ADVERTISEMENT

ಗ್ರಾಮ ಪಂಚಾಯಿತಿ ಬಲಿಷ್ಠವಾದುದು: ಶಾಸಕ ಜೆ.ಟಿ. ಪಾಟೀಲ

ಹೆಗ್ಗೂರು ಗ್ರಾಮ ಪಂಚಾಯಿತಿ ಕಟ್ಟಡ, ಘನತಾಜ್ಯ ಸಂಸ್ಕರಣ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2025, 4:18 IST
Last Updated 3 ಅಕ್ಟೋಬರ್ 2025, 4:18 IST
ಬೀಳಗಿ ತಾಲ್ಲೂಕಿನ ಹೆಗ್ಗೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಘನತಾಜ್ಯ ಸಂಸ್ಕರಣ ಘಟಕದ ಸಮಾರಂಭವನ್ನು ಶಾಸಕ ಜೆ.ಟಿ. ಪಾಟೀಲ, ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ ಉದ್ಘಾಟಿಸಿದರು
ಬೀಳಗಿ ತಾಲ್ಲೂಕಿನ ಹೆಗ್ಗೂರು ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಘನತಾಜ್ಯ ಸಂಸ್ಕರಣ ಘಟಕದ ಸಮಾರಂಭವನ್ನು ಶಾಸಕ ಜೆ.ಟಿ. ಪಾಟೀಲ, ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ ಉದ್ಘಾಟಿಸಿದರು   

ಬೀಳಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಬಲಿಷ್ಠವಾದುದು ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮದ ಅಭಿವೃದ್ಧಿಯಲ್ಲಿ ಎರಡು ಕಣ್ಣುಗಳಿದ್ದಂತೆ, ಅವುಗಳು ಸರಿಯಾದ ವ್ಯವಸ್ಥೆಯಲ್ಲಿ ನಡೆದರೆ ಗ್ರಾಮಾಭಿವೃದ್ಧಿಗೆ ಯಾರ ಅವಶ್ಯಕತೆಯೂ ಇಲ್ಲ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆ, ಜಿಲ್ಲಾ ಪಂಚಾಯಿತಿ ಬಾಗಲಕೋಟೆ, ತಾಲ್ಲೂಕ ಪಂಚಾಯಿತಿ ಬೀಳಗಿ ಇವರ ಸಹಯೋಗದಲ್ಲಿ ಹೆಗ್ಗೂರ ಗ್ರಾಮ ಪಂಚಾಯಿತಿ, ಗ್ರಾಮ ಪಂಚಾಯಿತಿ ಕಟ್ಟಡ ಅನುದಾನ, 15ನೇ ಹಣಕಾಸು ಆಯೋಗದ ಅನುದಾನದ ಎಂ.ಜಿ.ಎನ್.ಆರ್.ಇ.ಜಿ.ಎ ಅನುದಾನ ಹಾಗೂ ಸ್ವಂತ ಸಂಪನ್ಮೂಲ ಅನುದಾನದಲ್ಲಿ ನಿರ್ಮಿಸಲಾದ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಹಾಗೂ ಘನ ತಾಜ್ಯ ಸಂಸ್ಕರಣ ಘಟಕದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ದಿವಂಗತ ರಾಜೀವ್‌ ಗಾಂಧಿಯವರು ಕಾನೂನಿಗೆ ತಿದ್ದುಪಡಿ ಮಾಡಿದ ಪ್ರತಿಫಲವಾಗಿ ಇಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಸದಸ್ಯರುಗಳು ಹೆಚ್ಚು ಸ್ಥಾನಗಳನ್ನು ಹೊಂದಲು ಕಾರಣವಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ಅನುದಾನ ನೇರವಾಗಿ ಗ್ರಾಮ ಪಂಚಾಯಿತಿಗೆ ಬರುವಂತೆ ಮಾಡಿದ ಕೀರ್ತಿ ವರಿಗೆ ಸಲ್ಲಬೇಕು ಎಂದರು.

ADVERTISEMENT

ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಮಾತನಾಡಿ, ಗ್ರಾಮ ಸ್ವಚ್ಛವಾಗಿದ್ದರೆ ಮಾತ್ರ ಎಲ್ಲರೂ ಆರೋಗ್ಯದಿಂದ ಇರಬಹುದು. ಇಲ್ಲದೆ ಹೋದರೆ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಹಾಗಾಗಿ ಘನತಾಜ್ಯ ಸಂಸ್ಕರಣ ಘಟಕದ ಸದ್ಬಳಕೆ ಮಾಡಿಕೊಳ್ಳಿ ಎಂದರು.

ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸ್ವಾರ್ಥಿಗಳೇ ತುಂಬಿರುವ ಜಗತ್ತಿನಲ್ಲಿ ನಿಸ್ವಾರ್ಥ ಜನರನ್ನು ಹುಡುಕುವುದೇ ವಿರಳವಾಗಿದೆ. ಕೇವಲ ಕಟ್ಟಡ ಸುಂದರವಾದರೆ ಸಾಲದು ಅದರಲ್ಲಿರುವ ಆಡಳಿತ ಯಂತ್ರ ಪಾರದರ್ಶಕವಾಗಿರಬೇಕು ಎಂದರು.

ಕಿರಣ ಬಾಳಾಗೊಳ,ಮಲ್ಲಪ್ಪ ಕಿರಿಶ್ಯಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಮೇಶ ಮೇಲ್ನಾಡ ಸ್ವಾಗತಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಪವಾರ, ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ ಪಾಟೀಲ, ಎಮ್.ಆರ್.ಜಗಲಿ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಯಮನಪ್ಪ ರೊಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನಮಂತ ಕಾಕಂಡಕಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಶೈಲ ಸೂಳಿಕೇರಿ, ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯರಾದ ಸಿದ್ದು ಸಾರಾವರಿ, ಬಸವರಾಜ ಹಳ್ಳದಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.