
ಬಾಗಲಕೋಟೆ: ‘ಜಿಲ್ಲೆಯಲ್ಲಿ ಪಡಿತರ ಅಕ್ಕಿಯ ಅಕ್ರಮ ಮಾರಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಅವರಿಗೆ ಯಾರದ್ದೂ ಭಯವಿಲ್ಲ. ಒಬ್ಬರ ಕೊಲೆ ಆಗಿದೆ. ಅಧಿಕಾರಿಗಳು ಏನು ಮಾಡುತ್ತಿದ್ದೀರಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪಂಚಾಯಿತಿ ಎರಡನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಕಾಳಸಂತೆಯಲ್ಲಿ ಪಡಿತರ ಧಾನ್ಯ ಮಾರಾಟವಾಗುತ್ತಿದ್ದರೂ, ಅಧಿಕಾರಿಗಳು ಸೂಕ್ತ ಕ್ರಮವಹಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಆಹಾರ ಇಲಾಖೆ ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ‘ಜಿಲ್ಲೆಯಲ್ಲಿ ಎರಡು ವರ್ಷಗಳಲ್ಲಿ 25 ಪ್ರಕರಣಗಳನ್ನು 43 ಜನರ ವಿರುದ್ಧ ದಾಖಲಿಸಲಾಗಿದೆ’ ಎಂದರು.
ಸಚಿವ ತಿಮ್ಮಾಪುರ, ‘ಅಕ್ರಮವಾಗಿ ಪಡಿತರ ಅಕ್ಕಿ ಮಾರಾಟ ಮಾಡುವವರಿಗೆ ಏನು ಶಿಕ್ಷೆ ಇದೆ’ ಎಂದು ಪ್ರಶ್ನಿಸಿದರು. ಆಗ ಕಂಕಣವಾಡಿ, ‘ಆರು ತಿಂಗಳ ಜೈಲು ಶಿಕ್ಷೆ ಇದೆ’ ಎಂದರು. ಇಲ್ಲಿಯವರೆಗೆ ಎಷ್ಟು ಜನರಿಗೆ ಶಿಕ್ಷೆಯಾಗಿದೆ ಎಂಬ ಸಚಿವರ ಪ್ರಶ್ನೆಗೆ ಅಧಿಕಾರಿ ನಿರುತ್ತರರಾದರು.
‘ಜಾಗೃತ ಸಮಿತಿ ಸಭೆಯಲ್ಲಿ ಏಷ್ಟು ಜನರಿದ್ದೀರಿ. ಏಷ್ಟು ಸಭೆಗಳನ್ನು ಮಾಡಿದ್ದೀರಿ’ ಎಂದು ಸಚಿವರು ಪ್ರಶ್ನಿಸಿದರು. ಅದಕ್ಕೆ ಕಂಕಣವಾಡಿ, ‘ಸರ್ಕಾರದ ನಾಮನಿರ್ದೇಶನವಾಗಿಲ್ಲ’ ಎಂದರು. ಅದಕ್ಕೆ ಸಿಟ್ಟಿಗೆದ್ದ ಸಚಿವರು, ‘ಸಭೆಯ ದಿಕ್ಕು ತಪ್ಪಿಸಬೇಡಿ. ಈಗಾಗಲೇ ಇರುವವರು ಏಷ್ಟು ಮಾಡಿದ್ದೀರಿ. ಅದನ್ನು ಮೊದಲು ಹೇಳಿ’ ಎಂದಾಗ, ಅಧಿಕಾರಿ ‘ಯಾವುದೇ ಸಭೆ ಮಾಡಿಲ್ಲ’ ಎಂದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ‘ನಿಮಗೂ ಅಕ್ಕಿಯ ಕಾಳಸಂತೆಯ ಬಗ್ಗೆ ಗೊತ್ತಿದೆ. ಆದರೂ, ಕ್ರಮಕೈಗೊಳ್ಳಲು ಮುಂದಾಗುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶ್ರೀಶೈಲ ಕಂಕಣವಾಡಿ, ‘ದಾಳಿ ಮಾಡಿದ್ದೇವೆ’ ಎಂದರು. ಆಗ ಮಧ್ಯಪ್ರವೇಶಿಸಿದ ಶಾಸಕ ಸಿದ್ದು ಸವದಿ, ಪಿ.ಎಚ್. ಪೂಜಾರ, ‘ದಾಳಿ ಮಾಡಿದ್ದೇವೆ ಎಂದು ತೋರಿಸಲಿಕ್ಕೆ ಮಾಡಿದರೆ ಆಗುವುದಿಲ್ಲ. ಅಕ್ರಮ ಮಾರಾಟ ಸಂಪೂರ್ಣವಾಗಿ ಬಂದ್ ಆಗುವಂತೆ ಕ್ರಮಕೈಗೊಳ್ಳಬೇಕು’ ಎಂದರು.
ಜೆ.ಟಿ. ಪಾಟೀಲ ಮಾತನಾಡಿ, ‘ಕಾಳಸಂತೆಯ ಹುಲಿ ಹಿಡಿಯಲಿಕ್ಕೆ ತಯಾರಿಲ್ಲ. ಇಲಿ ಮಾತ್ರ ಹೊಡೆಯುತ್ತಿದ್ದೀರಿ. ಎದೆ ಮೇಲೆ ಕೈಯಿಟ್ಟುಕೊಂಡು ಹೇಳಿ. ಅಕ್ರಮ ನಡೆಯುವುದು ನಿಮಗೆ ಗೊತ್ತಿಲ್ಲವಾ’ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಸಂಗಪ್ಪ, ‘ಅಕ್ಕಿ ಅಕ್ರಮ ಮಾರಾಟದ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದರೆ ಗೋಪ್ಯವಾಗಿಡಲಾಗುವುದು’ ಎಂದರು. ಆಗ ಶಾಸಕ ಪಾಟೀಲ, ಇವರೇ ಅಕ್ರಮ ಮಾರಾಟ ಮಾಡುವವರಿಗೆ ಫೋನ್ ಮಾಡಿ ಹೇಳುತ್ತಾರೆ’ ಎಂದರು.
ಸಚಿವ ತಿಮ್ಮಾಪುರ ಮಾತನಾಡಿ, ‘ಪತ್ರಿಕೆಗಳಲ್ಲಿ ಅಕ್ರಮ ಪಡಿತರ ಬಗ್ಗೆ ಬರುತ್ತಿದೆ. ಆದರೂ, ಕ್ರಮವಹಿಸಿಲ್ಲ. ಸರ್ಕಾರದ ಇಮೇಜ್‌ಗೆ ಇದರಿಂದ ಧಕ್ಕೆಯಾಗುವುದಿಲ್ಲವೇ? ಆಹಾರ, ಪೊಲೀಸ್, ತಹಶೀಲ್ದಾರ್, ಉಪವಿಭಾಗಾಧಿಕಾರಿ ಎಲ್ಲರೂ ಸೇರಿ ಅಕ್ರಮ ತಡೆಯಿರಿ. ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.
ರಾಜ್ಯಸಭೆ ಸದಸ್ಯ ನಾರಾಯಣ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಇದ್ದರು.
ಬಿಸಿಯೂಟಕ್ಕೆ ಕಳೆತ ತೊಗರಿ ಕೊಳೆತ ಮೊಟ್ಟೆ ನೀಡಲಾಗುತ್ತಿದೆ. ಅಂತವರ ವಿರುದ್ಧ ಕ್ರಮಕೈಗೊಳ್ಳಬೇಕುಜೆ.ಟಿ. ಪಾಟೀಲ ಶಾಸಕ
ಮುಧೋಳದಿಂದ ಸಚಿವರಾದವರು ಮುಧೋಳ ಮಾತ್ರ ಅಭಿವೃದ್ಧಿ ಮಾಡುತ್ತಾರೆ. ಜಿಲ್ಲೆಗೆ ಆದ್ಯತೆ ನೀಡದಿದ್ದರೆ ಜನ ಮನೆಗೆ ಕಳುಹಿಸುತ್ತಾರೆಸಿದ್ದು ಸವದಿ ಶಾಸಕ
ಮೀನುಗಾರಿಕೆ: ಯಂತ್ರ ಬಳಕೆ ತಡೆಯಿರಿ ಬಾಗಲಕೋಟೆ: ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಆಂಧ್ರಪ್ರದೇಶದಿಂದ ಬಂದ ಗುಂಪು ಮೀನುಗಾರಿಕೆ ನಡೆಸುವುದನ್ನು ತಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಸೂಚಿಸಿದರು. ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಅಂಜನಾದೇವಿ ಟಿ ಮಾತನಾಡಿ ಆಂಧ್ರದಿಂದ ಬಂದು ಮೀನುಗಾರಿಕೆ ನಡೆಸುತ್ತಿರುವವರ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮೀನುಗಾರಿಕೆ ನೀಡಲು ನಿಯಮಗಳಿವೆ. ಉಲ್ಲಂಘಿಸಿದರೆ ಕ್ರಮಕೈಗೊಳ್ಳಲು ಯಾವುದೇ ನಿಯಮಗಳಿಲ್ಲ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದೇನೆ ಎಂದರು. ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮಾತನಾಡಿ ಹಿನ್ನೀರಿನಲ್ಲಿ 26 ಸಾವಿರ ಟನ್ ಮೀನು ಹಿಡಿಯುತ್ತಿದ್ದು ಅಂದಾಜು ₹265 ಕೋಟಿ ವಹಿವಾಟು ನಡೆಯುತ್ತಿದೆ. ಸರ್ಕಾರಕ್ಕೆ ಆದಾಯ ಬರುತ್ತಿಲ್ಲ ಎಂದು ಹೇಳಿದರು. ಸಚಿವ ತಿಮ್ಮಾಪುರ ಮೀನುಗಾರಿಕೆ ಇಲಾಖೆ ಹಿರಿಯ ಅಧಿಕಾರಿ ಕೆಬಿಜೆಎನ್ ಸೇರಿದಂತೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ಕರೆಯಿರಿ. ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳೋಣ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.