ಬಾಗಲಕೋಟೆ: ‘ಹಿಂದಿನ ಆಡಳಿತ ಮಂಡಳಿ ಅವಧಿಯಲ್ಲಿ ನಡೆದಿರುವ ಲೋಪಗಳಿಂದಾಗಿ ನಂದಿ ಸಕ್ಕರೆ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದನ್ನು ಸರಿಪಡಿಸುವುದಕ್ಕಾಗಿ ಷೇರು ಸಂಗ್ರಹಿಸಲಾಗುತ್ತಿದೆ. ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಟೀಕೆ ಮಾಡುವ ಬದಲಾಗಿ ಅಭಿವೃದ್ಧಿಗೆ ನೆರವಾಗಬೇಕು’ ಕಾರ್ಖಾನೆ ಅಧ್ಯಕ್ಷ ಕುಮಾರ ಚಂದ್ರಕಾಂತ ದೇಸಾಯಿ ಹೇಳಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಈ ಹಿಂದೆ ನಡೆದ ಅವ್ಯವಹಾರಗಳ ಬಗ್ಗೆ 64ರಡಿ ತನಿಖೆ ಮಾಡಲಾಗುತ್ತಿದೆ. ವರದಿ ಬಂದ ನಂತರ ಸತ್ಯ ಗೊತ್ತಾಗಲಿದೆ. ನಮ್ಮ ಅವಧಿಯಲ್ಲಿ ಕೆಲವು ವಸ್ತುಗಳ ಖರೀದಿಗೆ ಆದೇಶ ನೀಡಲಾಗಿತ್ತು. ನಮ್ಮ ನಂತರ ಅಧ್ಯಕ್ಷರಾದ ಶಶಿಕಾಂತಗೌಡ ಪಾಟೀಲ ಆ ಆದೇಶ ರದ್ದುಪಡಿಸಿದರು. ಇದರಿಂದಾಗಿ ₹4 ಕೋಟಿ ನಷ್ಟವಾಯಿತು. ತನಿಖೆಗೆ ತಂದಿದ್ದ ತಡೆಯಾಜ್ಞೆ ತೆರವುಗೊಳಿಸಲಾಗಿದ್ದು, 29 ಜನರಿಗೆ ನೋಟಿಸ್ ನೀಡಲಾಗಿದೆ’ ಎಂದರು.
‘ಬಾಯ್ಲರ್‌ಗಾಗಿ ₹40 ಕೋಟಿ ಬೇಕಿದೆ. ಜತೆಗೆ ಹೆಚ್ಚಿನ ಬಡ್ಡಿಯ ಸಾಲಗಳನ್ನೂ ತೀರಿಸಬೇಕಿದೆ. ಹಿಂದಿನ ಅವಧಿಯಲ್ಲಿ ಸಾಲದ ಮೊತ್ತ ₹520 ಕೋಟಿಗೆ ಹೆಚ್ಚಿದೆ. ನಾನು ಎರಡು ವರ್ಷಗಳಲ್ಲಿ 11 ಲಕ್ಷ ಟನ್ ಕಬ್ಬು ನುರಿಸಿ ₹70 ಸಾಲ ಮರುಪಾವತಿ ಮಾಡಲಾಗಿದೆ’ ಎಂದು ತಿಳಿಸಿದರು.
‘ಮುರುಗೇಶ ನಿರಾಣಿ ಅವರೇ ವಿಧಾನಮಂಡಲ ಅಧಿವೇಶನದಲ್ಲಿ ಕಾರ್ಖಾನೆ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದಕ್ಕೆ ನೆರವು ನೀಡಬೇಡಿ ಎಂದಿದ್ದರು. ಕಾರ್ಖಾನೆ ಸುಧಾರಣೆಗಾಗಿ ಸಲಹಾ ಸಮಿತಿ ರಚಿಸಲಾಗಿದ್ದು, ಎಸ್.ಟಿ. ಪಾಟೀಲರು ಅದರಲ್ಲಿದ್ದಾರೆ. ಸಮಿತಿ ನೀಡುವ ಸಲಹೆ ಕೇಳಲಾಗುತ್ತಿದೆ. ಬೇಕಾದರೆ ನಿರಾಣಿ ಅವರನ್ನು ಸಮಿತಿಗೆ ನೇಮಕ ಮಾಡಿಕೊಳ್ಳುತ್ತೇವೆ. ಸಲಹೆ ನೀಡಲಿ’ ಎಂದು ಹೇಳಿದರು.
‘ಕಾರ್ಖಾನೆ ಸುಧಾರಣೆಗಾಗಿ ಶ್ರಮಿಸುತ್ತಿದ್ದೇನೆ. ಅಧ್ಯಕ್ಷನಾಗಿದ್ದಾಗಲೇ ಕಾರ್ಖಾನೆಗೆ ಪ್ರಶಸ್ತಿ ಲಭಿಸಿತ್ತು. ನಷ್ಟ ಮಾಡಿದ್ದೇನೆ ಎಂದು ಸಾಬೀತು ಮಾಡಿದರೆ ಯಾವುದೇ ಕ್ರಮ ಎದುರಿಸಲು ಸಿದ್ಧ’ ಎಂದರು.
ಉಪಾಧ್ಯಕ್ಷ ಅಶೋಕ ಲೆಂಕಣ್ಣವರ, ಪಾಂಡಪ್ಪ ರಾಗಾ, ರಮೇಶ ಬಗಲಿ, ಆರ್.ಪಿ.ಕೊಟಬಾಗಿ, ಸುರೇಂದ್ರ ನಾಯಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.