ADVERTISEMENT

‘ಹಸು ಸಾಕಾಣಿಕೆಗೆ ಅನುಮತಿ ಅವಿವೇಕತನ’

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 15:57 IST
Last Updated 20 ಅಕ್ಟೋಬರ್ 2020, 15:57 IST
ನಾಗರಾಜ ಹೊಂಗಲ್
ನಾಗರಾಜ ಹೊಂಗಲ್   

ಇಳಕಲ್: ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಸು ಸಾಕಾಣಿಕೆ, ಪಶು ಸಂಗೋಪನೆಗೂ ಅನುಮತಿ ಕಡ್ಡಾಯದ ಪ್ರಸ್ತಾವನೆ ಕೈಬಿಡದಿದ್ದರೆ ಬೆಂಗಳೂರಿನಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮುಂದೆ ರೈತರೊಂದಿಗೆ ಧರಣಿ ನಡೆಸಲಾಗುವುದು ಎಂದು ಇಲ್ಲಿಯ ಜನಜಾಗೃತಿ ವೇದಿಕೆಯ ನಾಗರಾಜ್ ಹೊಂಗಲ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ಮಂಡಳಿಯ ಈ ನಡೆ, ಕೈಗಾರಿಕೋದ್ಯಮಿಗಳ ಜತೆಗೆ ರೈತ ಸಮೂಹವನ್ನು ಸಹ ತನ್ನ ಭ್ರಷ್ಟಾಚಾರದ ತೆಕ್ಕೆಗೆ ಸೆಳೆದುಕೊಳ್ಳುವ ಹೀನ ಕೃತ್ಯವಾಗಿದೆ. ಗೋಶಾಲೆಗಳು, ಡೇರಿಗಳು ಮತ್ತು ಹಸು ಸಾಕಣೆ ಮಾಡುವ ರೈತರು ಸಗಣಿ, ಗಂಜಲು ಮತ್ತಿತರ ತ್ಯಾಜ್ಯಗಳ ನಿರ್ವಹಣೆಯನ್ನು 1974ರ ಜಲ ಕಾಯ್ದೆ ಮತ್ತು 1981 ವಾಯು ಸಂರಕ್ಷಣೆ ಮತ್ತು ಮಾಲಿನ್ಯ ಮಾಲಿನ್ಯ ಕಾಯ್ದೆ ವ್ಯಾಪ್ತಿಗೆ ತರಲು ನಿರ್ಧರಿಸುವ ಕ್ರಮವು ಅವಿವೇಕತನದ್ದಾಗಿದೆ ಎಂದು ಕಿಡಿ ಕಾರಿದ್ದಾರೆ.

ಸದ್ಯ ಜಲ ಮತ್ತು ವಾಯು ಮಾಲಿನ್ಯ ಕಾಯ್ದೆ ವ್ಯಾಪ್ತಿಯಲ್ಲಿರುವ ಉದ್ಯಮಗಳನ್ನೇ ಮಾಲಿನ್ಯ ನಿಯಂತ್ರಣ ಮಂಡಳಿ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಹೀಗಿದ್ದರೂ ಪರಿಸರ ಸ್ನೇಹಿ ಸಗಣಿ ತ್ಯಾಜ್ಯ ನಿರ್ವಹಣೆಗೆ ಕಾನೂನು ರೂಪಿಸಲು ಮುಂದಾಗಿರುವ ‌ನಡೆ ಸರ್ಕಾರದ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುತ್ತಿದೆ ಎಂದು ಹೊಂಗಲ್ ಟೀಕಿಸಿದ್ದಾರೆ.

ADVERTISEMENT

ಈಗಾಗಲೇ ಭ್ರಷ್ಟಾಚಾರದ ಆಗರವಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿ, ತನ್ನ ಅವಿವೇಕಿ ನಿರ್ಧಾರಗಳಿಂದ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡ ಸಾಕಷ್ಟು ಉದಾಹರಣೆಗಳಿವೆ.
ಇಂಥ ಸ್ಥಿತಿಯಲ್ಲಿ ಮತ್ತೊಂದು ಅವಿವೇಕದ ನಿರ್ಧಾರ ಭ್ರಷ್ಟತೆಯ ಅತಿರೇಕದ್ದಾಗಿದೆ. ಸರ್ಕಾರವು ಮಂಡಳಿಯ ನಡೆಗಳನ್ನು ಗಮನಿಸದಿರುವುದೇ ಇದಕ್ಕೆಲ್ಕಾ ಕಾರಣವಾಗಿದೆ. ಈಗಲಾದರೂ ಇತ್ತ ಗಮನ ಹರಿಸಿ ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ಧಾರಗಳಿಗೆ ಸರಕಾರ ಕಡಿವಾಣ ಹಾಕಬೇಕು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.