
ರಾಂಪುರ: ನವಜಾತ ಶಿಶುಗಳಿಗೆ ಕಾಂಗರೂ ಆರೈಕೆ ನೀಡುವುದರಿಂದ ಅವರ ಆರೋಗ್ಯ ವೃದ್ಧಿಸಬಲ್ಲದು ಜೊತೆಗೆ ಅವಧಿಗೂ ಮುನ್ನವೇ ಜನಿಸಿದ ಶಿಶುಗಳ ಮರಣ ಪ್ರಮಾಣ ಕಡಿಮೆ ಮಾಡಬಹುದು ಎಂದು ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ಎಫ್.ಮಾಯಾಚಾರಿ ಹೇಳಿದರು.
ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಶಿರೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ನೀಲಾನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನವಜಾತ ಶಿಶು ಆರೈಕೆ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವಜಾತ ಶಿಶು ಹಾಗೂ ತಾಯಿ ಮಧ್ಯದ ಆರಂಭಿಕ ಸಂಪರ್ಕ ಮಗುವಿನ ಭಾವನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗೆ ಅಡಿಪಾಯ. ಇದಕ್ಕೆ ಕಾಂಗರೂ ಮದರ್ ಕೇರ್ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಪ್ರತಿಯೊಬ್ಬ ತಾಯಿ ಹೆರಿಗೆಯಾದ ಒಂದು ಗಂಟೆಯೊಳಗೆ ಮಗುವಿಗೆ ಎದೆ ಹಾಲು ಉಣಿಸಬೇಕು, ಸಕಾಲಕ್ಕೆ ಲಸಿಕೆಗಳನ್ನು ಹಾಕಿಸುವ ಮೂಲಕ ಶಿಶುವಿನ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚು ಕಾಳಜಿ ವಹಿಸಬೇಕು ಎಂದರು.
ಆರೋಗ್ಯ ಸುರಕ್ಷಣಾಧಿಕಾರಿ ಎಸ್.ಎಸ್.ಮೆಣಸಗಿ, ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಶಿಶು ಆರೈಕೆ, ಸ್ವಚ್ಛತೆ ಹಾಗೂ ಕಾಂಗರೂ ಮದರ್ ಕೇರ್ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಮೇಶ ಕುರಿಗಾರ ಅಧ್ಯಕ್ಷತೆ ವಹಿಸಿದ್ದರು. ಪಾಂಡಪ್ಪ ಕುರಿಗಾರ, ದೇವರಾಜ ಕಟ್ಟಿಮನಿ, ಹೇಮಪ್ಪ ಕುರಿಗಾರ, ರಮೇಶ ಗೌಡರ, ಕೃಷ್ಟಪ್ಪ ಕುರಿಗಾರ, ಆಶಾ ಕಾರ್ಯಕರ್ತರಾದ ಮಂಜುಳಾ ಕಟ್ಟಿಮನಿ, ಸುಮಿತ್ರಾ ಲಮಾಣಿ, ಸುಮಿತ್ರಾ ಪೂಜಾರಿ, ತಾಯಂದಿರು, ಬಾಣಂತಿಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.