
ಬಾಗಲಕೋಟೆ: ಬಿವಿವಿ ಸಂಘದ ಮೆಡಿಕಲ್ ಕಾಲೇಜು ಆವರಣದಲ್ಲಿ ನಿರ್ಮಾಣಗೊಂಡಿರುವ ದೇಶದ ಎರಡನೇ ‘ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರ’ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವದೆಹಲಿಯ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ.ದಿಲೀಪಕುಮಾರ ಉದ್ಘಾಟಿಸಲಿದ್ದಾರೆ. ನಂತರ ಮೆಡಿಕಲ್ ಕಾಲೇಜಿನ ಶತಾಬ್ಧಿ ಸಭಾಂಗಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿವಿಯ ಕುಲಪತಿ ಡಾ.ಬಿ.ಸಿ.ಭಗವಾನ, ಜೆಪ್ಯಾಗೊ ನಿರ್ದೇಶಕ ಡಾ.ಕಮಲೇಶ ಲಾಲಚಂದದಾನಿ, ಲ್ಯಾರ್ಡಲ್ ಮೆಡಿಕಲ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ಸಂಜಯ ಸಿಂಗ್ ಭಾಗವಹಿಸಲಿದ್ದಾರೆ ಎಂದರು.
ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರವು ಭಾರತೀಯ ನರ್ಸಿಂಗ್ ಪರಿಷತ್ತಿನ ಮಾನ್ಯತೆ ಪಡೆದ ದೇಶದ ಎರಡನೇ ಕೇಂದ್ರವಾಗಿದೆ. ದೇಶದ ಮೊದಲ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಪ್ರಮಾಣಿಕರಣ ಕೇಂದ್ರ ಎಂಬ ಹೆಸರು ಪಡೆಯುತ್ತಿರುವುದು ಕೂಡ ವಿಶೇಷ ಎಂದರು.
ಆರೋಗ್ಯ ವ್ಯವಸ್ಥೆಯಲ್ಲಿ ಶೇ30.5ರಷ್ಟು ನರ್ಸಿಂಗ್ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ ರಕ್ಷಣಾ ವ್ಯವಸ್ಥೆಯ ಆಧಾರಸ್ತಂಭವಾಗಿದ್ದಾರೆ. ಕೊರೊನಾ ನಂತರ ನುರಿತ ವೈದ್ಯಕೀಯ ಸಿಬ್ಬಂದಿಗೆ ಒತ್ತು ಸಿಗುತ್ತಿದ್ದು, ಅವರನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಈ ಕೇಂದ್ರ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಹೇಳಿದರು.
₹16 ಕೋಟಿ ವೆಚ್ಚದಲ್ಲಿ ಕೇಂದ್ರ ನಿರ್ಮಿಸಲಾಗಿದ್ದು, ನರ್ಸಿಂಗ್ ಬೋಧಕರು, ವಿದ್ಯಾರ್ಥಿಗಳು, ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ನರ್ಸಿಂಗ್ ಸಿಬ್ಬಂದಿಗೆ ಅತ್ಯಾಧುನಿಕ ಪರಿಕರಗಳನ್ನು ಬಳಸಿ ಆರು ದಿನಗಳ ಕಾಲ ತರಬೇತಿ ನೀಡಲಾಗುವುದು. ಮನುಷ್ಯನ ದೇಹದ ಭಾಗಗಳಿದ್ದು, ಅವುಗಳ ಚಿಕಿತ್ಸೆಯನ್ನು ಯಾವ ರೀತಿ ಮಾಡಬೇಕು ಎಂದು ತಿಳಿಸಲಾಗುವುದು ಎಂದರು.
ಮೂರು ದಿನಗಳ ಸಮ್ಮೇಳನ:
ಮೂರು ದಿನಗಳ ಅಂತರರಾಷ್ಟ್ರೀಯ ಸನ್ ಸಮ್ಮೇಳನ ಏರ್ಪಡಿಸಲಾಗಿದೆ. ಸಿಮ್ಯುಲೇಷನ್ ಕೇಂದ್ರದಲ್ಲಿರುವ ಮಾದರಿಗಳು ಹಾಗೂ ಉಪಕರಣಗಳನ್ನು ಬಳಸಿಕೊಂಡು ತರಬೇತಿ ನೀಡಲಾಗುತ್ತದೆ.
ಸಂಪನ್ಮೂಲ ವ್ಯಕ್ತಿಗಳಾಗಿ ಇಂಗ್ಲೆಂಡಿನ ಸಿಮ್‍ಕಾಂ ಅಕಾಡೆಮಿ ಸಿಇಒ ಕ್ಯಾರಿ ಹ್ಯಾಮಿಲ್ಟನ್, ಸಿಂಗಾಪುರರದ ನರ್ಸಿಂಗ್ ಅಧ್ಯಯನದ ನಿರ್ದೇಶಕ ಲೌರಾ ಥಾಮ್, ಆಸ್ಟ್ರೇಲಿಯಾದ ಹೆಲ್ತ್‌ಕೇರ್ ಮುಖ್ಯಸ್ಥ ಜೇಮ್ಸ್ ನೈಸ್ಮಿಥ್ ಹಾಗೂ ಅಲ್ವಿನ್ ಟಾಂಗ್ ಮಾಹಿತಿ ನೀಡಲಿದ್ದಾರೆ. ಒಂದು ಸಾವಿರಕ್ಕೂ ಅಧಿಕ ನರ್ಸಿಂಗ್ ವೃತ್ತಿಪರರು ಸಮ್ಮೇಳನದಲ್ಲಿ ಪಾಳ್ಗೊಳ್ಳುವರು ಎಂದರು.
ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಸಜ್ಜಲಶ್ರೀ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ದಿಲೀಪ ನಾಟೇಕರ್ ಇದ್ದರು.
ಬೆರಗು ಮೂಡಿಸುವ ಕೇಂದ್ರ
ನೂತನ ಸಿಮ್ಯುಲೇಶನ್ ಕೇಂದ್ರದಲ್ಲಿರುವ ಮಾನವ ಆಕೃತಿ ಶರೀರದ ಅಂಗಗಳು ಬೆರಗು ಮೂಡಿಸುತ್ತವೆ. ಐಸಿಯು ಎನ್‍ಐಸಿಯು ಆಪರೇಷನ್ ಥೇಟರ್ ಸೇರಿದಂತೆ ಅತ್ಯಾಧುನಿಕ ಆಸ್ಪತ್ರೆಯನ್ನೇ ತರಬೇತಿಗಾಗಿ ನಿರ್ಮಿಸಲಾಗಿದೆ. ಶರೀರದ ಅಂಗಗಳ ರಚನೆಗಳನ್ನಿಡಲಾಗಿದ್ದು ಯಾವ ಸಂದರ್ಭದಲ್ಲಿ ಅವುಗಳಿಗೆ ಯಾವ ರೀತಿ ಚಿಕಿತ್ಸೆ ನೀಡಬಹುದು ಎನ್ನುವುದನ್ನು ಕಲಿಸಲಾಗುತ್ತದೆ. ಇಲ್ಲಿ ತರಬೇತಿ ಪಡೆದು ಉದ್ಯೋಗಕ್ಕೆ ತೆರಳಿದಾಗ ಉದ್ಯೋಗದಾತರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅಭ್ಯರ್ಥಿ ತರಬೇತಿ ಅವಧಿಯಲ್ಲಿ ಕೈಗೊಂಡ ಎಲ್ಲ ವಿಧಾನಗಳ ವಿಡಿಯೊ ನೋಡಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.