
ಬಾಗಲಕೋಟೆ: ಜಿಲ್ಲೆಯಲ್ಲಿ ಅಂಗವಿಕಲರಿಗೆ ನೀಡಲಾಗುತ್ತಿರುವ ಯುಡಿಐಡಿಯ 936 ಕಾರ್ಡ್‌ಗಳ ವಿತರಣೆಗೆ ಬಾಕಿ ಇದ್ದು, ಅವುಗಳ ವಿತರಣೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ, ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಅಂಗವಿಕಲರ ಕುಂದುಕೊರತೆ ಸಭೆ ಅಧ್ಯಕ್ಷತೆವಹಿಸಿ, ಮಾತನಾಡಿದ ಅವರು, ಜಿಲ್ಲೆಯಲ್ಲಿ ಈಗಾಗಲೇ 31,209 ಯುಡಿಐಡಿ ಕಾರ್ಡ್‌ಗಳು ಆನ್‍ಲೈನ್‍ನಲ್ಲಿ ಜನರೇಟ್ ಆಗಿದ್ದು, ಸಾವಿರಕ್ಕೂ ಕಡಿಮೆ ಮಾತ್ರ ವಿತರಣೆಗೆ ಬಾಕಿ ಉಳಿದಿವೆ ಎಂದು ತಿಳಿಸಿದರು.
ಅರ್ಹ ಅಂಗವಿಕಲರಿಗೆ ಯುಡಿಐಡಿ ಕಾರ್ಡ್‌ಗಳನ್ನು ವಿತರಣೆ ಮಾಡಿದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗಲಿದೆ. ತಾಂತ್ರಿಕ ದೋಷಗಳು ಇದ್ದಲ್ಲಿ ಸರಿಪಡಿಸಿ ಕಾರ್ಡ್ ವಿತರಿಸಿರಿ. ಈ ಬಗ್ಗೆ ತಹಶೀಲ್ದಾರರು ಮಾಹಿತಿ ಪಡೆದುಕೊಳ್ಳಬೇಕು. ಉಪವಿಭಾಗಾಧಿಕಾರಿಗಳು ಸಹ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ, ಅವರಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ಸಿಗುವಂತೆ ನೋಡಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ಕ್ರಿಯಾ ಯೋಜನೆ ರೂಪಿಸುವಲ್ಲಿ ಯು.ಆರ್.ಡಬ್ಲು, ಎಂ.ಆರ್.ಡಬ್ಲು ಹಾಗೂ ವಿ.ಆರ್.ಡಬ್ಲುಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಜಿಲ್ಲೆಯ ಶಾಲಾ–ಕಾಲೇಜುಗಳಲ್ಲಿ ರ‍್ಯಾಂಪ್ ವ್ಯವಸ್ಥೆ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಡಬೇಕು.
ನವನಗರದಲ್ಲಿರುವ ಅಂಗವಿಕಲರ ಸಮುದಾಯ ಭವನಕ್ಕೆ ಮೂಲ ಸೌಲಭ್ಯ ಒದಗಿಸುವ ಅಗತ್ಯವಿದೆ ಎಂದು ಅಂಗವಿಕಲ ಸಂಘಟನೆಯ ಪ್ರತಿನಿಧಿಗಳು ತಿಳಿಸಿದರು. ಈ ಬಗ್ಗೆ ಮಾಹಿತಿ ಪಡೆದುಕೊಂಡು ಸೂಕ್ತ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಅಂಗವಿಕಲರ ಬೇಡಿಕೆಯಂತೆ ಪಡಿತರ ಧಾನ್ಯ ವಿತರಣೆಯಲ್ಲಿ ಅಂಗವಿಕಲರಿಗೆ ಆದ್ಯತೆ ನೀಡುವಂತೆ ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು. ಸರ್ಕಾರಿ ಆಸ್ಪತ್ರೆ, ಬ್ಯಾಂಕ್‍ಗಳಲ್ಲಿ ಪ್ರತ್ಯೇಕ ಕ್ಯೂ ಮಾಡಲು ಸಹ ಕ್ರಮವಹಿಸಲಾಗುವುದು. ವಿವಿಧ ಇಲಾಖೆಯ ಅನುದಾನದಲ್ಲಿ ಶೇ5ರಷ್ಟು ಅಂಗವಿಕಲರಿಗೆ ಮೀಸಲಿರಿಸಿ ಅರ್ಹ ಫಲಾನುಭವಿಗಳಿಗೆ ಸಾಧನ–ಸಲಕರಣೆಗಳ ವಿತರಣೆ ಮಾಡಬೇಕು ಎಂದು ಸೂಚಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಎಸ್.ಎಂ.ಕಾಂಬಳೆ ಮತ್ತಿತರರು ಇದ್ದರು.