
ಗುಳೇದಗುಡ್ಡ: ಪಟ್ಟಣವು ತಾಲ್ಲೂಕು ಘೋಷಣೆಯಾಗಿ 5 ವರ್ಷ ಕಳೆದರೂ ಅಭಿವೃದ್ಧಿ ಕಾಣದಾಗಿದೆ. ಪುರಸಭೆಯಿಂದಲೂ ಉತ್ತಮವಾದ ಕೆಲಸ ಕಾರ್ಯಗಳು ಆಗದೇ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯವಾಗಿದೆ.
ಇಲ್ಲದ ಪಾದಚಾರಿ ರಸ್ತೆ: ಪಟ್ಟಣದಲ್ಲಿ ನಾಲ್ಕು ಪ್ರಮುಖ ಮುಖ್ಯ ರಸ್ತೆಗಳಿವೆ. ಚೌ ಬಜಾರ ರಸ್ತೆ, ಸರಾಫ್ ಬಜಾರ್, ಬನ್ನಿಕಟ್ಟಿ ಹಾಗೂ ಪುರಸಭೆಯಿಂದ ಕೆಳಗಿನ ಹೊಸಪೇಟ ಮಾರ್ಕೆಟ್‌ವರೆಗಿನ ರಸ್ತೆಗಳಿದ್ದು ಎಲ್ಲಿಯೂ ಪಾದಚಾರಿ ರಸ್ತೆ ನಿರ್ಮಾಣವಾಗಿಲ್ಲ. ಪಾದಚಾರಿ ರಸ್ತೆಗಳಿಲ್ಲದೇ ಹಲವು ಅಪಘಾತ, ಅವಘಡಗಳು ಸಂಭವಿಸಿವೆ. ಕೂಡಲೇ ಪಾದಚಾರಿ ರಸ್ತೆ ನಿರ್ಮಾಣ ಮಾಡಬೇಕಾದ ಅವಶ್ಯಕತೆ ಇದೆ.
ಈಚೆಗೆ ರಾಜ್ಯ ಹೆದ್ದಾರಿ ಪಟ್ಟಣದ ಮದ್ಯ ಹಾದು ಹೋಗಿದ್ದು, ಹೆದ್ದಾರಿ ಪಕ್ಕ ಕೆಲವು ಕಡೆ ಮಾತ್ರ ಪಾದಚಾರಿ ರಸ್ತೆ ನಿರ್ಮಿಸಲಾಗಿದೆ. ಎಲ್ಲಿ ಪಾದಚಾರಿ ರಸ್ತೆ ನಿರ್ಮಿಸಲಾಗಿದೆಯೋ ಅಲ್ಲಿ ಡಬ್ಬಿ ಅಂಗಡಿ,ಗ್ಯಾರೇಜ್, ಎಗ್ಗ್ ರೈಸ್ ಅಂಗಡಿ ಇಡಲಾಗಿದ್ದು ಇದ್ದು ಇಲ್ಲದಂತಾಗಿವೆ.ಯಾರೂ ಹೇಳುವವರು,ಕೇಳುವವರು ಇಲ್ಲದಂತಾಗಿದೆ.
ಪಟ್ಟಣದಲ್ಲಿ ಎಲ್ಲಿಯೂ ಇಲ್ಲದ ಪಾರ್ಕಿಂಗ್ ವ್ಯವಸ್ಥೆ: ಪಟ್ಟಣದಲ್ಲಿ ಪ್ರಮುಖ ಸ್ಥಳಗಳಾದ ಮುಖ್ಯ ಬಸ್ ನಿಲ್ದಾಣ, ಪುರಸಭೆ, ಭಾರತ್ ಮಾರ್ಕೆಟ್, ಹೊಸಪೇಟೆಯ ಭಂಡಾರಿ ಕಾಲೇಜ್ ಸರ್ಕಲ್‍ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ವಾಹನ ಸವಾರರು ಪರದಾಡುತ್ತಿದ್ದಾರೆ.
ಬೈಕ್, ಕಾರು ಹಾಗೂ ಇತರೆ ವಾಹನಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಅವುಗಳನ್ನು ರಸ್ತೆಯ ಪಕ್ಕ ನಿಲ್ಲಿಸಬೇಕಾದ ಅನಿವಾರ್ಯತೆ ಇದೆ. ನಿಲ್ಲಿಸಿದರೆ ರಸ್ತೆಯ ಮೂಲಕ ಹೋಗುವ ಇತರೆ ವಾಹನಗಳಿಗೆ ಅಡಚಣೆ ಆಗುತ್ತದೆ. ಹೀಗಾಗಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಪಟ್ಟಣವಾಗಿದೆ.
ಹಳ್ಳಿಗಳಿಂದ ಬೈಕ್ ಮೂಲಕ ಗುಳೇದಗುಡ್ಡಕ್ಕೆ ಬಂದು ಉದ್ಯೋಗಕ್ಕೆ ಬಾಗಲಕೋಟೆ ಮತ್ತಿತರ ನಗರಗಳಿಗೆ ಹೋಗುತ್ತಾರೆ. ಗುಳೇದಗುಡ್ಡ ಬಸ್ ನಿಲ್ದಾಣದಲ್ಲಿ ವ್ಯವಸ್ಥಿತವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಎಲ್ಲಿ ಬೇಕಾದಲ್ಲಿ ಬೇಕಾಬಿಟ್ಟಿ ಬೈಕ್ ನಿಲ್ಲಿಸಿ ಹೋಗುತ್ತಾರೆ.
ಪಾರ್ಕಿಂಕ್ ಶುಲ್ಕ ಪಾವತಿಯ ವ್ಯವಸ್ಥೆ ಇದ್ದರೂ ಪರವಾಗಿಲ್ಲ. ವಾಹನಕ್ಕೊಂದು ಭದ್ರತೆ ಇರುತ್ತದೆ. ಆದಷ್ಟು ಬೇಗನೆ ಗುಳೇದಗುಡ್ಡ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈಗಲಾದರೂ ಪಾದಚಾರಿ ರಸ್ತೆ ನಿರ್ಮಾಣವಾಗಬೇಕು,ಪಾದಚಾರಿ ರಸ್ತೆಗಳಿಲ್ಲದೇ ಹಲವು ಅಪಘಾತ,ಅವಗಡಗಳು ಸಂಭವಿಸಿವೆ.ಕೂಡಲೇ ಪಾದಚಾರಿ ರಸ್ತೆ ನಿರ್ಮಾಣ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು
-ಅಶೋಕ ಹೆಗಡೆ ನೇಕಾರ ಮುಖಂಡ,ಗುಳೇದಗುಡ್ಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.