ರಾಜ್ಯದ ಪ್ರಮುಖ ಸಮುದಾಯಗಳಲ್ಲಿ ಒಂದಾದ ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠವು ಈಗ ಮತ್ತೆ ಸುದ್ದಿಯಲ್ಲಿದೆ. 2ಎ ಮೀಸಲಾತಿ ಹೋರಾಟದ ಕಾರಣಕ್ಕೆ ಈ ಪೀಠ ಹಾಗೂ ಅದರ ನೇತೃತ್ವ ವಹಿಸಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸುದ್ದಿಯಲ್ಲಿದ್ದರು. ಈಗ ಸ್ವಾಮೀಜಿ ಮತ್ತು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರ ನಡುವಿನ ವೈಮನಸ್ಸಿನ ಕಾರಣಕ್ಕೆ ಉಂಟಾಗಿರುವ ವಿವಾದ ಸದ್ದು ಮಾಡುತ್ತಿದೆ. ಸ್ವಾಮೀಜಿಯವರ ಉಚ್ಚಾಟನೆ, ಮತ್ತೊಂದು ಪೀಠ ಸ್ಥಾಪನೆ... ಇನ್ನಿತರ ವಿಚಾರಗಳೆಲ್ಲ ಚರ್ಚೆಯಾಗುತ್ತಿವೆ
ರಾಜ್ಯದ ಪಂಚಮಸಾಲಿ ಸಮಾಜವು ಮೀಸಲಾತಿ ಹೋರಾಟ, ಅದರ ಹಿನ್ನೆಲೆಯಲ್ಲಿ ನಡೆಯುವ ರಾಜಕೀಯ ಬೆಳವಣಿಗೆ, ಅಧಿಕಾರ ಮೇಲಾಟದಿಂದಾಗಿ ಸದಾ ಸುದ್ದಿಯಲ್ಲಿರುತ್ತದೆ. ಧಾರ್ಮಿಕ ಕಾರ್ಯಕ್ರಮಗಳಿಗಿಂತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕೂಡಲಸಂಗಮದ ಪಂಚಮಸಾಲಿ ಪೀಠದ ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಪೀಠಾಧ್ಯಕ್ಷ ಸ್ಥಾನಕ್ಕೆ ಈಗ ಸಂಚಕಾರ ತಂದಿದೆ.
ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಇರುವ ಪಂಚಮಸಾಲಿ ಸಮಾಜದ ಜನಪ್ರತಿನಿಧಿಗಳ ರಾಜಕೀಯ ಅಧಿಕಾರದ ದಾಹ 2ಎ ಮೀಸಲಾತಿ ಹೋರಾಟ ಮಾತ್ರವಲ್ಲದೆ, ಕೂಡಲಸಂಗಮದ ಪೀಠವೂ ಆಗಾಗ್ಗೆ ದಾಳವಾಗುತ್ತಾ ಬಂದಿದೆ; ಸ್ವಾಮೀಜಿಯನ್ನು ಪೀಠದಲ್ಲಿ ಕೂಡಿಸಿದವರು, ಪೀಠ ಸ್ಥಾಪನೆಗೆ ಆರ್ಥಿಕ ನೆರವು ನೀಡಿ ಬೆನ್ನೆಲುಬು ಆದವರು, ಸಚಿವ ಸ್ಥಾನಕ್ಕೇರಲು, ಟಿಕೆಟ್ ಪಡೆಯಲು ಸ್ವಾಮೀಜಿ ನೆರವು ಪಡೆದವರೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಪೀಠದ ವಿರುದ್ಧ ಸಮರ ಸಾರಿದವರೇ ಎನ್ನುತ್ತಾರೆ ಭಕ್ತರು.
ಪೀಠದ ಸ್ಥಾಪನೆ, ವಿವಾದ: ಕೂಡಲಸಂಗಮ ಪೀಠಕ್ಕೂ ವಿವಾದಕ್ಕೂ ಹಳೆಯ ನಂಟು. ಆರಂಭದಿಂದಲೂ ಈ ಪೀಠದೊಂದಿಗೆ ರಾಜಕೀಯ ಬೆರೆತುಕೊಂಡಿದೆ. ಚುನಾವಣೆಯಲ್ಲಿ ಮತಗಳಿಕೆ, ಸೋಲು ಗೆಲುವು ಎಲ್ಲಾ ಲೆಕ್ಕಾಚಾರವೂ ಇದರೊಳಗಿದೆ ಎಂದು ಹೇಳುತ್ತಾರೆ ಸಮಾಜದ ಆಳ ಅಗಲ ಬಲ್ಲವರು.
2008ರಲ್ಲಿ ಪಂಚಮಸಾಲಿ ಸಮಾಜದ ಬಾವಿ ಬೆಟ್ಟಪ್ಪ, ಉಮಾಪತಿ, ಬಸವರಾಜ ದಿಂಡೂರ ಮತ್ತಿತರ ಮುಖಂಡರು ಹರಿಹರದಲ್ಲಿ ಪಂಚಮಸಾಲಿ ಪೀಠ ಸ್ಥಾಪಿಸಲು ಮುಂದಾದರು. ‘ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ’ದ ಹೆಸರಿನಲ್ಲಿ, ಪಂಚಪೀಠಾಧೀಶ್ವರ ಮಾರ್ಗದರ್ಶನದಲ್ಲಿ ಸ್ಥಾಪನೆ ಕಾರ್ಯ ನಡೆದಿತ್ತು.
‘ವೀರಶೈವ ಲಿಂಗಾಯತ’ ಎಂಬುದನ್ನು ಒಪ್ಪದ ಹುಬ್ಬಳ್ಳಿ–ಧಾರವಾಡ, ಗದಗ ಭಾಗದ ಭಕ್ತರು ಬಸವಣ್ಣನ ತತ್ವ ಆಧಾರಿತ ಲಿಂಗಾಯತ ಪಂಚಮಸಾಲಿ ಪೀಠ ಸ್ಥಾಪನೆಗೆ ಮುಂದಾದರು. ಪ್ರಭಣ್ಣ ಹುಣಶಿಕಟ್ಟಿ ಅಧ್ಯಕ್ಷ, ನೀಲಕಂಠ ಅಸೂಟಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ರಚನೆಯಾಯಿತು. ಬಸವಣ್ಣನ ಕಾರ್ಯಕ್ಷೇತ್ರವಾದ ಕೂಡಲಸಂಗಮದಲ್ಲೇ ಪೀಠ ಸ್ಥಾಪಿಸಲು ನಿರ್ಧರಿಸಲಾಯಿತು. ಆಗ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಬಳಿ ವಿಷಯ ಹೋದಾಗ, ಅವರು ತಮ್ಮಲ್ಲಿಯೇ ಇದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಸೂಚಿಸಿದರು. 2008ರಲ್ಲಿ ಪೀಠ ಸ್ಥಾಪನೆಯಾಗಿ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠಾಧ್ಯಕ್ಷರಾದರು.
ಬಾಡಿಗೆ ಕಟ್ಟಡದಲ್ಲಿದ್ದ ಪಂಚಮಸಾಲಿ ಪೀಠಕ್ಕೆ ಭೂಮಿ ತೆಗೆದುಕೊಳ್ಳಲು ಮಾಜಿ ಸಚಿವ ಮುರುಗೇಶ ನಿರಾಣಿ ಆರ್ಥಿಕ ನೆರವು ನೀಡಿದರು. ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರ ನೀಡಿದ ಅನುದಾನದಲ್ಲಿ ಪೀಠದ ಕಟ್ಟಡ ನಿರ್ಮಾಣವಾಯಿತು.
ಮುಂಚೂಣಿಗೆ ಬಂದ ಸ್ವಾಮೀಜಿ: ಪೀಠಾಧ್ಯಕ್ಷರಾಗುತ್ತಲೇ ಸಮಾಜದ ಗಮನಸೆಳೆಯುವಂತಹ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಜನಪ್ರಿಯತೆ ಗಳಿಸಿದರು. ಪೀಠದಿಂದ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಆರಂಭಿಸಿ, ಹೋರಾಟಗಾರ ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಮಾಣಿಕ್ ಸರ್ಕಾರ್, ಎಂ.ಎಸ್.ಸ್ವಾಮಿನಾಥನ್, ರಾಜೇಂದ್ರ ಸಿಂಗ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಾಗರ ಪಂಚಮಿ ಹಬ್ಬವನ್ನು ಬಸವ ಪಂಚಮಿಯಾಗಿಸಿ, ಕಲ್ಲು ನಾಗರಕ್ಕೆ ಹಾಲೆರೆಯದೇ, ಮಕ್ಕಳಿಗೆ ಹಾಲು ಕುಡಿಸಿ ಎಂಬ ಅಭಿಯಾನ ನಡೆಸಿದರು.
ಮಹದಾಯಿ ಹೋರಾಟ, ಗೋವಾದಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯವಾದಾಗ ಗೋವಾ ರಾಜ್ಯಕ್ಕೆ ಹೋಗಿ ನಡೆಸಿದ ಪ್ರತಿಭಟನೆ, ಕಪ್ಪತ್ತಗುಡ್ಡ ಉಳಿಸುವ ಹೋರಾಟ, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಭಾಗಿಯಾದ ನಂತರ ಅವರ ಜನಪ್ರಿಯತೆ ಉತ್ತುಂಗಕ್ಕೆ ಏರಿತು. ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಒಡನಾಟವೂ ಹೆಚ್ಚಾಯಿತು. 2019ರಲ್ಲಿ ಟ್ರಸ್ಟ್‌ನಲ್ಲಿ ಆರಂಭವಾದ ಭಿನ್ನಾಭಿಪ್ರಾಯದ ಫಲವಾಗಿ ಮಠದಲ್ಲಿದ್ದು ಧಾರ್ಮಿಕ ಕಾರ್ಯಕ್ರಮ ಆಯೋಜಿಸಬೇಕು ಎಂದು ಟ್ರಸ್ಟ್ ಅವರಿಗೆ ನೋಟಿಸ್ ನೀಡಿತ್ತು. ಮತ್ತೆ ಸ್ವಾಮೀಜಿ ಮುನ್ನೆಲೆಗೆ ಬಂದಿದ್ದು ‘ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿ ನಡೆದ ಹೋರಾಟದ ಮೂಲಕ.
ರಾಜಕೀಯ ಮುಖಂಡರ ಜಟಾಪಟಿ: ಮೀಸಲಾತಿಗಾಗಿ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ಸ್ವಾಮೀಜಿ ಮುಂದಾದರು. ಅವರಿಗೆ ಈಗ ಟ್ರಸ್ಟ್ ಅಧ್ಯಕ್ಷರಾಗಿರುವ ವಿಜಯಾನಂದ ಕಾಶಪ್ಪನವರ ಸಂಪೂರ್ಣವಾಗಿ ಬೆಂಬಲಿಸಿದರು. ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಪಂಚಮಸಾಲಿ ಸಮಾಜದ ಮುರುಗೇಶ ನಿರಾಣಿ, ಬಸನಗೌಡ ಪಾಟೀಲ ಯತ್ನಾಳ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರಲಿಲ್ಲ. ಸಂಪುಟ ಸೇರ್ಪಡೆ ವಿಚಾರದಲ್ಲಿ ಇಬ್ಬರ ನಡುವೆ ತೆರೆಮರೆಯಲ್ಲಿ ತೀವ್ರ ಪೈಪೋಟಿ ನಡೆಯುತ್ತಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುರುಗೇಶ ನಿರಾಣಿ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒಲವು ತೋರಿದ್ದರು. ಅವರನ್ನು ಸಚಿವರನ್ನಾಗಿಸಿದರೆ ಮೀಸಲಾತಿ ಹೋರಾಟವನ್ನು ತಣ್ಣಗಾಗಿಸಬಹುದು ಎಂಬುದು ಲೆಕ್ಕಾಚಾರವಾಗಿತ್ತು. ನಿರಾಣಿ ಅವರು ‘ಪಾದಯಾತ್ರೆ ರದ್ದು’ ಎಂಬ ಹೇಳಿಕೆ ನೀಡುವ ಮೂಲಕ ಹೋರಾಟ ನಿಲ್ಲಿಸಲು ಮುಂದಾದರು. ಇದರಿಂದ ಅಸಮಾಧಾನಗೊಂಡಿದ್ದ ಯತ್ನಾಳ, ‘ಯಾವುದೇ ಕಾರಣಕ್ಕೂ ಮೀಸಲಾತಿ ಹೋರಾಟ ನಿಲ್ಲುವುದಿಲ್ಲ’ ಎಂದು ಹೇಳಿ ಪಾದಯಾತ್ರೆಗೆ ಅವರೇ ಚಾಲನೆ ನೀಡಿದರು. ಯಡಿಯೂರಪ್ಪ ವಿರುದ್ಧದ ತಮ್ಮ ವಾಗ್ದಾಳಿಯನ್ನೂ ಮುಂದುವರಿಸಿದರು.
ಮೀಸಲಾತಿ ಹೋರಾಟ ನಿಲ್ಲಿಸಲು ಸಾಧ್ಯವಾಗದ ಮುರುಗೇಶ ನಿರಾಣಿ ಅವರು ಕೂಡಲಸಂಗಮ ಪೀಠದ ಪ್ರಾಬಲ್ಯ ತಪ್ಪಿಸಲು, ಜನರ ಗಮನ ಬೇರೆಡೆ ಸೆಲೆಯಲು ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಆಲಗೂರಿನಲ್ಲಿ ಪಂಚಮಸಾಲಿ ಮೂರನೇ ಪೀಠ ಸ್ಥಾಪನೆಗೆ ತೆರೆಮರೆಯಲ್ಲಿ ಸಹಕರಿಸಿದರು. ಮಹಾದೇವ ಶಿವಾಚಾರ್ಯ ಸ್ವಾಮೀಜಿ ಮೂರನೇ ಪೀಠಕ್ಕೆ ಪೀಠಾಧಿಪತಿಯಾದರು.
ಮೀಸಲಾತಿ ಹೋರಾಟದ ಹಾದಿಯಲ್ಲಿ ಸರ್ಕಾರ ಹಾಗೂ ಹೋರಾಟಗಾರರ ನಡುವೆ ಕೊಂಡಿಯಾಗಿ ಆಗ ಸಚಿವರಾಗಿದ್ದ ಸಿ.ಸಿ.ಪಾಟೀಲ ಕೆಲಸ ಮಾಡಿದರು. ಬಿಜೆಪಿ ಸರ್ಕಾರ ‘2ಡಿ’ ಅಡಿಯಲ್ಲಿ ಮೀಸಲಾತಿ ಕಲ್ಪಿಸುವ ನಿರ್ಧಾರ ಮಾಡಿ, ಅದನ್ನು ಜಾರಿಗೊಳಿಸಿತು. ಅದನ್ನು ಕೂಡಲಸಂಗಮ ಪೀಠದ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ ಒಪ್ಪಲಿಲ್ಲ. ಆದರೆ, ಹೋರಾಟದಲ್ಲಿ ಸಕ್ರಿಯರಾಗಿದ್ದ ಬಸನಗೌಡ ಪಾಟೀಲ ಯತ್ನಾಳ ಸ್ವಾಗತಿಸಿದ್ದರು. ಈ ಕಾರಣದಿಂದಾಗಿ ಯತ್ನಾಳ ಮತ್ತು ಕಾಶಪ್ಪನವರ ನಡುವೆ ಬಿರುಕುಂಟಾಯಿತು.
ಅಂದು ಬಿಜೆಪಿ, ಈಗ ಕಾಂಗ್ರೆಸ್: 2023ರಲ್ಲಿ ರಾಜ್ಯದಲ್ಲಿ ಸರ್ಕಾರ ಬದಲಾಗಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂತು. ಮೀಸಲಾತಿ ಹೋರಾಟವನ್ನು ಸ್ವಾಮೀಜಿ ಮುಂದುವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಆರಂಭಿಸಿದರು. ಮೀಸಲಾತಿ ಹೋರಾಟವನ್ನು ಶಮನಗೊಳಿಸುವ ಜವಾಬ್ದಾರಿಯನ್ನು ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಸಿದ್ದರಾಮಯ್ಯ ಹೊರಿಸಿದರು.
ಆಗ ಕಾಶಪ್ಪನವರ, ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾವು ಮಾಡಿದ 2ಎ ಮೀಸಲಾತಿ ಹೋರಾಟಕ್ಕೆ ನಿರ್ದಿಷ್ಟ ಗುರಿ ಇತ್ತು. ಯತ್ನಾಳರ ಕುತಂತ್ರದಿಂದ ಹೋರಾಟ ದಿಕ್ಕು ತಪ್ಪುತ್ತಿದೆ. ಬಸವ ಜಯಮೃತ್ಯುಂಜಯ ಸ್ವಾಮೀಜಿ ಒಂದು ಪಕ್ಷಕ್ಕೆ ಸಿಮೀತರಾಗಿ ಹೋರಾಟ ಮಾಡುತ್ತಿದ್ದಾರೆ. ಶ್ರೀಗಳು ಎಲ್ಲ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋರಾಟ ಮಾಡಬೇಕು’ ಎಂದರಲ್ಲದೆ, ಮೀಸಲಾತಿ ಹೋರಾಟದಿಂದ ಅಂತರ ಕಾಯ್ದುಕೊಂಡರು.
ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಉಚ್ಚಾಟಿಸಿದಾಗ, ಅದರ ವಿರುದ್ಧ ಬಸವಜಯ ಮೃತ್ಯುಂಜಯ ಸ್ವಾಮೀಜಿ ಧ್ವನಿ ಎತ್ತಿದ್ದು, ವಿಜಯಾನಂದ ಕಾಶಪ್ಪನವರ ತೀವ್ರ ಅಸಮಾಧಾನಕ್ಕೆ ಕಾರಣವಾಯಿತು.
‘ಸ್ವಾಮೀಜಿ ಪಕ್ಷದ ವ್ಯಕ್ತಿಯೊಬ್ಬರ ಪರ ನಿಲ್ಲಬಾರದು, ಪಕ್ಷದ ಏಜೆಂಟರಾಗಿ ಕೆಲಸ ಮಾಡಬಾರದು’ ಎಂದು ಕಾಶಪ್ಪನವರ ವಾಗ್ದಾಳಿ ನಡೆಸಿದರೆ, ‘ವಿಜಯಾನಂದ ಕಾಶಪ್ಪನವರ ಅವರು ತಮ್ಮ ಪತ್ನಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಬೇಕಾದಾಗ ಸ್ವಾಮೀಜಿ ಅವರನ್ನು ದೆಹಲಿಗೆ ಏಕೆ ಕರೆದೊಯ್ದರು’ ಎಂದು ಯತ್ನಾಳ ಎದಿರೇಟು ನೀಡಿದರು.
ನಿಯಂತ್ರಣಕ್ಕೆ ಯತ್ನ: ಶಾಸಕ ವಿಜಯಾನಂದ ಕಾಶಪ್ಪನವರ ಅವರು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್‌ನ ನೂತನ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದಂತೆಯೇ, ಏಪ್ರಿಲ್‌ನಲ್ಲಿ ಸಭೆ ಕರೆದು ಸ್ವಾಮೀಜಿಗೆ ಕಡಿವಾಣ ಹಾಕಲು ಮುಂದಾದರು. ಇದಕ್ಕೆ ಪ್ರತಿಯಾಗಿ ಮರುದಿನವೇ ಸ್ವಾಮೀಜಿ ಕೂಡಲಸಂಗಮದಲ್ಲಿ ಭಕ್ತರ ಸಭೆ ಕರೆದರು. ಆಗ ಮಾಜಿ ಶಾಸಕ ಎ.ಬಿ. ಪಾಟೀಲ, ಶಾಸಕ ವಿನಯ ಕುಲಕರ್ಣಿ ಮುಂತಾದವರು ಮಧ್ಯಪ್ರವೇಶಿಸಿ ಎಲ್ಲರನ್ನೂ ಸಮಾಧಾನಗೊಳಿಸಿದರು.
‘ಈ ಕಿತ್ತಾಟದ ನಂತರ ಸ್ವಾಮೀಜಿ ಕೂಡಲಸಂಗಮ ಪೀಠಕ್ಕೆ ಬಂದಿರಲಿಲ್ಲ. ಆದರೆ, ಅಲ್ಲಲ್ಲಿ ಮೀಸಲಾತಿಗೆ ಆಗ್ರಹಿಸುವ, ಹೋರಾಟ ಮಾಡುವ ಹೇಳಿಕೆಗಳನ್ನು ನೀಡುತ್ತಲೇ ಇದ್ದರು. ಇದು ಕಾಂಗ್ರೆಸ್ ಸರ್ಕಾರಕ್ಕೆ ಇರುಸುಮುರುಸು ಉಂಟುಮಾಡುತ್ತಿತ್ತು. ಇದೇ ಕಾರಣಕ್ಕೆ ಟ್ರಸ್ಟ್ ಅಧ್ಯಕ್ಷ ಕಾಶಪ್ಪನವರ, ಅನೈತಿಕ ಚಟುವಟಿಕೆ ನಡೆಯಬಾರದು ಎನ್ನುವ ಹೆಸರಿನಲ್ಲಿ ಪೀಠದ ಕಟ್ಟಡಕ್ಕೆ ಬೀಗ ಹಾಕಿಸಿದರು. ಸ್ವಾಮೀಜಿ ಕಾವಲಿಗೆ ಕೆಲವರನ್ನು ನೇಮಿಸಿದರು. ಪೀಠಕ್ಕೆ ಬಂದವರ ಮೇಲೆ ಕಣ್ಣಿಡಲು ಹೇಳಿದರು’ ಎಂಬುದು ಪಂಚಮಸಾಲಿ ಸಮಾಜದ ಮುಖಂಡರ ಆರೋಪ.
ಈಗ ಮಾತುಕತೆಯ ಮೂಲಕ ಪೀಠದ ಕಟ್ಟಡಕ್ಕೆ ಹಾಕಿರುವ ಬಾಗಿಲು ತೆಗೆಯಲಾಗಿದೆ. ಸ್ವಾಮೀಜಿ ಬಂದಿದ್ದಾರೆ. ಹಾಗಿದ್ದರೂ, ಪೀಠಕ್ಕೆ ಇನ್ನೊಬ್ಬರು ಸ್ವಾಮೀಜಿಯನ್ನು ನೇಮಕ ಮಾಡುವುದಾಗಿ ಹೇಳುವ ಮೂಲಕ ವಿಜಯಾನಂದ ಕಾಶಪ್ಪನವರ ಮತ್ತೊಂದು ಸಮರಕ್ಕೆ ಮುಂದಾಗಿದ್ದಾರೆ. ಬಿಜೆಪಿಯ ನಾಯಕರು ಸ್ವಾಮೀಜಿ ಪರವಾಗಿ ಹೇಳಿಕೆ ನೀಡುತ್ತಿದ್ದಾರೆ. ‘ಸ್ವಾಮೀಜಿ ಆಹಾರದಲ್ಲಿ ವಿಷ ಬೆರೆಸಿರುವ ಶಂಕೆ ಇದೆ’ ಎನ್ನುವ ಗಂಭೀರ ಆರೋಪವನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ, ಪಂಚಮಸಾಲಿ ಸಮಾಜದ ಅರವಿಂದ ಬೆಲ್ಲದ ಮಾಡಿದ್ದಾರೆ.
ಈ ವಿವಾದ ಸದ್ಯಕ್ಕೆ ಶಮನಗೊಳ್ಳುವಂತೆ ಕಾಣುತ್ತಿಲ್ಲ. ಟೀಕೆ, ಪ್ರತಿಟೀಕೆ, ಆರೋಪ, ಪ್ರತ್ಯಾರೋಪಗಳು ತೀವ್ರಗೊಳ್ಳುತ್ತಿವೆ.
ವಿಜಯಾನಂದ ಕಾಶಪ್ಪನವರ ಆಗಲಿ ಅಥವಾ ಸ್ವಾಮೀಜಿ ಅವರಾಗಲಿ ಒಂದು ಹೆಜ್ಜೆ ಹಿಂದೆ ಸರಿದು ಪಂಚಮಸಾಲಿ ಸಮಾಜದ ಹಿತ ಕಾಯಬೇಕು. ಇದರಿಂದ ಇಡೀ ಪಂಚಮಸಾಲಿ ಸಮಾಜಕ್ಕೆ ಒಳ್ಳೆಯದಾಗುತ್ತದೆಸಿ.ಸಿ.ಪಾಟೀಲ ಶಾಸಕ
ಕೂಡಲಸಂಗಮದ ಪಂಚಮಸಾಲಿ ಪೀಠಕ್ಕೆ ನೂತನ ಸ್ವಾಮೀಜಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಾಗಿಯೇ ಪೀಠ ತೊರೆದರೆ ಸಂತೋಷವಿಜಯಾನಂದ ಕಾಶಪ್ಪನವರ ಅಧ್ಯಕ್ಷ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಟ್ರಸ್ಟ್
ಮೀಸಲಾತಿ ಹೋರಾಟದಿಂದ ಕೆಲವರಿಗೆ ಇರುಸುಮುರುಸು ಆಗಿರಬಹುದು. ನನ್ನದು ಪ್ರಾಮಾಣಿಕ ಹೋರಾಟ. ನಂಬಿದ ಜನರಿಗೆ ದ್ರೋಹ ಮಾಡುವುದಿಲ್ಲ. ಇದು ಜನಪರ ಹೋರಾಟವೇ ವಿನಾ ಯಾವುದೇ ವ್ಯಕ್ತಿ ಪಕ್ಷ ಪರವಾದುದಲ್ಲಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠಾಧ್ಯಕ್ಷ ಲಿಂಗಾಯತ ಪಂಚಮಸಾಲಿ ಪೀಠ ಕೂಡಲಸಂಗಮ
ಮುಳುವಾಯಿತೇ ರಾಜಕೀಯ ಸಖ್ಯ? ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರಿಗೆ ಪಂಚಮಸಾಲಿ ಸಮಾಜದ ರಾಜಕೀಯ ನಾಯಕರ ಸಖ್ಯವೇ ಮುಳುವಾಯಿತು ಎನ್ನುವುದು ಭಕ್ತರ ಅನಿಸಿಕೆ. ಪೀಠಕ್ಕೆ ಬಂದ ಹೊಸದರಲ್ಲಿ ಸ್ವಾಮೀಜಿ ಧಾರ್ಮಿಕ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗ ಯಾವುದೇ ಸಮಸ್ಯೆ ಇರಲಿಲ್ಲ. ಎಲ್ಲ ಪಕ್ಷಗಳ ರಾಜಕೀಯ ನಾಯಕರೂ ಮಠಕ್ಕೆ ಬರುತ್ತಿದ್ದರು. ಮೀಸಲಾತಿ ಹೋರಾಟಕ್ಕೆ ಸಮಾಜದ ಜನರಿಗಿಂತ ಆರ್ಥಿಕ ಸಂಪನ್ಮೂಲ ಜನರನ್ನು ಸೇರಿಸುವುದಕ್ಕಾಗಿ ಸ್ವಾಮೀಜಿ ರಾಜಕೀಯ ನಾಯಕರನ್ನು ಹೆಚ್ಚು ಅವಲಂಬಿಸಿದರು. ಬಿಜೆಪಿ ಸರ್ಕಾರವಿದ್ದಾಗ ಕಾಂಗ್ರೆಸ್ ನಾಯಕರೊಂದಿಗೆ ಕಾಂಗ್ರೆಸ್ ಸರ್ಕಾರವಿದ್ದಾಗ ಬಿಜೆಪಿ ನಾಯಕರೊಂದಿಗೆ ಹೆಚ್ಚಿಗೆ ಕಾಣಿಸಿಕೊಂಡಿದ್ದೇ ಇಂದಿನ ಪೀಠದ ಸಮಸ್ಯೆಗೆ ಕಾರಣ ಎನ್ನುತ್ತಾರೆ ಭಕ್ತರು. ಅಧಿಕಾರವಿಲ್ಲದಾಗ ಸ್ವಾಮೀಜಿಯೊಂದಿಗೆ ನಿಂತು ಮೀಸಲಾತಿ ಹೋರಾಟದ ಕೂಗು ಹಾಕುವ ನಾಯಕರು ಅಧಿಕಾರ ಸಿಕ್ಕಿದೊಡನೆ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ರಾಜಕೀಯ ಒತ್ತಡಗಳಿಗೆ ಮಣಿಯದೇ ಸಮಾಜದ ಜನರಿಗೆ ಮೀಸಲಾತಿ ಹೋರಾಟ ಮುಂದುವರಿಸುವ ಸ್ವಾಮೀಜಿ ನಿರ್ಧಾರ ರಾಜಕೀಯ ನಾಯಕರಿಗೆ ಪಥ್ಯವಾಗುತ್ತಿಲ್ಲ ಎಂಬುದು ಅವರ ಮಾತು.
ಟ್ರಸ್ಟ್ ಪರ ವಿರೋಧ ಅಭಿಪ್ರಾಯ ಪಂಚಮಸಾಲಿ ಪೀಠದ ಎಲ್ಲ ಆಗುಹೋಗುಗಳನ್ನು ನೋಡಿಕೊಂಡು ಹೋಗುವ ಜವಾಬ್ದಾರಿ ಟ್ರಸ್ಟ್‌ನದ್ದು ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ಟ್ರಸ್ಟ್ ಅಸ್ತಿತ್ವವನ್ನೇ ಪ್ರಶ್ನಿಸಲಾಗುತ್ತಿದೆ. ‘ಪೀಠಕ್ಕೆ ಸ್ವಾಮೀಜಿಯವರು ಬರುತ್ತಿರಲಿಲ್ಲ. ಅನೈತಿಕ ಚಟುವಟಿಕೆಗಳಿಗೆ ತಾಣವಾಗಬಾರದು ಎಂಬುದು ಪೀಠದ ಹೊಣೆ ನೋಡಿಕೊಳ್ಳುತ್ತಿರುವ ಟ್ರಸ್ಟ್ ಜವಾಬ್ದಾರಿಯಾಗಿದೆ. ಆ ಕಾರಣಕ್ಕೆ ಪೀಠಕ್ಕೆ ಗೇಟ್ ಅಳವಡಿಸಿ ಬೀಗ ಹಾಕಲಾಗಿತ್ತು’ ಎನ್ನುತ್ತಾರೆ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ. ‘ಟ್ರಸ್ಟ್ ವತಿಯಿಂದ ಪೀಠಕ್ಕೆ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ. ಅವರು ಸಮಾಜ ಸಂಘಟನೆ ಬಿಟ್ಟು ಬೇರೆ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಅವರನ್ನು ತೆಗೆದು ಹಾಕುವ ಹಕ್ಕೂ ಬೈಲಾದಲ್ಲಿ ಟ್ರಸ್ಟ್‌ಗೆ ನೀಡಲಾಗಿದೆ. ಹಿಂದೆ ಎಚ್ಚರಿಕೆ ನೀಡಿದ ನಂತರವೂ ಸ್ವಾಮೀಜಿ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳದಿದ್ದರಿಂದ ಬೇರೆ ಸ್ವಾಮೀಜಿ ನೇಮಕ ಮಾಡಿಕೊಳ್ಳಬಹುದಾಗಿದೆ’ ಎಂದು ಅಭಿಪ್ರಾಯ ಪಡುತ್ತಾರೆ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನೀಲಕಂಠ ಅಸೂಟಿ. ‘ಕೆಲವೇ ಜನರು ಸೇರಿ ರಚಿಸಿಕೊಂಡಿರುವ ಟ್ರಸ್ಟ್ ಅದು. ಅದಕ್ಕೆ ಸಮಾಜದ ಮಾನ್ಯತೆ ಇಲ್ಲ. ಪೀಠಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಕೊಡುಗೆ ಏನು’ ಎಂದು ಟ್ರಸ್ಟ್ ಅಸ್ತಿತ್ವವನ್ನೇ ಪ್ರಶ್ನಿಸುತ್ತಾರೆ ಶಾಸಕ ಸಿ.ಸಿ. ಪಾಟೀಲ.
ಇನ್ನೆರಡು ಪೀಠ ಸ್ಥಾಪನೆ ಪಂಚಮಸಾಲಿ ಸಮಾಜದ ಮತಗಳ ಮೇಲೆ ಪೀಠದ ಪ್ರಭಾವ ಹೆಚ್ಚಬಾರದು ಎಂಬ ಕಾರಣಕ್ಕೆ ಹೊಸ ಪೀಠ ಆರಂಭಿಸುವ ಮಾತುಗಳು ಆಗಾಗ ಕೇಳಿಬರುತ್ತಲೇ ಇವೆ. ಆರಂಭದಲ್ಲಿಯೇ ಎರಡು ಪೀಠಗಳನ್ನು ಸ್ಥಾಪಿಸಿದ ಪಂಚಮಸಾಲಿ ಸಮಾಜದ ಮುಖಂಡರು ಎರಡೇ ದಶಕದಲ್ಲಿ ಮತ್ತೊಂದು ಪೀಠ ಸ್ಥಾಪನೆ ಮಾಡಿದ್ದಾರೆ. ಈಗ ಇನ್ನೆರಡು ಪೀಠ ಸ್ಥಾಪಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ‘ಪಂಚಮಸಾಲಿ ಬಹಳ ದೊಡ್ಡ ಸಮಾಜ. ಸಮಾಜದ ಎಲ್ಲರೂ ಒಂದೇ ಪೀಠಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಜನರಿಗೆ ಅನುಕೂಲವಾಗಲಿ ಎಂದು ಐದು ಪೀಠಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ನಾಲ್ಕು ಪುರುಷರ ಪೀಠವಾದರೆ ಒಂದು ಮಹಿಳಾ ಪೀಠ ಸ್ಥಾಪನೆಯಾಗಲಿದೆ’ ಎನ್ನುತ್ತಾರೆ ಮಾಜಿ ಸಚಿವ ಮುರುಗೇಶ ನಿರಾಣಿ. ‘ಈ ಹಿಂದೆ ಒಬ್ಬರು ಕೂಡಲಸಂಗಮ ಪೀಠಕ್ಕೆ ಪರ್ಯಾಯವಾಗಿ ಜಮಖಂಡಿ ತಾಲ್ಲೂಕಿನಲ್ಲಿ ಪಂಚಮಸಾಲಿ ಸಮಾಜದ ಮೂರನೇ ಪೀಠ ಸ್ಥಾಪನೆ ಮಾಡಿ ಅಲ್ಲೊಬ್ಬ ಸ್ವಾಮೀಜಿಯನ್ನು ಕೂರಿಸಿದ್ದಾರೆ. ಇದರಿಂದ ಸಮಾಜದಲ್ಲಿ ಏನಾದರೂ ರಕ್ತಕ್ರಾಂತಿ ಆಗಿದೆಯಾ ರಕ್ತದ ಹೊಳೆ ಹರಿದಿದೆಯಾ? ಏನೂ ಆಗಿಲ್ಲ’ ಎಂದು ಹೇಳುತ್ತಾರೆ ಶಾಸಕ ಬಸನಗೌಡ ಪಾಟೀಲ ಯತ್ನಾಳ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.