ADVERTISEMENT

ಕಾಯಂ ಗ್ರಾಮ ಲೆಕ್ಕಾಧಿಕಾರಿ ಇಲ್ಲ: ಕಂದಾಯ ಸೇವೆ ಪಡೆಯಲು ಪರದಾಟ

ಕಾಯಂ ಗ್ರಾಮ ಲೆಕ್ಕಾಧಿಕಾರಿ ಇಲ್ಲ: ಕಟ್ಟಡ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2025, 7:01 IST
Last Updated 24 ಏಪ್ರಿಲ್ 2025, 7:01 IST
ಮಹಾಲಿಂಗಪುರ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ
ಮಹಾಲಿಂಗಪುರ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯ   

ಮಹಾಲಿಂಗಪುರ: ಪಟ್ಟಣದ ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯಾಲಯದಲ್ಲಿ ಕಾಯಂ ಆಗಿ ಗ್ರಾಮ ಲೆಕ್ಕಾಧಿಕಾರಿ ಕಾರ್ಯ ನಿರ್ವಹಿಸದೇ ಇರುವುದರಿಂದ ಸಾರ್ವಜನಿಕರು ಕಂದಾಯ ಸೇವೆ ಪಡೆಯಲು ಹೈರಾಣಾಗಿದ್ದಾರೆ.

ಒಂದೂವರೆ ತಿಂಗಳ ಹಿಂದೆ ಗ್ರಾಮ ಲೆಕ್ಕಾಧಿಕಾರಿ ಸಿ.ಎನ್.ಹೊಸಮನಿ ವರ್ಗಾವಣೆಯಾದ ನಂತರ ಪ್ರಭಾರಿಯಾಗಿ ಎಂ.ಎಸ್.ನೀಲನ್ನವರ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಇವರು ಈಗಾಗಲೇ ಚಿಮ್ಮಡ, ಯರಗಟ್ಟಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಯಾವಾಗ ಎಲ್ಲಿ ಇರುತ್ತಾರೆ ಎನ್ನುವುದೇ ತಿಳಿಯದಂತಾಗಿದೆ. ಇಬ್ಬರು ಗ್ರಾಮ ಸಹಾಯಕರಿದ್ದರೂ ಗ್ರಾಮ ಲೆಕ್ಕಾಧಿಕಾರಿಗಳ ಅಲಭ್ಯದಿಂದಾಗಿ ಸಮರ್ಪಕವಾಗಿ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ.

ಬೀನ್‍ಶೇತ್ಕಿ ಉತಾರೆ, ಖಾತೆ ಉತಾರೆ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ. ಕಚೇರಿ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ಖಾತೆದಾರರಿದ್ದಾರೆ. ನಾಲ್ವತ್ತು ಸಾವಿರದಷ್ಟು ಜನಸಂಖ್ಯೆ ಇದ್ದು, ಸಹಜವಾಗಿ ಪ್ರತಿದಿನ 30-40 ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳ ವಿಲೇವಾರಿಯಾಗುತ್ತವೆ.

ADVERTISEMENT

ವಾರಸಾ ಪಡೆಯಲು ತೇರದಾಳ ಕಂದಾಯ ನಿರೀಕ್ಷಕರ ಕಚೇರಿಗೆ ತೆರಳಿ ಅರ್ಜಿ ಅವಧಿ ಪೂರ್ಣಗೊಂಡ ನಂತರ ಅದು ಇಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಗೆ ತಲುಪುತ್ತದೆ. ಆದರೆ, ಇಲ್ಲಿ ಕಾಯಂ ಗ್ರಾಮ ಲೆಕ್ಕಾಧಿಕಾರಿ ಇಲ್ಲದೇ ಇರುವುದರಿಂದ ವಾರಸಾ ಅರ್ಜಿಗಳು ವಿಲೇವಾರಿಯಾಗುತ್ತಿಲ್ಲ.

‘ಕಾರ್ಯಾಲಯ ಶಿಥಿಲ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮಳೆ ಬಂದರೆ ಕಟ್ಟಡ ಸೋರುತ್ತದೆ. ಕಟ್ಟಡದ ಸುತ್ತ ಕಾಂಪೌಂಡ್ ಇದ್ದರೂ ಸಹ ಅದಕ್ಕೆ ಸೂಕ್ತ ರಕ್ಷಣೆ ಇಲ್ಲ. ಕೂಡಲೇ ಕಟ್ಟಡ ದುರಸ್ತಿ ಮಾಡಿಸಬೇಕು. ಕಾಯಂ ಆಗಿ ಗ್ರಾಮ ಲೆಕ್ಕಾಧಿಕಾರಿ ನೇಮಕ ಮಾಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸುತ್ತಾರೆ.

ಸರ್ಕಾರದ ಆದೇಶದಂತೆ ಮೂರು ಕಡೆ ಕೆಲಸ ಮಾಡುತ್ತಿರುವೆ. ಸಾಧ್ಯವಾದಷ್ಟು ಸೇವೆಯಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳುತ್ತಿದ್ದೇನೆ. ಮೇಲಧಿಕಾರಿಗಳು ಸಭೆ ಕರೆದಾಗ ಹೋಗಬೇಕಿರುವುದು ಅನಿವಾರ್ಯ
ಎಂ.ಎಸ್.ನೀಲನ್ನವರ ಪ್ರಭಾರ ಗ್ರಾಮ ಲೆಕ್ಕಾಧಿಕಾರಿ ಮಹಾಲಿಂಗಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.