ಬಾಗಲಕೋಟೆ: ‘ಫಿಜಿಯೋಥೆರಪಿ ಚಿಕಿತ್ಸೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿದ್ದು, ಫಿಜಿಯೋಥೆರಪಿ ತಜ್ಞರನ್ನು ವೈದ್ಯರೆಂದು ಪರಿಗಣಿಸಲಾಗಿದ್ದು, ಅವರ ಬೇಡಿಕೆ ಹೆಚ್ಚಾಗಿದೆ’ ಎಂದು ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಫಿಜಿಯೋಥೆರಪಿ ಕಾಲೇಜಿನ ಡೀನ್ ಡಾ.ವಿಜಯ ಕಾಗೆ ಅಭಿಪ್ರಾಯಪಟ್ಟರು.
ಎಸ್.ಎನ್. ಮೆಡಿಕಲ್ ಕಾಲೇಜಿನ ಅತ್ರೆಯ ಸಭಾಂಗಣದಲ್ಲಿ ಸೋಮವಾರ ನಡೆದ ಬಿವಿವಿ ಸಂಘದ ಫಿಜಿಯೋಥೆರಪಿ ಕಾಲೇಜಿನ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಸಂಘದಲ್ಲಿ ಕಲಿಕೆಗೆ ಬೇಕಾದ ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಪದವೀಧರರಾಗುತ್ತಿರುವ ನೀವು ಪಾಲಕರ, ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಯ ಕೊಡುಗೆ ಹಾಗೂ ತ್ಯಾಗ ಮರೆಯದಿರಿ’ ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಮಾತನಾಡಿ, ‘40 ವಿದ್ಯಾರ್ಥಿಗಳ ಪ್ರವೇಶದೊಂದಿಗೆ ಆರಂಭವಾದ ಫಿಜಿಯೋಥೆರಪಿ ಕಾಲೇಜಿನಲ್ಲಿ ಈಗ 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿ ದೊರೆತಿದೆ. ಆರು ವಿಷಯಗಳಲ್ಲಿ ಎಂ.ಪಿ.ಟಿ ಕೋರ್ಸ್ ಪ್ರಾರಂಭಗೊಂಡಿದೆ. ಫಿಜಿಯೋಥೆರಪಿ ಕಾಲೇಜು ಸ್ವಂತ ಕಟ್ಟಡ ಹೊಂದಿದೆ. ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ’ ಎಂದರು.
ಡಾ. ವಿಜಯ ಕಾಗೆ ಅವರನ್ನು ಸನ್ಮಾನಿಸಲಾಯಿತು. ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ವೈದ್ಯಕೀಯ ಅಧೀಕ್ಷಕ ಡಾ.ಶ್ರೀರಾಮ ಕೋರಾ ಮತ್ತು ಡಾ.ಸುಚಿತ್ರಾ ದಿವಾನಮಲ್ ಇದ್ದರು.
ವೈದ್ಯಕೀಯ ಕಾಲೇಜಿನ ಪ್ರಾಚಾರ್ಯರಾದ ಡಾ. ಭುವನೇಶ್ವರಿ ಯಳಮಲಿ ಫಿಜಿಯೋಥೆರಪಿ ಕಾಲೇಜಿನ ಬೆಳವಣಿಗೆ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಡಾ.ಸುಚಿತ್ರಾ ದಿವಾನಮಲ್ ಪದವೀಧರರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಡಾ.ಶ್ರೇಯಾ ಸೌಕಾರ ಪರಿಚಯಿಸಿದರು. ಡಾ.ಮಹಾಂತೇಶ ಬಿರಡಿ ವಂದಿಸಿದರು. ಪಾಲಕರ ಪರವಾಗಿ ಬಸವರಾಜ ಮುಕ್ಕುಪ್ಪಿ ಹಾಗೂ ವಿದ್ಯಾರ್ಥಿಗಳ ಪರವಾಗಿ ಡಾ.ನೇಹಾ ರಾಮದುರ್ಗ ಮಾತನಾಡಿದರು.
Highlights - ರೋಗಿಗಳಿಗೆ ಉತ್ತಮ ಸೇವೆ ಕಲ್ಪಿಸಿ ಪಾಲಕರ, ಶಿಕ್ಷಕರ ತ್ಯಾಗ ಮರೆಯದಿರಿ ಆರೋಗ್ಯಕರ ಚಟುವಟಿಕೆಗಳು ಹೆಚ್ಚಾಗಲಿ
Quote - ಬದಲಾದ ಜೀವನ ಶೈಲಿಯಿಂದಾಗಿ ಅನೇಕ ಪ್ರಕಾರದ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಫಿಜಿಯೋಥೆರಪಿ ತಜ್ಞರ ಪಾತ್ರ ಅನನ್ಯವಾಗಿದೆ ಡಾ. ವಿಜಯ ಕಾಗೆ ಡೀನ್ ಫಿಜಿಯೋಥೆರಪಿ ಕಾಲೇಜು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.