ADVERTISEMENT

ಏಕತಾ ದಿನಾಚರಣೆ: ಮ್ಯಾರಥಾನ್ ಓಟಕ್ಕೆ ಸಿಪಿಐ ಹನಮಂತ ಸಣಮನಿ ಚಾಲನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 4:03 IST
Last Updated 1 ನವೆಂಬರ್ 2025, 4:03 IST
ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನಾಚರಣೆ ಅಂಗವಾಗಿ ಕೆರೂರ ಪಟ್ಟಣದಲ್ಲಿ ಶುಕ್ರವಾರ ಏಕತಾ ಓಟ ಜರುಗಿತು
ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನಾಚರಣೆ ಅಂಗವಾಗಿ ಕೆರೂರ ಪಟ್ಟಣದಲ್ಲಿ ಶುಕ್ರವಾರ ಏಕತಾ ಓಟ ಜರುಗಿತು   

ಬೀಳಗಿ: ‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ‘ಏಕ ಭಾರತ, ಏಕ ದೃಷ್ಟಿಕೋನ’ ಎಂಬ ಆಶಯವನ್ನು ನೆನಪಿಸುವುದು ಮತ್ತು ದೇಶದ ನಾಗರಿಕರಲ್ಲಿ ಏಕತೆಯ ಭಾವ ಬೆಳೆಸುವುದು ರಾಷ್ಟ್ರೀಯ ಏಕತಾ ದಿನದ ಉದ್ದೇಶವಾಗಿದೆ’ ಎಂದು ಸಿಪಿಐ ಹನಮಂತ ಸಣಮನಿ ಹೇಳಿದರು.

ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಏರ್ಪಡಿಸಿದ್ದ ಬೀಳಗಿ ಪೊಲೀಸ್ ಠಾಣೆಯಿಂದ ತಹಶೀಲ್ದಾರ್ ಕಾರ್ಯಾಲಯದ ವರೆಗೆ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ದೇಶದ ನಾಗರಿಕರಲ್ಲಿ ರಾಷ್ಟ್ರೀಯ ಏಕತೆಯ ಸಂದೇಶವನ್ನು ಹರಡಲು ಮತ್ತು ಸರ್ದಾರ್ ಪಟೇಲರ ಕೊಡುಗೆಗಳನ್ನು ನೆನಪಿಸಿಕೊಳ್ಳಲು ಈ ಮ್ಯಾರಥಾನ್‌ ಸಹಕಾರಿ’ ಎಂದರು.

ADVERTISEMENT

ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಪೊಲೀಸರು ಮತ್ತು ಸಾರ್ವಜನಿಕರು ಮ್ಯಾರಥಾನ್‌ಲ್ಲಿ ಭಾಗವಹಿಸಿದ್ದರು.

ಬಿಜೆಪಿ ಕಾರ್ಯಾಲಯ: ‘ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಹಾಗೂ ಗೃಹ ಮಂತ್ರಿಯಾಗಿ ಭಾರತದ ಏಕೀಕರಣಕ್ಕೆ ಸರ್ದಾರ್ ವಲ್ಲಭಾಯಿ ಪಟೇಲರ ಕೊಡುಗೆ ಅಪಾರವಾದುದು’ ಎಂದು ಬೀಳಗಿ ಮಂಡಲ ಬಿಜೆಪಿ ಅಧ್ಯಕ್ಷ ಹೊಳಬಸು ಬಾಳಶೆಟ್ಟಿ ಹೇಳಿದರು.

ಸ್ಥಳೀಯ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಸರ್ದಾರ್ ವಲ್ಲಭಾಯಿ ಪಟೇಲರ ಜನ್ಮ ದಿನದ ಅಂವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಏಕತಾ ದಿನ ಸಭೆಯಲ್ಲಿ ಮಾತನಾಡಿದರು.

ಬೀಳಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮುತ್ತು ಬೋರ್ಜಿ, ಬಿಜೆಪಿ ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ತಿಪ್ಪಣ್ಣ ಸಂಜೀವಪ್ಪಗೊಳ, ಗಂಗಾಧರ ಲಕ್ಷ್ಮಣ ಬಿಂಗಿ, ಮಲ್ಲು ಕೋಮಾರ ದೇಸಾಯಿ, ನಿಂಗಪ್ಪ ದಂದರಗಿ, ಹುಚ್ಚಪ್ಪ ಕೌಲಗಿ ವಿಠ್ಠಲ ಗಡ್ಡದ, ವೀರಣ್ಣ ತೋಟದ, ಲಕ್ಷ್ಮಣ ಡವಳೇಶ್ವರ, ಹನಮಂತ ದಳವಾಯಿ ಇದ್ದರು.

ಏಕತಾ ಓಟ ಅಭಿಯಾನ ಯಶಸ್ವಿ

ಕೆರೂರ: ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಏಕತಾ ಓಟ ಅಭಿಯಾನ ನಡೆಯಿತು. ಪಟ್ಟಣದ ಪೊಲೀಸ್ ಠಾಣೆ ಸಿಬ್ಬಂದಿ ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಹಯೋಗದಲ್ಲಿ ಏಕತಾ ಓಟ ಜರುಗಿತು. ಪಿಎಸ್‌ಐ ಭೀಮಪ್ಪ ರಭಕವಿ ಮಾತನಾಡಿ ‘ಭಾರತವನ್ನು ಸಂಪೂರ್ಣವಾಗಿ ನಶೆಮುಕ್ತ ಮಾಡುವುದು ಸಾರ್ವಜನಿಕರಿಗೆ ಸೈಬರ್‌ ಕ್ರೈಂ ಹಾಗೂ ಮಹಿಳೆಯರ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವುದು ಏಕತಾ ಓಟದ ಮುಖ್ಯ ಉದ್ದೇಶ’ ಎಂದು ಹೇಳಿದರು. ಅಭಿಯಾನವು ಪೊಲೀಸ್ ಠಾಣೆಯಿಂದ ಆರಂಭವಾಗಿ ಬಸ್ ನಿಲ್ದಾಣ ಬದಾಮಿ ಕ್ರಾಸ್ ಅಂಬೇಡ್ಕರ್ ವೃತ್ತ ರಾಷ್ಟ್ರೀಯ ಹೆದ್ದಾರಿ ಮೂಲಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಅಪರಾಧ ವಿಭಾಗದ ಪಿಎಸ್ಐ ಐ.ಎಂ.ಹಿರೇಗೌಡರ ಎಎಸ್‌ಐ ಶಿವಾಜಿ ಲಮಾಣಿ ಸಿಬ್ಬಂದಿ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಎಸ್.ಬಿ.ಮೇಟಿ ಅ.ರಾ ಹಿರೇಮಠ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಹಕಾರಿ ಎಂ.ಎಸ್. ಚಿಟಗುಬ್ಬಿ ಇದ್ದರು.

ಏಕತಾ ದಿನಾಚರಣೆ: ಪ್ರತಿಜ್ಞಾ ವಿಧಿ ಬೋಧನೆ

ಮಹಾಲಿಂಗಪುರ: ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಪಟ್ಟಣದ ಮಹಾಲಿಂಗೇಶ್ವರ ದೇವಸ್ಥಾನದಿಂದ ಚನ್ನಮ್ಮ ವೃತ್ತದ ವರೆಗೆ ಪೊಲೀಸ್ ಇಲಾಖೆ ಸಹಯೋಗದಲ್ಲಿ ಲಯನ್ಸ್ ಕ್ಲಬ್ ವೈದ್ಯರ ಸಂಘ ಪತ್ರಕರ್ತರ ಸಂಘ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಶುಕ್ರವಾರ ಏಕತಾ ಓಟ ಹಮ್ಮಿಕೊಳ್ಳಲಾಗಿತ್ತು. ಪ್ರಭಾರ ಪಿಎಸ್‍ಐ ಪುರಂದರ ಪೂಜಾರಿ ಮಾತನಾಡಿ ‘ಏಕತಾ ದಿನವು ವೈವಿಧ್ಯಮಯ ರಾಜಪ್ರಭುತ್ವದ ರಾಜ್ಯಗಳನ್ನು ಒಂದು ರಾಷ್ಟ್ರವಾಗಿ ಒಗ್ಗೂಡಿಸಿದ ಪ್ರಯತ್ನಗಳ ಜ್ಞಾಪಕವಾಗಿದ್ದು ದೇಶದ ಜನರಲ್ಲಿ ಒಗ್ಗಟ್ಟಿನ ಮನೋಭಾವವನ್ನು ಮೂಡಿಸುತ್ತದೆ. ಅಸಾಧಾರಣ ನಾಯಕತ್ವ ಮತ್ತು ರಾಷ್ಟ್ರೀಯ ಏಕೀಕರಣಕ್ಕೆ ಅಚಲ ಬದ್ಧತೆಯನ್ನು ಪ್ರದರ್ಶಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಉಕ್ಕಿನ ಮನುಷ್ಯ ಎಂದೇ ಕರೆಯಲಾಗುತ್ತದೆ’ ಎಂದರು. ಚನ್ನಮ್ಮ ವೃತ್ತದಲ್ಲಿ ಸಾರ್ವಜನಿಕರಿಗೆ ರಾಷ್ಟ್ರೀಯ ಏಕತಾ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಸಿದ್ದು ನಕಾತಿ ರಮೇಶ ಶೆಟ್ಟರ ಶಶಿಧರ ನಕಾತಿ ರಾಹುಲ್ ಬೆಳಗಲಿ ಅನುಪ ಹಂಚಿನಾಳ ವಿವೇಕ ಢಪಳಾಪುರ ಅಶೋಕ ದಿನ್ನಿಮನಿ ವಿಶ್ವನಾಥ ಗುಂಡಾ ರಾಜು ತಾಳಿಕೋಟಿ ಮಹಾಲಿಂಗಯ್ಯ ಮನ್ನಯ್ಯನವರಮಠ ಪ್ರಶಾಂತ ಅಂಗಡಿ ಬಾಳಕೃಷ್ಣ ಮಾಳವದೆ ಇದ್ದರು.

‘ರಾಷ್ಟ್ರೀಯ ಏಕತೆಗೆ ಎಲ್ಲರ ಸಹಕಾರ ಮುಖ್ಯ’

ರಬಕವಿ ಬನಹಟ್ಟಿ: ‘ಪ್ರತಿಯೊಬ್ಬ ಭಾರತೀಯರಲ್ಲಿ ಏಕತೆಯ ಭಾವ ಮೂಡಬೇಕು. ಈ ನಿಟ್ಟಿನಲ್ಲಿ ಜಾಗೃತಿ ಅಗತ್ಯವಾಗಿದೆ. ನಾವೆಲ್ಲರೂ ಒಟ್ಟಾಗಿ ಬದುಕಿದರೆ ಮಾತ್ರ ಮುಂದಿನ ದಿನಗಳಲ್ಲಿ ಶ್ರೇಷ್ಠ ಭಾರತವನ್ನು ನಿರ್ಮಾಣ ಮಾಡಲು ಸಾಧ್ಯ’ ಎಂದು ರಬಕವಿ ಬನಹಟ್ಟಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ತಿಳಿಸಿದರು. ಅವರು ಶುಕ್ರವಾರ ಇಲ್ಲಿನ ಭಗೀರಥ ವೃತ್ತದಲ್ಲಿ ಸ್ಥಳೀಯ ಪೊಲೀಸ್ ಠಾಣೆಯವರು ಹಮ್ಮಿಕೊಂಡ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಬನಹಟ್ಟಿ ಪಿಎಸ್ಐ ಶಾಂತಾ ಹಳ್ಳಿ ಮಾತನಾಡಿ ‘ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಯತ್ತ ಗಮನ ನೀಡಬೇಕಾಗಿದೆ. ಪ್ರತಿಯೊಬ್ಬರು ರಸ್ತೆ ಸಂಚಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು. ರಬಕವಿಯ ಭಗೀರಥ ವೃತ್ತದಿಂದ ಆರಂಭಗೊಂಡ ಏಕತಾ ಓಟವು ಹೊಸೂರ ರಾಮಪುರ ಬನಹಟ್ಟಿ ಬನಹಟ್ಟಿ ನಗರದ ಪ್ರಮುಖ ಬೀದಿಗಳ ಮೂಲಕ ನೂಲಿನ ಗಿರಣಿಯವರೆಗೆ ನಡೆಯಿತು. ಎಎಸ್ಐ ಎನ್.ಬಿ.ಆಯತವಾಡ ಜಿ.ಎಸ್.ಬಿರಾದಾರ ಬಿ.ಎಸ್. ಚೌಲಗಿ ಪಿ.ವಿ.ಹಾಲಗತ್ತಿ ಅಜ್ಜನಗೌಡರು ಮತ್ತು ಗೃಹರಕ್ಷಕ ದಳದವರು ಇದ್ದರು.

ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ಮಹಾಲಿಂಗಪುರದಲ್ಲಿ ಚನ್ನಮ್ಮ ವೃತ್ತದಲ್ಲಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು
ಬನಹಟ್ಟಿಯ ಪೊಲೀಸ್ ಠಾಣೆಯವರು ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತೆಗಾಗಿ ಓಟ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ ಚಾಲನೆ ನೀಡಿದರು
ರಾಷ್ಟ್ರೀಯ ಏಕತಾ ದಿನದ ಪ್ರಯುಕ್ತ ಬೀಳಗಿಯಲ್ಲಿ ಏರ್ಪಡಿಸಿದ್ದ ಮ್ಯಾರಥಾನ್ ಓಟದಲ್ಲಿ ಪೊಲೀಸ್ ಇಲಾಖೆಯ ನೌಕರರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು
ರಾಷ್ಟ್ರೀಯ ಏಕತಾ ದಿನಾಚರಣೆ ಅಂಗವಾಗಿ ಬಾದಾಮಿಯಲ್ಲಿ ಪೊಲೀಸ್ ಇಲಾಖೆ ಕಂದಾಯ ಇಲಾಖೆ ಮಾಜಿ ಸೈನಿಕರು ಮತ್ತು ವಿವಿಧ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ರಾಷ್ಟ್ರೀಯ ಏಕತಾ ಓಟ ನಡೆಯಿತು. ಪಿಎಸ್ಐ ಹನುಮಂತ ನೆರಳೆ ಪೊಲೀಸ್ ಸಿಬ್ಬಂದಿ ಮಾಜಿ ಸೈನಿಕರು ವಿವಿಧ ಇಲಾಖೆಗಳ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು
ಸರ್ದಾರ್ ವಲ್ಲಭಾಯಿ ಪಟೇಲ್ ಜನ್ಮದಿನಾಚರಣೆ ಅಂಗವಾಗಿ ಹುನಗುಂದ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಏಕತೆಗಾಗಿ ಓಟ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಪಾಲ್ಗೊಂಡಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.