ADVERTISEMENT

ಬಾದಾಮಿ | ತಾಳೆ ಕೃಷಿಯಿಂದ ಅಧಿಕ ಲಾಭ ಕಂಡ 92ರ ಹರೆಯದ ರೈತ ವೀರಯ್ಯ

ಐದು ಎಕರೆ ಹೊಲದಲ್ಲಿ ತಾಳೆ ಸಸಿ ನಾಟಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 3:55 IST
Last Updated 25 ಜುಲೈ 2025, 3:55 IST
ಬಾದಾಮಿ ಸಮೀಪದ ಬಿ.ಎನ್. ಜಾಲಿಹಾಳದಲ್ಲಿ ರೈತ ವೀರಯ್ಯ ಗುರುಶಾಂತನವರ ಹೊಲದಲ್ಲಿ ಬೆಳೆದಿರುವ ತಾಳೆ ಗಿಡಗಳು
ಬಾದಾಮಿ ಸಮೀಪದ ಬಿ.ಎನ್. ಜಾಲಿಹಾಳದಲ್ಲಿ ರೈತ ವೀರಯ್ಯ ಗುರುಶಾಂತನವರ ಹೊಲದಲ್ಲಿ ಬೆಳೆದಿರುವ ತಾಳೆ ಗಿಡಗಳು   

ಬಾದಾಮಿ: ದೂರದಿಂದ ವೀಕ್ಷಿಸಿದರೆ ತೆಂಗಿನ ಮರದಂತೆ ಗೋಚರಿಸುತ್ತವೆ, ಸಮೀಪ ಹೋಗಿ ನೋಡಿದರೆ ತೆಂಗಿನ ಮರಗಳಲ್ಲ ತಾಳೆ ಮರಗಳು ಎಂದು ಗೊತ್ತಾಗುತ್ತದೆ. ಎತ್ತರ ಬೆಳೆದ ತಾಳೆಮರದ ಕೊರಳೊಳಗಿಂದ ಬಾಗಿದ ತಾಳೆ ಗೊನೆಗಳನ್ನು ತಾಲ್ಲೂಕಿನ (ಭದ್ರನಾಯಕ) ಬಿ.ಎನ್. ಜಾಲಿಹಾಳ ಗ್ರಾಮದ ಹೊಲವೊಂದರಲ್ಲಿ ವೀಕ್ಷಿಸಬಹುದಾಗಿದೆ. 

92ರ ಹರೆಯದ ರೈತ ವೀರಯ್ಯ ಗುರುಶಾಂತನವರ ಅವರ ಹೊಲಕ್ಕೆ ಹೋದರೆ ಹೊಲದ ತುಂಬೆಲ್ಲ ತಾಳೆ ಮರಗಳ ಬಿಚ್ಚಿದ ಗರಿಗಳು ಮತ್ತು ಮರದ ಕೊರಳೊಳಗಿಂದ ಹಕ್ಕಿ ಪಕ್ಷಿಗಳ ಕಲರವದ ಜೊತೆಗೆ ಕಪ್ಪು ಮತ್ತು ಕೆಂಪು ವರ್ಣದ ತಾಳೆ ಹಣ್ಣಿನ ಬಾಗಿದ ಗೊನೆಗಳು ನಿಮ್ಮನ್ನು ಸ್ವಾಗತಿಸುತ್ತವೆ.

‘ಏಳುವರೆ ಎಕರೆ ಹೊಲದಲ್ಲಿ ಮೊದಲು ಶೇಂಗಾ, ತೊಗರಿ ಮತ್ತು ಮೆಕ್ಕೆಜೋಳವನ್ನು ಬೆಳೆಯುತ್ತಿದ್ದೇವು. ಬೆಳೆಗಳಿಗೆ ರೋಗ ಮತ್ತು ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಬರದಿದ್ದರಿಂದ ಪ್ರತಿ ವರ್ಷ ಖರ್ಚು ಹೆಚ್ಚಾಗುತ್ತಿದ್ದು ಲಾಭ ಬರಲಿಲ್ಲ. ಪರ್ಯಾಯ ಬೆಳೆಯನ್ನು ಏಕೆ ಬೆಳೆಯಬಾರದು ಎಂದು ಆಲೋಚಿಸಿ ಮೊದಲು ಐದು ಎಕರೆ ಭೂಮಿಯಲ್ಲಿ ತಾಳೆ ಮರದ ಅಗಿಯನ್ನು ನೆಟ್ಟೆ’ ಎಂದು ವೀರಯ್ಯ ಹೇಳಿದರು.

ADVERTISEMENT

‘ಗಂಗಾವತಿಯ ತ್ರಿಎಫ್ಆಯಿಲ್ ಕಂಪನಿಯವರು ಉಚಿತವಾಗಿ ಅಗಿ ಮತ್ತು ಗೊಬ್ಬರವನ್ನು ಕೊಟ್ಟರು ಸಾಗಾಣಿಕೆ ವೆಚ್ಚ ನಮ್ಮದು. 2017ರಲ್ಲಿ ಐದು ಎಕರೆ ಪ್ರದೇಶದಲ್ಲಿ ತಾಳೆ ಮರವನ್ನು ಬೆಳೆಸಿದೆ. ಮರ ದೊಡ್ಡವು ಆಗುವವರೆಗೆ ಮಧ್ಯದಲ್ಲಿ ಪರ್ಯಾಯವಾಗಿ ಶೇಂಗಾ, ತೊಗರಿ ಮತ್ತು ಮಕ್ಕೆಜೋಳವನ್ನು ಬೆಳೆದು ಉತ್ತಮ ಫಸಲನ್ನು ಪಡೆದೆ. ಮೂರು ವರ್ಷಗಳ ನಂತರ ತಾಳೆ ಮರದ ಇಳುವರಿ ಆರಂಭವಾಯಿತು’ ಎಂದು ರೈತ ಹೇಳಿದರು.

‘ಎಕರೆಗೆ 54 ಸಸಿಗಳಂತೆ ಒಟ್ಟು ಏಳು ಎಕರೆ ಪ್ರದೇಶದಲ್ಲಿ 405 ತಾಳೆ ಗಿಡಗಳನ್ನು ನೆಡಲಾಗಿದೆ. ಭೂಮಿ ಹದ ಮಾಡುವುದು, ಕಳೆ ತೆಗೆಯುವುದು, ಗೊಬ್ಬರ ಮತ್ತು ಕಾರ್ಮಿಕರ ವೆಚ್ಚ ಸೇರಿದಂತೆ ಪ್ರತಿ ವರ್ಷ ಎಕರೆಗೆ ₹40 ಸಾವಿರ ವೆಚ್ಚ ಬರುವುದು. ಪ್ರತಿ ಎಕರೆಗೆ ವರ್ಷಕ್ಕೆ ಎರಡು ಬಾರಿ 8 ಟನ್ ತಾಳೆ ಹಣ್ಣು ಇಳುವರಿ ಬರುತ್ತದೆ. ಮಾರುಕಟ್ಟೆಯಲ್ಲಿ ಪ್ರತಿ ಟನ್‌ಗೆ ₹12 ಸಾವಿರದಿಂದ ₹18 ಸಾವಿರ ವರೆಗೆ ಮಾರಾಟವಾಗುತ್ತದೆ’ ಎಂದು ಹೇಳಿದರು.

‘ಶರಣಬಸಯ್ಯ ಮತ್ತು ಬಸಲಿಂಗಯ್ಯ ಪುತ್ರರು ತಾಳೆ ಗಿಡದ ಸಂರಕ್ಷಣೆ, ಇಳುವರಿ, ಸಾಗಾಟ ಮತ್ತು ಮಾರಾಟದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಾರೆ. ‘ತಾಳಿದವನು ಬಾಳಿಯಾನು’ ಎಂಬ ನಾಣ್ನುಡಿಯಂತೆ ತಾಳ್ಮೆಯಿಂದ ತಾಳೆ ಬೆಳೆಯನ್ನು ಬೆಳೆದು ರೈತರು ಅಧಿಕ ಲಾಭವನ್ನು ಪಡೆಯಬಹುದು’ ಎಂದ ರೈತ ಹೇಳಿದರು.

‘ತಾಲ್ಲೂಕಿನಲ್ಲಿ 250 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಬೆಳೆಯುವ ಗುರಿಯನ್ನು ಹೊಂದಿದೆ. 97 ಹೆಕ್ಟೇರ್ ಪ್ರದೇಶದಲ್ಲಿ ತಾಳೆ ಗಿಡಗಳನ್ನು ಬೆಳೆಯಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಪಿ. ಪಾಟೀಲ ತಿಳಿಸಿದರು.

ಕೇಂದ್ರ ಸರ್ಕಾರ ತಾಳೆ ಬೆಳೆಯಲು ಉಚಿತ ತಾಳೆ ಸಸಿ ನಾಲ್ಕು ವರ್ಷ ಬೆಳೆ ನಿರ್ವಹಣೆಗೆ ಪ್ರತಿ ಹೆಕ್ಟೇರಿಗೆ ₹5200 ಅಂತರ ಬೆಳೆಗೆ ₹5200 ಸಹಾಯಧನ ಹನಿ ನೀರಾವರಿ ಕೃಷಿ ಹೊಂಡಕ್ಕೆ ಸಹಾಯ ಧನ ಕೊಡಲಾಗುವುದು
ಬಿ.ಪಿ. ಪಾಟೀಲ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.