ ಒಡನಾಡಿ ಬಿ.ಆರ್.ಪಾಟೀಲ ಅವರು ಮುಖ್ಯಮಂತ್ರಿ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ’ ಎಂದರು.

‘ನಮ್ಮ ಅವಧಿಯಲ್ಲಿ ರನ್ನ ವೈಭವ ನಡೆಸಿದಾಗ ಹಾಗೂ 64ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದಾಗ ಯಾರಿಂದಲೂ ಹಣ ಪಡೆದಿಲ್ಲ. ಜನರಿಗೆ ಬೇಜಾರು ಆಗದಿರುವಂತೆ ರನ್ನ ಉತ್ಸವ ನಡೆಸುವುದು ಉತ್ತಮ. ದೆಹಲಿಯಲ್ಲಿ ಸುಳ್ಳು ಆಶ್ವಾಸನೆ ಕೊಟ್ಟು ಅಧಿಕಾರಕ್ಕೆ ಬಂದಿದ್ದ ಆಮ್ ಆದ್ಮಿ ಪಕ್ಷದ ಗತಿ ಕಾರ್ನಾಟಕ್ಕೂ ಬರಲಿದೆ’ ಎಂದರು.

ಬಿಜೆಪಿ ಅಧ್ಯಕ್ಷ ಸಂಗನಗೌಡ ಪಾಟೀಲ, ಮಾಜಿ ಅಧ್ಯಕ್ಷ ಕೆ.ಆರ್.ಮಾಚಪ್ಪನವರ, ಜಿಲ್ಲಾ ಕಾರ್ಯದರ್ಶಿ ಡಾ.ರವಿ ನಂದಗಾಂವಿ, ನಗರಸಭೆ ಮಾಜಿ ಅಧ್ಯಕ್ಷ ಗುರುಪಾದ ಕುಳಲಿ, ಸೋನಪ್ಪಿ ಕುಲಕರ್ಣಿ, ಸದಪ್ಪ ತೇಲಿ, ಹಣಮಂತ ತುಳಸಿಗೇರಿ, ರಾಜುಗೌಡ ಪಾಟೀಲ, ಅನಂತರಾವ ಘೋರ್ಪಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.