ಬೀಳಗಿ: 'ರಾಷ್ಟ್ರಮಟ್ಟದ ಕಬಡ್ಡಿ ಆಯೋಜನೆ ಮಾಡುವ ಮೂಲಕ ಮಾಜಿ ಸಚಿವ ಎಸ್.ಆರ್. ಪಾಟೀಲ ಅವರು ಈ ಭಾಗದ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ" ಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.
ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ರಜತ ಮಹೋತ್ಸವದ ಅಂಗವಾಗಿ ಸ್ವಾಮಿ ವಿವೇಕಾನಂದ ಕಾಲೇಜಿನ ಆವರಣದಲ್ಲಿ ಏರ್ಪಡಿಸಿರುವ ರಾಷ್ಟ್ರಮಟ್ಟದ ಪುರುಷ ಹಾಗೂ ಮಹಿಳಾ 'ಎ' ಗ್ರೇಡ್ ಕಬಡ್ಡಿ ಪಂದ್ಯಾವಳಿ ಗುರುವಾರ ಉದ್ಘಾಟಿಸಿ ಮಾತನಾಡಿದರು.
1997ರಲ್ಲಿ ಪ್ರಾರಂಭವಾದ ಬೀಳಗಿ ಪಟ್ಟಣ ಸಹಕಾರ ಬ್ಯಾಂಕ್ ರೈತರ, ನೊಂದವರ ಬಾಳಿನ ಆಶಾಕಿರಣವಾಗಿದೆ. ರಾಜಕಾರಣಿಗಳು ಕೇವಲ ರಾಜಕಾರಣ ಮಾಡದೆ ಸಾಮಾಜಿಕ, ಆರ್ಥಿಕ, ಉದ್ದಿಮೆ, ಆರೋಗ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಹೇಗೆ ಸೇವೆ ಸಲ್ಲಿಸಬಹುದು ಎನ್ನುವುದಕ್ಕೆ ನಮಗೆಲ್ಲ ಪಾಟೀಲರು ಮಾದರಿಯಾಗಿದ್ದಾರೆ ಎಂದರು.
ನಿರ್ದೇಶಕ ಎಂ.ಎನ್.ಪಾಟೀಲ ಮಾತನಾಡಿ, ಪ್ರಥಮ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಏರ್ಪಡಿಸಿದ್ದು, ವಿವಿಧ ರಾಜ್ಯದ ಪ್ರೊ ಕಬಡ್ಡಿ ಆಟಗಾರರು ಬೀಳಗಿ ಬಂದಿದ್ದಾರೆ ಎಂದರು.
ಬೀಳಗಿ ಪಟ್ಟಣ ಸಹಕಾರ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಸತ್ಯಪ್ಪ ಮೆಲ್ನಾಡ, ಪ್ರಧಾನ ಕಾರ್ಯದರ್ಶಿ ಎಲ್.ಬಿ. ಕುರ್ತಕೋಟಿ, ಕಾಂಗ್ರೆಸ್ ಮುಖಂಡ ಎಸ್.ಟಿ.ಪಾಟೀಲ, ಬಸವಪ್ರಭು ಸರನಾಡಗೌಡ, ನಿರ್ದೇಶಕರಾದ ಹೇಮಾದ್ರಿ ಕೊಪ್ಪಳ, ಎಂ.ಎಲ್.ಕೆಂಪಲಿಂಗಣ್ಣವರ, ಎ.ಎಚ್.ಬೀಳಗಿ, ಕೆ.ಎಸ್.ಪತ್ರಿ, ಗಂಗಣ್ಣ ಕೆರೂರ, ಭೀಮಪ್ಪ ಕೂಗಟಿ, ಪಿ.ಬಿ.ಗುರಾಣಿ, ಜಿಲ್ಲಾ ನೋಂದಣಾಧಿಕಾರಿ ಎಸ್.ಜಿ.ನ್ಯಾಮಗೌಡ, ಎಸ್.ಎಸ್. ರಂಗನಗೌಡ್ರ, ವ್ಯವಸ್ಥಾಪಕ ಜಿ.ಎಸ್.ಬನಹಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.