
ಗುಳೇದಗುಡ್ಡ: ಪಟ್ಟಣದ ಮುರುಘಾಮಠದ ಭವ್ಯರಥೋತ್ಸವ ಶುಕ್ರವಾರ ಬಹಳಷ್ಟು ಸಡಗರ, ಸಂಭ್ರಮದಿಂದ ಜರುಗಿತು. ಮುರುಘಾಮಠದ ಲಿಂ.ನೀಲಕಂಠ ಶ್ರೀಗಳ 26ನೇ ವಾರ್ಷಿಕ ಪುಣ್ಯರಾಧನೆ ಪ್ರಯುಕ್ತಅತ್ಯಂತ ಶ್ರದ್ಧಾ ಭಕ್ತಿಯಿಂದ ಸಾಯಂಕಾಲ ರಥೋತ್ಸವ ನೆರವೇರಿಸಲಾಯಿತು.
ಮಠವನ್ನು ವಿದ್ಯುತ್, ಹೂ ಹಾಗೂ ತಳಿರು ತೋರಣಗಳೊಂದಿಗೆ ಅಲಂಕಾರ ಮಾಡಲಾಗಿತ್ತು. ಅರಳಿಕಟ್ಟಿಯಿಂದ ಗಚ್ಚಿನಕಟ್ಟಿಯವರೆಗೆ ರಥೋತ್ಸವ ಜರುಗಿತು. ರಥೋತ್ಸವದಲ್ಲಿ ಕರಡಿಮಜಲು, ಡೊಳ್ಳು ಕುಣಿತ, ವೀರಗಾಸೆ, ಪುರವಂತಿಕೆ, ನಂದಿಕೇಶ್ವರ ಕುಮಾರೇಶ್ವರ ಭಜನಾ ತಂಡದಿಂದ ಬಸವ ಕುಣಿತ ಸೇರಿದಂತೆ ಹಲವು ಜನಪದ ವಾದ್ಯ ಮೇಳಗಳು ಸಾತ್ ನೀಡಿ ವಿಶೇಷ ಮೆರುಗು ತಂದವು.
ಕಾಶಿನಾಥ ಶ್ರೀಗಳ ನೇತೃತ್ವದಲ್ಲಿ ಜರುಗಿದ ರಥೋತ್ಸವದಲ್ಲಿ ಅಭಿನವ ಕಾಡಸಿದ್ದೇಶ್ವರ ಶ್ರೀಗಳು, ಒಪ್ಪತ್ತೇಶ್ವರ ಶ್ರೀಗಳು, ನೀಲಕಂಠ ಶಿವಾಚಾರ್ಯ ಶ್ರೀಗಳು ಸೇರಿದಂತೆ ಅನೇಕ ಶ್ರೀಗಳು ಪಾಲ್ಗೊಂಡಿದ್ದರು. ಮಹಿಳೆಯರು ತಲೆಯ ಮೇಲೆ ವಚನ ಕಟ್ಟುಗಳ ಪುಸ್ತಕಗಳನ್ನು ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಗುಳೇದಗುಡ್ಡ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಅನೇಕ ಗ್ರಾಮಗಳ ಅಪಾರಭಕ್ತರು ಶ್ರದ್ಧೆ ಭಕ್ತಿಯಿಂದ ಪಾಲ್ಗೊಂಡು ರಥಕ್ಕೆ ಉತ್ತತ್ತಿಗಳನ್ನ ಎಸೆದು ಭಕ್ತಿ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.