ರಬಕವಿ ಬನಹಟ್ಟಿ: ನಗರದ ಮಲ್ಲಿಕಾರ್ಜುನ ದೇವರ ಜಾತ್ರೆಯ ಅಂಗವಾಗಿ ಮಂಗಳವಾರ ಸಂಜೆ ಹಮ್ಮಿಕೊಳ್ಳಲಾದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗಳು ನೂರಾರು ಕುಸ್ತಿ ಪ್ರಿಯರ ಗಮನ ಸೆಳೆದವು.
ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಬಾಲಚಂದ್ರ ಉಮದಿಯವರು ಕುಸ್ತಿ ಮೈದಾನಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಕುಸ್ತಿ ಈಗಲೂ ಜನಪ್ರಿಯ ಕ್ರೀಡೆಯಾಗಿದೆ. ಮುಂದಿನ ದಿನಗಳಲ್ಲಿ ಕುಸ್ತಿ ಕ್ರೀಡೆಗೆ ನಾವೆಲ್ಲರೂ ಪ್ರೋತ್ಸಾಹ ನೀಡಿದರೆ ಕುಸ್ತಿ ಪೈಲ್ವಾನರು ಮತ್ತು ಕುಸ್ತಿ ಕ್ರೀಡೆಯನ್ನು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ನಮ್ಮ ದೇಸಿ ಕ್ರೀಡೆಗಳ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಿಳಿಸಬೇಕು ಎಂದರು.
ಅಂದಾಜು ನಾಲ್ಕು ಗಂಟೆಗಳ ಕಾಲ ಬೇರೆ ಬೇರೆ ರಾಜ್ಯದ ಯುವ ಮತ್ತು ಹಿರಿಯ ಕುಸ್ತಿ ಪೈಲ್ವಾನರು ತಮ್ಮ ಬೇರೆ ಬೇರೆ ಡಾವಗಳ ಮೂಲಕ ಕುಸ್ತಿಯನ್ನು ಪ್ರದರ್ಶನ ಮಾಡಿ ಕುಸ್ತಿ ಪ್ರೇಮಿಗಳ ಗಮನ ಸೆಳೆದರು.
ಮೊದಲ ನಂಬರ ಕುಸ್ತಿಯಲ್ಲಿ ಪುಣೆಯ ಶಿವರಾಜ ರಕ್ಷೆ ಅವರು ವಿಜಯೇಂದ್ರ ಭೀಮಾನಿಯನ್ನು ಸೋಲಿಸಿದರೆ, ದ್ವಿತೀಯ ನಂಬರ್ ಕುಸ್ತಿಯಲ್ಲಿ ಕೊಲ್ಲಾಪುರದ ರಾಘು ತೊಮ್ರಿ ಪೈಲ್ವಾನ್ ವಿಕಾಸ ಧೋತ್ರೆಯವರನ್ನು ಸೋಲಿಸಿದರು. ಸ್ಥಳೀಯ ಸಾಗರ ಜಗದಾಳ ಪೈಲ್ವಾನ್ ವಿಶಾಲ ಶೇಕಳೆಯವರನ್ನು ಸೋಲಿಸಿ ಸೇರಿದ್ದ ನೂರಾರು ಜನರ ಗಮನ ಸೆಳೆದರು.
ಶಂಕರಲಿಂಗ ದೇವಸ್ಥಾನ ಟ್ರಸ್ಟ್ ಮತ್ತು ಜೈ ಹನುಮಾನ ಗರಡಿ ಮನೆ ಆಶ್ರಯದಲ್ಲಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಸಿದ್ದು ಕೊಣ್ಣೂರ, ಡಾ.ಪದ್ಮಜೀತ ನಾಡಗೌಡಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಪ್ರಭು ನಾಯಕ, ಮಹಾದೇವ ನಾಯಕ, ರವಿ ಬಸಗೊಂಡನವರ, ಸದಾಶಿವ ಪಕಾಲಿ, ಈರಣ್ಣ ಗುಣಕಿ, ದೇವಲ ದೇಸಾಯಿ, ಸಂಜು ಜೋತಾವರ, ಮಾರುತಿ ನಾಯಕ, ಸಂಜಯ ತೆಗ್ಗಿ, ಪ್ರಭು ಉಮದಿ, ಶಿವಾನಂದ ಬಾಗಲಕೋಟಮಠ, ಪ್ರಕಾಶ ಸಿಂಗನ್, ಎಂ.ಎಂ.ಕವಟಗಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.