ADVERTISEMENT

ಮಳೆರಾಜೇಂದ್ರಸ್ವಾಮಿ ಮಠದಲ್ಲಿ ಮಳೆ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 5:59 IST
Last Updated 28 ಫೆಬ್ರುವರಿ 2026, 5:59 IST
ಬಾಗಲಕೋಟೆಯ ಮುರನಾಳದಲ್ಲಿ ಮಳೆರಾಜೇಂದ್ರಸ್ವಾಮಿ ಮಠದ ಮಠಾಧೀಶ ಗುರುಲಿಂಗ ಮಹಾಪುರುಷ ಮಳೆ ಭವಿಷ್ಯ ನುಡಿದರು
ಬಾಗಲಕೋಟೆಯ ಮುರನಾಳದಲ್ಲಿ ಮಳೆರಾಜೇಂದ್ರಸ್ವಾಮಿ ಮಠದ ಮಠಾಧೀಶ ಗುರುಲಿಂಗ ಮಹಾಪುರುಷ ಮಳೆ ಭವಿಷ್ಯ ನುಡಿದರು   

ಬಾಗಲಕೋಟೆ: ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ. ಆರಿದ್ರಾ, ಪುನರ್ವಸು, ಹಿಂಗಾರು ಮಳೆಗಳಾದ ಮಗಿ, ಹುಬ್ಬಿ, ಉತ್ತರಿ ಮಳೆಗಳು ಚೆನ್ನಾಗಿ ಸುರಿಯಲಿವೆ ಎಂದು ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ವಾಣಿಯಾಗಿದೆ.

ಕೃಷಿಕರ ಮಠವೆಂದು ಗುರುತಿಸಲ್ಪಟ್ಟಿರುವ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಡೆದ ಕಡುಬಿನ ಕಾಳಗ (ಮಳೆ ಬೆಳೆ ಸೂಚನೆ)ದಲ್ಲಿ ಈ ಸೂಚನೆ ದೊರೆತಿದೆ.

ಕೆಲವು ಮಳೆಗಳು ಉತ್ತಮವಾಗಿ ಸುರಿಯಲಿದ್ದರೆ, ಕೆಲವು ಮಳೆಗಳು ಸಾಧಾರಣವಾಗಿ ಸುರಿಯಲಿವೆ ಎಂದು ಮಠದ ಮಠಾಧೀಶ ಗುರುಲಿಂಗ ಮಹಾಪುರುಷ ಭಕ್ತರಿಗೆ ತಿಳಿಸಿದರು.

ADVERTISEMENT

ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರ ಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಸಾವಿರಾರು ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು.

ಗಂಗೆಯ ಪೂಜೆಗಾಗಿ ನಿರ್ಮಿಸಿರುವ ಹೊಂಡದವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ನೀರು ತುಂಬಿಕೊಂಡು ಮಳೆಸ್ವಾಮಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದರು.

ತುಂಬಲ್ಪಟ್ಟ ಪ್ರತಿ ಬಿಂದಿಗೆ ಮೇಲೆ ಎರಡೆರಡು ಮಳೆಗಳು ಹೆಸರನ್ನು ನಮೂದಿಸಲಾಗುತ್ತದೆ. ಪಂಚ ಬಿಂದಿಗೆ ಹೊತ್ತು ನಂತರ ಗಂಗಾ ಹೊಂಡದಿಂದ ಪುನಃ ಮೆರವಣಿಗೆಯಲ್ಲಿ ರಥೋತ್ಸವ ಇರುವಸ್ಥಳಕ್ಕೆ ಬರುತ್ತಾರೆ. ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಗಳ ಬಸಿಯುವಿಕೆ (ಸೋರಿಕೆ) ಆಧಾರದ ಮೇಲೆ ಮಳೆ, ಬೆಳೆ ಸೂಚನೆ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.