ADVERTISEMENT

ನಮ್ ಸಾಲ್ಯಾಗ ಶೌಚಾಲಯ ಇಲ್ರಿ!

ಆಡಗಲ್: ಜಿಲ್ಲೆಯಲ್ಲಿ ಸ್ವಚ್ಛ ಭಾರತ ಸಂಕಲ್ಪ ಅಣಕವಾಡಿದ ಮಕ್ಕಳ ಗ್ರಾಮಸಭೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 13:29 IST
Last Updated 22 ನವೆಂಬರ್ 2019, 13:29 IST
ಬಾದಾಮಿ ತಾಲ್ಲೂಕಿನ ಆಡಗಲ್‌ನಲ್ಲಿ ಶುಕ್ರವಾರ ನಡೆದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳು
ಬಾದಾಮಿ ತಾಲ್ಲೂಕಿನ ಆಡಗಲ್‌ನಲ್ಲಿ ಶುಕ್ರವಾರ ನಡೆದ ಮಕ್ಕಳ ವಿಶೇಷ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದ ಶಾಲಾ ಮಕ್ಕಳು   

ಬಾಗಲಕೋಟೆ: ’ನಮ್ ಸಾಲ್ಯಾಗ 50ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಅದೀವ್ರಿ ಆದರೆ ನಮಗ ಶೌಚಾಲಯ ಇಲ್ರಿ. ಸಾಲಿ ಪಕ್ಕದಾಗ ಹೊಲ ಐತ್ರಿ ಆದರೆ ಹೊಲದೋರು ಅಲ್ಲಿ ಹೊಯ್ಸಿಗೊಡೊಲ್ರಿ..

ಬಾದಾಮಿ ತಾಲ್ಲೂಕಿನ ಆಡಗಲ್‌ನ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಸಮೀಪದ ಕಬ್ಬಳಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಣ್ಣುಮಕ್ಕಳು ಅಲವತ್ತುಕೊಂಡ ಪರಿ.

ಕಬ್ಬಳಗೇರಿ ಮಾತ್ರವಲ್ಲ, ಅಲ್ಲಿಯೇ ರೈಲ್ವೆ ಸ್ಟೇಶನ್ ಸಮೀಪದ ಸರ್ಕಾರಿ ಶಾಲೆ, ಸ್ವತಃ ಆಡಗಲ್‌ನ ಪ್ರೌಢಶಾಲೆಯಲ್ಲೂ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲದಿರುವುದು ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗೂಬಾಯಿ ಮಾನಕರ ಅವರ ಗಮನಕ್ಕೆ ಬಂದಿತು. ಸಭೆಯಲ್ಲಿದ್ದ ಎಲ್ಲರೂ ಸೋಜಿಗಪಟ್ಟರು.

ADVERTISEMENT

ಮಕ್ಕಳ ಬೇಡಿಕೆ ಗಮನಿಸಿದ ಸಿಇಒ, ವೇದಿಕೆಯಲ್ಲಿದ್ದ ಆಡಗಲ್ ಗ್ರಾಮ ಪಂಚಾಯ್ತಿ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ತಕ್ಷಣ ಕ್ರಿಯಾ ಯೋಜನೆ ರೂಪಿಸಿ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮುಂದಿನ 15 ದಿನಗಳಲ್ಲಿ ಶೌಚಾಲಯ ನಿರ್ಮಾಣ ಕಾಮಗಾರಿ ಆರಂಭವಾಗಬೇಕು. ಇಲ್ಲದಿದ್ದರೆ ಪಂಚಾಯ್ತಿಗೆ ಯಾವುದೇ ಯೋಜನೆಯಡಿ ಅನುದಾನ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಕಾಮಗಾರಿ ಆರಂಭವಾಗದಿದ್ದಲ್ಲಿ ತಮ್ಮ ಮೊಬೈಲ್ ಸಂಖ್ಯೆ 9448165624 ಕರೆ ಮಾಡಿ ದೂರು ಕೊಡುವಂತೆ ಸಭೆಯಲ್ಲಿ ನೆರೆದಿದ್ದ ಮಕ್ಕಳಿಗೆ ಹೇಳಿದರು.

ನಮ್ಮೂರಿನ ಸರ್ಕಾರಿ ಶಾಲೆಯ ಕಾಂಪೌಂಡ್ ಸಣ್ಣದಿದೆ. ಹೀಗಾಗಿ ಊರ ಮಂದಿ ಸುಲಭವಾಗಿ ಒಳಗೆ ಬಂದು ಹೊಲಸು ಮಾಡಿ ಹೋಗುತ್ತಾರೆ. ಶೌಚಕ್ಕೂ ಅಲ್ಲಿಯೇ ಕೂರುತ್ತಾರೆ. ಅದನ್ನು ನಾವೇ ಸ್ವಚ್ಛಗೊಳಿಸಬೇಕಿದೆ ಎಂದು ಪಂಚಾಕ್ಷರಿ ಹಿರೇಮಠ ಎಂಬ ನಾಲ್ಕನೇ ತರಗತಿ ಬಾಲಕ ಸಿಇಒ ಎದುರು ದೂರಿದನು. ಜಿಲ್ಲೆಯ ಎಲ್ಲ ಶಾಲೆ–ಕಾಲೇಜುಗಳಿಗೂ ಕಾಂಪೌಂಡ್ ನಿರ್ಮಾಣ ಮಾಡುವಷ್ಟು ಹಣ ಉದ್ಯೋಗ ಖಾತರಿಯಲ್ಲಿ ಇದೆ. ತಕ್ಷಣ ಕ್ರಿಯಾ ಯೋಜನೆ ರೂಪಿಸಿ ಕಳಿಸಿ ಎಂದು ಶಿಕ್ಷಣಾಧಿಕಾರಿಗೆ ಸಿಇಒ ಸೂಚಿಸಿದರು.

ಶಾಲೆಗೆ ಕಂಪ್ಯೂಟರ್ ಕೊಡಿಸಿ ಎಂದು ಆಡಗಲ್ ಶಾಲೆಯವರ ಬೇಡಿಕೆಗೆ ಸ್ಪಂದಿಸಿದ ರೀಚ್ ಸರ್ಕಾರೇತರ ಸಂಸ್ಥೆಯ ಜಿ.ಎನ್.ಕುಮಾರ್ ನಾಲ್ಕು ಕಂಪ್ಯೂಟರ್ ಕೊಡಿಸುವುದಾಗಿ ಹೇಳಿದರು. ಶಾಲೆಯ ಮೈದಾನದಲ್ಲಿ ನೀರು ನಿಲ್ಲುತ್ತಿದೆ. ಅದನ್ನು ಸಮತಟ್ಟು ಮಾಡಿಕೊಡಿ, ಮೇಲ್ಛಾವಣಿ ಸೋರುತ್ತಿದೆ. ದುರಸ್ತಿ ಮಾಡಿಸಿ, ಅಡುಗೆ ಕೋಣೆ ಕಟ್ಟಿಸಿಕೊಡಿ ಎಂಬ ಬೇಡಿಕೆಗಳನ್ನು ಮಕ್ಕಳ ಸಭೆಯ ಮುಂದಿಟ್ಟರು.

ಸಭೆಯಲ್ಲಿ ಮಕ್ಕಳ ಪ್ರತಿನಿಧಿಗಳಾಗಿ ಸದಾಶಿವ ಗೌಡರ, ಪ್ರೇಮಾ ಕೌಜಗೇರಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಭಾರತಿ ಎಸ್.ವಾಳ್ವೇಕರ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಕೋಳಪ್ಪ ಕಾಟಣ್ಣವರ, ಎಸ್ಡಿಎಂಸಿ ಅಧ್ಯಕ್ಷ ಕೋಳಪ್ಪ ತಿಪ್ಪಣ್ಣವರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಇಂದಿರಮ್ಮ ಬಳ್ಳನವರ, ಇಒ ಬಿ.ಆರ್.ಪುನೀತ್, ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ, ರೀಚ್ ಸಂಸ್ಥೆಯ ಜಿ.ಎನ್.ಸಿಂಹ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.