ಬಾಗಲಕೋಟೆ: ‘ಆರ್‌ಸೆಟ್ ಸಂಸ್ಥೆ ಲಕ್ಷಾಂತರ ಜನರಿಗೆ ಸ್ವ ಉದ್ಯೋಗ ತರಬೇತಿ ನೀಡಿದ್ದು, ಅದರಲ್ಲಿ ಶೇ75ರಷ್ಟು ಜನರು ಸ್ವಂತ ಉದ್ಯೋಗ ಪ್ರಾರಂಭಿಸಿದ್ದಾರೆ. ನಿರುದ್ಯೋಗಿಗಳಿಗೆ ಆರ್‌ಸೆಟ್ ಆಶಾಕಿರಣವಾಗಿದೆ’ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.
ಬಿ.ವಿ.ವಿ. ಸಂಘದ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮತ್ತು ಸಂಘದ ಕೊಟೆಕ್ ಮಹೀಂದ್ರಾ ಬ್ಯಾಂಕ್ ಆರ್‌ಸೆಟ್ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕೇಂದ್ರ ಸರ್ಕಾರ ಎಂಎಸ್‍ಎಂಇ ಮೂಲಕ ಯುವಕರಿಗೆ ಅವರ ಬಯಸುವ ಕ್ಷೇತ್ರದಲ್ಲಿ ತರಬೇತಿ ನೀಡಿ, ಸ್ವಂತ ಉದ್ಯಮ ಪ್ರಾರಂಭಕ್ಕೆ ನೆರವಾಗುತ್ತಿದೆ. ಯುವಕರು ಇದರ ಲಾಭ ಪಡೆದು ಉದ್ಯಮ ಪ್ರಾರಂಭಿಸಿ, ಬೇರೆಯವರಿಗೆ ಉದ್ಯೋಗ ನೀಡುವಂತಾಗಬೇಕು. ದೇಶದ ಆರ್ಥಿಕತೆಗೂ ಕೊಡುಗೆ ನೀಡಬೇಕು’ ಎಂದರು.
ಸಂಸ್ಥೆಯ ವೆಬ್‌ಸೈಟ್‌ಗೆ ಚಾಲನೆ ನೀಡಿ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ, ‘ಪ್ರಧಾನಿ ನರೇಂದ್ರ ಮೋದಿ ಸ್ವಯಂ ಉದ್ಯೋಗ ಸೃಷ್ಟಿಗೆ ಹೆಚ್ಚು ಒತ್ತು ನೀಡಿದ್ದಾರೆ. ಸರ್ಕಾರ ಆರ್ಥಿಕ ಸಹಾಯವನ್ನೂ ನೀಡುತ್ತಿದೆ. ಅನುದಾನ ಸರಿಯಾದ ಬಳಕೆ ಆಗಬೇಕು. ಸಂಘದ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ದೇಶಕ್ಕೆ ಮಾದರಿಯಾಗಿದೆ’ ಎಂದು ಹೇಳಿದರು.
ಬೆಂಗಳೂರಿನ ಕೊಟೆಕ್ ಮಹೀಂದ್ರ ಬ್ಯಾಂಕ್‍ನ ಎಸ್.ಇ. ನಟರಾಜ್ ಮಾತನಾಡಿ, ‘ಆರ್‌ಸೆಟ್ ಸಂಸ್ಥೆ ಇಲ್ಲಿಯವರೆಗೆ ಅಂದಾಜು 52 ಲಕ್ಷ ಜನರಿಗೆ ವಿವಿಧ ತರಬೇತಿ ನಿಡಿದೆ. ಮೊದಲು ಪುರುಷರಷ್ಟೇ ಉದ್ಯೋಗ ಮಾಡುತ್ತಿದ್ದರು. ಈಗ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ’ ಎಂದರು.
ಬಿ.ವಿ.ವಿ. ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ‘ನರ್ಸರಿಯಿಂದ ಸ್ನಾತಕೋತ್ತರದ ವರೆಗೆ ಎಲ್ಲ ವಿಭಾಗಗಳಲ್ಲೂ ಶಿಕ್ಷಣ ನೀಡುವ ಜತೆಗೆ ಉದ್ಯೋಗಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಸಂಘದಿಂದ ಆರ್‌ಸೆಟ್ ಸಂಸ್ಥೆ ಪ್ರಾರಂಭಿಸಲಾಯಿತು. ಹಲವರ ಜನರ ಬಾಳಿಗೆ ಬೆಳಕಾಗಿದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರದ ಪಿಎಂಇಜಿಪಿ ಹಾಗೂ ವಿಶ್ವಕರ್ಮ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಸಂಸ್ಥೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಇಂದಿನ ದಿನಗಳಲ್ಲಿ ಕೌಶಲಯುಕ್ತ ಚಾಲಕರು, ಅಡಿಗೆ ಮಾಡುವವರು ಹಾಗೂ ಸೆಕ್ಯೂರಿಟಿ ಗಾರ್ಡ್‍ಗಳ ಹೆಚ್ಚಿನ ಅವಶ್ಯಕತೆ ಇದೆ’ ಎಂದರು.
ಉದಯೋನ್ಮುಖ ಉದ್ದಿಮೆದಾರರ ಯಶೋಗಾಥೆಗಳ ಪುಸ್ತಕವನ್ನು ಸಂಸದ ಪಿ.ಸಿ.ಗದ್ದಿಗೌಡರ ಬಿಡುಗಡೆಗೊಳಿಸಿದರು. ಸ್ವಂತ ಉದ್ಯಮ ಪ್ರಾರಂಭಿಸಿದವರು ಹಾಗೂ ಆರ್‌ಸೆಟ್ ಸಂಸ್ಥೆಯ ಇಲ್ಲಿಯವರೆಗಿನ ಮುಖ್ಯಸ್ಥರನ್ನು ಸತ್ಕರಿಸಲಾಯಿತು.
ಮುಂಬೈನ ಕೊಟೆಕ ಮಹೀಂದ್ರಾ ಬ್ಯಾಂಕ್‍ನ ನಿಶಾದ ದಾತರ್, ರಾಜು ಕೋರಿ, ಕೆ.ಎನ್.ಮಂಜುನಾಥ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಿವಾನಂದ ಶಾಬಾದಿ, ಬಸವರಾಜ ದೇಸಾಯಿ, ಎಸ್.ಆರ್.ಮನಹಳ್ಳಿ, ಅಶೋಕ ಸಜ್ಜನ, ಕುಮಾರ ಯಳ್ಳಿಗುತ್ತಿ, ಮಹಾಂತೇಶ ಶೆಟ್ಟರ್ ಇದ್ದರು.
ಗೌರಿ ಶಂಕರ ಕಲ್ಯಾಣ ಮಂಟಪದಲ್ಲಿ ಮೂರು ದಿನ ನಡೆಯುವ ಸ್ವಯಂ ಉದ್ಯೋಗಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಸಂಸದ ಗದ್ದಿಗೌಡರ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.