ADVERTISEMENT

‘ಮುಸ್ಲಿಮರನ್ನು ಸೇರಿಸಿಕೊಂಡು ಸಂಘಟನೆ ಬೇಡ’

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 12:51 IST
Last Updated 14 ಆಗಸ್ಟ್ 2020, 12:51 IST

ಬಾಗಲಕೋಟೆ: ದಲಿತರಿಗೆ ಅನ್ಯಾಯವಾದಾಗ ಮುಸಲ್ಮಾನರು ಅವರ ನೆರವಿಗೆ ನಿಂತ ನಿದರ್ಶನಗಳು ಇಲ್ಲ. ಹೀಗಾಗಿ ಅವರನ್ನು ಸೇರಿಸಿಕೊಂಡು ಸಂಘಟನೆ ಮಾಡುವುದನ್ನು ನಿಲ್ಲಿಸಿ ಎಂದು ದಲಿತ ಪರ ಸಂಘಟನೆಗಳಿಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಸಲಹೆ ನೀಡಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಮುಖ ತೋರಿಸಿ ಮತಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ಪಕ್ಷದಿಂದ ದಲಿತರ ರಕ್ಷಣೆ ಸಾಧ್ಯವಿಲ್ಲ ಎಂಬುದಕ್ಕೆಸರ್ವಜ್ಞ ನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲಿನ ದಾಳಿಯೇ ಸಾಕ್ಷಿಯಾಗಿದೆ ಎಂದರು.

ಘಟನೆಯನ್ನು ವಿರೋಧಿಸಿ ಇಲ್ಲಿಯವರೆಗೆ ದಲಿತ ಸಂಘಟನೆಗಳು, ಪ್ರಗತಿಪರರು, ಬುದ್ಧಿ ಜೀವಿಗಳು ಬಾಯಿ ಬಿಡದಿರುವುದು ವಿಪರ್ಯಾಸ. ಇಲ್ಲಿಯವರೆಗೂ ಆ ಘಟನೆಯನ್ನು ಖಂಡಿಸದ ಕಾಂಗ್ರೆಸ್ ನಾಯಕರು, ಮುಸ್ಲಿಮರ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಯಾವುದೇ ಮುಸ್ಲಿಮರಿಗೆ ಸಮಸ್ಯೆಯಾದಾಗ ಅವರ ಪರವಾಗಿ ನಿಂತು ಕೆಲಸ ಮಾಡುವ ದಲಿತ ಸಂಘಟನೆಗಳನ್ನು ನಾವು ನೋಡುತ್ತೇವೆ. ಆದರೆ ದಲಿತರಿಗೆ ಅನ್ಯಾಯಾವಾದಾಗ ಅವರ ನೆರವಿಗೆ ನಿಂತ ಇತಿಹಾಸವಿಲ್ಲ. ಅವರು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆ ಏನೇ ಇದ್ದರೂ ನಮ್ಮ ಬ್ಯಾನರ್ ಅಡಿಯೇ ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಸಮಾಜಘಾತುಕ ಶಕ್ತಿಗಳನ್ನು ದಲಿತ ಸಂಘಟನೆಯಲ್ಲಿ ಸೇರಿಸಿಕೊಳ್ಳಬಾರದು ಎಂಬ ವಿನಂತಿ ಮಾಡುವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.