ADVERTISEMENT

ಬಾಗಲಕೋಟೆ | ಶುಶ್ರೂಷಕರ ಕೊರತೆ ನೀಗಿಸುವ ಅಗತ್ಯವಿದೆ- ಟಿ. ದಿಲೀಪಕುಮಾರ

ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 2:40 IST
Last Updated 6 ಡಿಸೆಂಬರ್ 2025, 2:40 IST
ಬಾಗಲಕೋಟೆಯ ಬಿವಿವಿ ಸಂಘದ ಮೆಡಿಕಲ್ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರವನ್ನು ಡಾ.ದಿಲೀಪಕುಮಾರ ಲೋಕಾರ್ಪಣೆಗೊಳಿಸಿದರು
ಬಾಗಲಕೋಟೆಯ ಬಿವಿವಿ ಸಂಘದ ಮೆಡಿಕಲ್ ಕಾಲೇಜಿನ ಆವರಣದಲ್ಲಿ ನಿರ್ಮಿಸಲಾದ ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರವನ್ನು ಡಾ.ದಿಲೀಪಕುಮಾರ ಲೋಕಾರ್ಪಣೆಗೊಳಿಸಿದರು   

ಬಾಗಲಕೋಟೆ: ದೇಶದಲ್ಲಿ ರೋಗಿಗಳ ಉಪಚಾರಕ್ಕೆ ಗಣನೀಯ ಪ್ರಮಾಣದಲ್ಲಿ ಶುಶ್ರೂಷಕರ ಕೊರತೆಯಿದ್ದು, ಅದನ್ನು ಸರಿದೂಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಡಬೇಕಿದೆ ಎಂದು ಭಾರತೀಯ ನರ್ಸಿಂಗ್ ಕೌನ್ಸಿಲ್ ಅಧ್ಯಕ್ಷ ಡಾ.ಟಿ. ದಿಲೀಪಕುಮಾರ ಅಭಿಪ್ರಾಯಪಟ್ಟರು.

ನಗರದ ಬಿವಿವಿ ಸಂಘದ ಮೆಡಿಕಲ್ ಕಾಲೇಜು ಆವರಣದಲ್ಲಿ ನಿರ್ಮಿಸಲಾಗಿರುವ ದೇಶದ ಎರಡನೇ ರಾಷ್ಟ್ರೀಯ ರೆಫರನ್ಸ್ ಸಿಮ್ಯುಲೇಶನ್ ಕೇಂದ್ರವನ್ನು ಉದ್ಘಾಟಿಸಿದ ನಂತರ ಶತಾಬ್ಧಿ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದರು.

ಅಮೇರಿಕದಲ್ಲಿ ಪ್ರತಿ ಸಾವಿರ ರೋಗಿಗಳಿಗೆ ಶೇ 12.5 ಶುಶ್ರೂಷಕರು ಇದ್ದರೆ, ನೆರೆ ರಾಷ್ಟ್ರ ಥೈಲ್ಯಾಂಡ್‌ನಲ್ಲಿ ಶೇ 3.1, ಶ್ರೀಲಂಕಾದಲ್ಲಿ ಶೇ 2.4ರಷ್ಟು ಇದ್ದಾರೆ. ಭಾರತದಲ್ಲಿ ಪ್ರತಿ ಸಾವಿರ ರೋಗಿಗೆ ಶೇ 1.1 ಮಾತ್ರವೇ ನರ್ಸಗಳಿದ್ದಾರೆ. ಇತರ ದೇಶಗಳಲ್ಲಿ ಪ್ರತಿ ವೈದ್ಯರಿಗೆ ಮೂವರು ನರ್ಸ್‌ಗಳಿದ್ದರೆ, ಭಾರತದಲ್ಲಿ ಅದರ ಸಂಖ್ಯೆಯೂ ಕಡಿಮೆಯಿದೆ ಎಂದರು.

ADVERTISEMENT

ಕೋವಿಡ್ ಸಂದರ್ಭದಲ್ಲಿ ನರ್ಸ್‌ಗಳ ಪ್ರಾಮುಖ್ಯತೆ ಜಗತ್ತಿಗೆ ತಿಳಿದಿದೆ. ನರ್ಸಿಂಗ್ ಸಿಬ್ಬಂದಿಯು ವೈದ್ಯಕೀಯ ಕ್ಷೇತ್ರದ ಜೀವಾಳ. ನುರಿತ, ಕೌಶಲವುಳ್ಳ ನರ್ಸ್‌ಗಳಿಗೆ ಜಗತ್ತಿನಾದ್ಯಂತ ಬೇಡಿಕೆಯಿದೆ. ಜಾಗತಿಕವಾಗಿಯೂ ನರ್ಸ್‌ಗಳ ಕೊರತೆಯಿದ್ದು, ಜಗತ್ತಿನಾದ್ಯಂತ ಒಟ್ಟು 6 ದಶಲಕ್ಷದಷ್ಟು ನರ್ಸ್‌ಗಳ ಕೊರತೆಯುಂಟಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಗುಣಮಟ್ಟದ ನರ್ಸಿಂಗ್ ಶಿಕ್ಷಣದ ಕಡೆಗೆ ಒತ್ತು ನೀಡಲಾಗುತ್ತಿದೆ ಎಂದು ಹೇಳಿದ ಡಾ.ದಿಲೀಪಕುಮಾರ, ನರ್ಸ್‌ಗಳ ಮಹತ್ವವನ್ನು ಮನಗಂಡಿರುವ ಭಾರತ ಸರ್ಕಾರವೂ ಕೂಡ ಪ್ರಸಕ್ತ ಸಾಲಿನಲ್ಲಿ 157 ನರ್ಸಿಂಗ್ ಕಾಲೇಜುಗಳ ಆರಂಭಕ್ಕೆ ಹಸಿರು ನಿಶಾನೆ ತೋರಿದೆ ಎಂದರು.

ದೆಹಲಿಯ ಗುರಗಾಂವ್ ಹೊರತುಪಡಿಸಿದರೆ ಬಾಗಲಕೋಟೆಯಲ್ಲಿ ಸಿಮ್ಯುಲೇಶನ್ ಕೇಂದ್ರ ಸ್ಥಾಪಿಸಲಾಗಿದೆ. ಭಾರತದಲ್ಲಿ ಅದರ ಅಗತ್ಯತೆಯನ್ನು ಮನಗಂಡು ಮೊದಲು ಗುರುಗುಂವಾನಲ್ಲಿ ಸ್ಥಾಪಿಸಲಾಯಿತು. ಈಗ ಬಾಗಲಕೋಟೆಯಲ್ಲಿ ಎರಡನೇ ಸಿಮ್ಯೂಲೇಶನ್ ಕೇಂದ್ರದ ಜತೆಗೆ ದೇಶದ ಮೊದಲ ಮೌಲ್ಯಮಾಪನ ಮತ್ತು ಪ್ರಮಾಣಪತ್ರ ಕೇಂದ್ರವನ್ನೂ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ನರ್ಸಿಂಗ್ ಕ್ಷೇತ್ರವು ವೈದ್ಯಕೀಯ ಕ್ಷೇತ್ರದ ಹೃದಯವಾಗಿದೆ. ಈ ಕ್ಷೇತ್ರ ರೋಗಿಗಳ ಉಪಚಾರದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ. ವೃತ್ತಿ ನಿರ್ವಹಿಸುವ ಸಂದರ್ಭದಲ್ಲಿ ಯಾವುದೇ ತಪ್ಪುಗಳಾಗದಂತೆ ನರ್ಸ್‌ಗಳನ್ನು ತಯಾರು ಮಾಡಬೇಕು. ಆ ನಿಟ್ಟಿನಲ್ಲಿ ಸಿಮ್ಯೂಲೇಶನ್ ಕೇಂದ್ರ ಸಹಕಾರಿಯಾಗಲಿದೆ ಎಂದು ಹೇಳಿದರು.

ಜೆಪ್ಯಾಗೊ ನಿರ್ದೇಶಕ ಡಾ.ಕಮಲೇಶ ಲಾಲ್ಚಂದಾನಿ, ಲ್ಯಾರ್ಡಲ್‌ನ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಸಿಂಗ್, ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ವೈದ್ಯಕೀಯ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ (ಬೇವೂರ), ಸಜ್ಜಲ ಶ್ರೀ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ದಿಲೀಪ್ ನಾಟೆಕರ್, ರಾಜೀವಗಾಂಧಿ ಆರೋಗ್ಯ ವಿವಿಯ ನರ್ಸಿಂಗ್ ಪಿಎಚ್ ಡಿ ವಿಭಾಗದ ನೋಡಲ್ ಅಧಿಕಾರಿ ಡಾ.ಕೆ.ರೆಡ್ಡೆಮ್ಮ, ದೆಹಲಿ ಏಮ್ಸ್‌ನ ನಿವೃತ್ತ ಪ್ರಾಚಾರ್ಯ ಡಾ.ಮಂಜು ವತ್ಸ, ಐಎನ್‌ಸಿ ಕಾರ್ಯದರ್ಶಿ ಸರ್ವಜೀತ್ ಕೌರ್ ಇದ್ದರು.

ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಇಂಗ್ಲೆಂಡಿನ ಸಿಮ್ಕಾಂ ಅಕಾಡೆಮಿ ಸಿಇಒ ಕ್ಯಾರಿ ಹ್ಯಾಮಿಲ್ಟನ್, ಸಿಂಗಾಪೂರದ ನರ್ಸಿಂಗ್ ಅಧ್ಯಯನದ ನಿರ್ದೇಶಕ ಲೌರಾ ಥಾಮ್, ಆಸ್ಟ್ರೇಲಿಯಾದ ಹೆಲ್ತ್ಕೇರ್ ಮುಖ್ಯಸ್ಥ ಜೇಮ್ಸ್ ನೈಸ್ಮಿಥ್ ಮತ್ತು ಅಲ್ವಿನ್ ಟಾಂಗ್ ಮತ್ತಿತರರು ಪಾಲ್ಗೊಂಡಿದ್ದರು. ಮನೋವಿಜ್ಞಾನ ನರ್ಸಿಂಗ್ ವಿಭಾಗದ ಮುಖ್ಯಸ್ಥ ಡಾ.ಶ್ರೀಹರ್ಷ ವಂದಿಸಿದರು.

ನರ್ಸಿಂಗ್ ಕ್ಷೇತ್ರಕ್ಕೆ ಬೇಡಿಕೆ

ನರ್ಸಿಂಗ್ ಶಿಕ್ಷಣ ವೈದ್ಯಕೀಯ ಕ್ಷೇತ್ರ ಬೆನ್ನೆಲುಬು. ಈ ಕ್ಷೇತ್ರಕ್ಕೆ ಹೆಚ್ಚಿನ ಬೇಡಿಕೆಯಿದ್ದು ಅದಕ್ಕೆ ತಕ್ಕದಾದ ಆದ್ಯತೆಯನ್ನು ಒದಗಿಸಬೇಕಿದೆ. ದೇಶದ ಎರಡನೇ ಸಿಮ್ಯುಲೇಶನ್ ಕೇಂದ್ರವನ್ನು ನಾನು ಬೆಂಗಳೂರಿಗೆ ಕೇಳಿದ್ದೆ ಆದರೆ ಬಾಗಲಕೋಟೆಯಲ್ಲಿ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಬಿ.ಸಿ.ಭಗವಾನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.