ADVERTISEMENT

ಮುಧೋಳ | ಅಗ್ನಿದುರಂತ ಹಾನಿಗೆ ಪರಿಹಾರ: ತನಿಖೆಗೆ ಆದೇಶಿಸಿದ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2025, 10:40 IST
Last Updated 14 ನವೆಂಬರ್ 2025, 10:40 IST
   

ಬಾಗಲಕೋಟೆ: ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಕಾರ್ಖಾನೆ ಬಳಿ ಗುರುವಾರ ಸಂಭವಿಸಿದ ಅಹಿತಕರ ಘಟನೆಯಲ್ಲಿ ಸಂಭವಿಸಿದ ಹಾನಿಗೆ ಸಾಧ್ಯವಿರುವ ಪರಿಹಾರ ನೀಡಲಾಗುವುದು ಹಾಗೂ ದುರಂತದ ಬಗ್ಗೆ ತನಿಖೆಗೆ ಆದೇಶ ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ಪ್ರಕಟಿಸಿದರು.

ದುರಂತದ ಸ್ಥಳಕ್ಕೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.‌ಬಿ. ತಿಮ್ಮಾಪುರ ಅವರೊಂದಿಗೆ ಭೇಟಿ ನೀಡಿ ದುರಂತದಲ್ಲಿ ಹಾನಿಗೀಡಾದ ಕಬ್ಬು, ಟ್ರ್ಯಾಕ್ಟರ್‌ಗಳು, ಬೈಕ್‌ಗಳನ್ನು ವೀಕ್ಷಣೆ ಮಾಡಿ ರೈತರ ಅಹವಾಲು ಆಲಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ‌ ಅವರು,

ADVERTISEMENT

ಉಪವಿಭಾಗಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಹಾನಿಯ ಪ್ರಮಾಣದ ಸಮೀಕ್ಷೆ ಆರಂಭಿಸಿದೆ. ಎಷ್ಟು ಪರಿಹಾರ ನೀಡಬೇಕು ಎಂಬ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಎಷ್ಟು ಸಾಧ್ಯವಿದೆಯೋ ಅಷ್ಟು ಪರಿಹಾರವನ್ನು ಸರ್ಕಾರದಿಂದ ಇಲ್ಲವೇ ಬೆಳಗಾವಿಯ ಎಸ್‌. ನಿಜಲಿಂಗಪ್ಪ ಸಂಸ್ಥೆಯಿಂದ ನೀಡಲಾಗುವುದು ಎಂದರು.

ದುಷ್ಕೃತ್ಯವನ್ನು ಖಂಡಿಸಿದ ಅವರು, ಘಟನೆಯ ಬಗ್ಗೆ ತನಿಖೆಗೆ ಆದೇಶ ಮಾಡಲಾಗಿದ್ದು, ತಪ್ಪಿತಸ್ಥರು ಯಾರೇ ಇರಲಿ, ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಸರ್ಕಾರ ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿದ್ದರಿಂದಲೇ ಈ ಹಂಗಾಮಿನಲ್ಲಿ ಇಳುವರಿ ಲೆಕ್ಕಾಚಾರ ಮಾಡದೆ ಪ್ರತಿ ಟನ್‌ ಕಬ್ಬಿಗೆ ಸರಾಸರಿ 200ರಿಂದ 250 ಹೆಚ್ಚುವರಿ ಕೊಡಿಸಲು ಸಫಲವಾಗಿದೆ. ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಲಾಭ ಗಳಿಸಿದರೆ ರಂಗರಾಜನ್‌ ಸಮಿತಿಯ ವರದಿ ಪ್ರಕಾರ ಬೆಳೆಗಾರರಿಗೆ 70:30 ಅನುಪಾತದಲ್ಲಿ ಹಂಚಿಕೆ ಮಾಡಲಾಗುವುದು ಎಂದರು.

ರಾಜ್ಯದಲ್ಲಿ 7.3 ಲಕ್ಷ ಹೆಕ್ಟೇರ್‌ ಕ್ಷೇತ್ರದಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಗರಿಷ್ಠ ಪ್ರಮಾಣದಲ್ಲಿ (5.67 ಲಕ್ಷ ಹೆಕ್ಟೇರ್‌) ಇದೆ. ಕ್ರಷಿಂಗ್‌ ವಿಳಂಬವಾದರೆ ಸಕ್ಕರೆ ಇಳುವರಿ ಕಡಿಮೆಯಾಗುವುದಷ್ಟೇ ಅಲ್ಲ, ರೈತರಿಗೂ ಸಮಸ್ಯೆಯಾಗಲಿದೆ. ತೂಕ ಕಡಿಮೆಯ ಜೊತೆಗೆ ಮುಂದಿನ ಹಂಗಾಮು ವ್ಯತ್ಯಯವಾಗಲಿದೆ. ಹೀಗಾಗಿ ಕ್ಷಷಿಂಗ್‌ ಸುಗಮವಾಗಿ ನಡೆಯಲು ರೈತರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ರೈತರ ಹೋರಾಟವನ್ನು ಬಳಕೆ ಮಾಡಿಕೊಂಡು ದುಷ್ಕೃತ್ಯ ಎಸಗಿದ ಕಿಡಿಗೇಡಿಗಳ ಮೇಲೆ ಸರ್ಕಾರ ಕ್ರಮ ಕೈಗೊಳ್ಳಲಿದ್ದು, ಯಾರೇ ಭಾಗಿಯಾಗಿದ್ದರೂ ಬಿಡುವುದಿಲ್ಲ. ಈ ಘಟನೆಯಿಂದ ಕೆಲವು ಕಾರ್ಖಾನೆಗಳು ಕ್ರಷಿಂಗ್‌ ಆರಂಭಿಸಲು ಹಿಂದೇಟು ಹಾಕಿದ್ದು, ಅವರಿಗೆ ರಕ್ಷಣೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಸರ್ಕಾರ ಯಾವುದೇ ಕಾರ್ಖಾನೆಗಳ ಮಾಲೀಕರಿಗೆ ಮಣಿದಿಲ್ಲ. ಮಣಿದಿದ್ದರೆ ಬೆಳೆಗಾರರಿಗೆ ಹೆಚ್ಚಿನ ಬೆಲೆ ಕೊಡಿಸಲು ಸಾಧ್ಯವಾಗುತ್ತಿರಲಿಲ್ಲ. ಕಬ್ಬಿನ ಮುಖ್ಯ ಹಾಗೂ ಉಪ ಉತ್ಪನ್ನಗಳಿಂದ ಕಾರ್ಖಾನೆಗಳು ಗಳಿಸುವ ಲಾಭದ ಬಗ್ಗೆ ಹಾಗೂ ಸರ್ಕಾರಕ್ಕೆ ಬರುವ ತೆರಿಗೆ ಬಗ್ಗೆಯೂ ತಪ್ಪು ಮಾಹಿತಿ ನೀಡುವ ಪ್ರಯತ್ನ ಆಗಬಾರದು. ಇದರಿಂದಲೂ ಸಮಸ್ಯೆಗಳು ಉದ್ಭವಿಸುತ್ತವೆ ಎಂದರು.

ಸಕ್ಕರೆ ರಫ್ತು ಪ್ರಮಾಣ ಹಾಗೂ ರಾಜ್ಯಕ್ಕೆ ನಿಗದಿಪಡಿಸಿರುವ ಎಥನಾಲ್‌ ಉತ್ಪಾದನೆ ಮಿತಿ ಹೆಚ್ಚಳ ಮಾಡಬೇಕು. ವಾಣಿಜ್ಯ ಬಳಕೆಯ ಸಕ್ಕರೆ ಬೆಲೆಯ ಹೆಚ್ಚಳ ಮಾಡಬೇಕು ಎಂಬುದು ರಾಜ್ಯದ ಬೇಡಿಕೆಯಾಗಿದೆ. ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿದರೆ ಕಬ್ಬು ಬೆಳೆಗಾರರಿಗೆ ಅನುಕೂಲವಾಗಿದೆ ಎಂದರು.

ಅತಿ ಹೆಚ್ಚುಕಬ್ಬು ಬೆಳೆಯುವ ರಾಜ್ಯಗಳಲ್ಲಿ ದೇಶದಲ್ಲೇ ಕರ್ನಾಟಕ ರಾಜ್ಯ ಮೂರನೇ ಸ್ಥಾನದಲ್ಲಿದೆ. ಆದರೆ ಎಥನಾಲ್‌ ಉತ್ಪಾದನೆಗೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಕಡಿಮೆ ಮಿತಿ ನಿಗದಿಪಡಿಸಿದೆ. ಗುಜರಾತ್‌ 38 ಸಾವಿರ ಕೋಟಿ ಲೀಟರ್‌ ಎಥನಾಲ್‌ ಪೂರೈಕೆ ಮಾಡುವುದಾಗಿ ಟೆಂಡರ್‌ನಲ್ಲಿ ತಿಳಿಸಿದೆ. ಆದರೆ ಕೇಂದ್ರ ಸರ್ಕಾರ 43 ಸಾವಿರ ಕೋಟಿ ಲೀಟರ್‌ ಎಥನಾಲ್‌ ಉತ್ಪಾದನೆಗೆ ಅನುಮತಿ ನೀಡಿದೆ. ಇದು ಬೇಡಿಕೆಗಿಂತ ಪ್ರತಿಶತ 13ರಷ್ಟು ಹೆಚ್ಚುವರಿ ಹಂಚಿಕೆ ಮಾಡಲಾಗಿದೆ. ಕರ್ನಾಟಕ 325 ಕೋಟಿ ಲೀಟರ್‌ ಎಥನಾಲ್‌ ಉತ್ಪಾದನೆ ಬೇಡಿಕೆ ಇಟ್ಟಿದ್ದರೂ ಕೇವಲ 133 ಕೋಟಿ ಲೀಟರ್‌ ಮಾತ್ರ ಹಂಚಿಕೆ ಮಾಡಿದೆ ಎಂದು ಹೇಳಿದರು.

ಕ್ರಷಿಂಗ್‌ ಆರಂಭ

ಬಾಗಲಕೋಟ ಜಿಲ್ಲೆಯಲ್ಲಿ 14 ಸಕ್ಕರೆ ಕಾರ್ಖಾನೆಗಳಿದ್ದು, ಈಗಾಗಲೇ 10 ಕಾರ್ಖಾನೆಗಳು ಕ್ರಷಿಂಗ್‌ ಆರಂಭಿಸಿದ್ದು, ಗುರುವಾರದವರೆಗೆ 1.6 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ನುರಿಸಿವೆ. ಮುಧೋಳ ತಾಲ್ಲೂಕಿನಲ್ಲಿರುವ ಐದು ಸಕ್ಕರೆ ಕಾರ್ಖಾನೆಗಳು ಮಾತ್ರ ಕ್ರಷಿಂಗ್‌ ಆರಂಭಿಸಿಲ್ಲ. ಗೋದಾವರಿ ಕಾರ್ಖಾನೆಯಲ್ಲಿ ಗುರುವಾರ ಕ್ರಷಿಂಗ್‌ ಆರಂಭಿಸಲು ಪೂಜೆ ಮಾಡಲಾಗಿತ್ತು ಎಂದು ಸಚಿವರು ವಿವರಿಸಿದರು.

ಕ್ರಷಿಂಗ್‌ ಆರಂಭಿಸದ ಕಾರ್ಖಾನೆಗಳಿಗೆ ಇಂದಿನಿಂದಲೇ ಆರಂಭ ಮಾಡಲು ಸೂಚನೆ ನೀಡಿದ ಸಚಿವರು, ಅಗತ್ಯ ರಕ್ಷಣೆ ನೀಡಿ ಎಂದು ಜಿಲ್ಲಾಧಿಕಾರಿ ಸಂಗಪ್ಪ ಅವರಿಗೆ ನಿರ್ದೇಶನ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.