ADVERTISEMENT

ಮಸೀದಿಯಲ್ಲಿ ಮದ್ದು–ಗುಂಡು ಸಂಗ್ರಹ: ರೇಣುಕಾಚಾರ್ಯ ಹೇಳಿಕೆ ಸಾಬೀತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 8:16 IST
Last Updated 24 ಜನವರಿ 2020, 8:16 IST
ಎಸ್.ಜಿ.ನಂಜಯ್ಯನಮಠ
ಎಸ್.ಜಿ.ನಂಜಯ್ಯನಮಠ   

ಬಾಗಲಕೋಟೆ:‘ರಾಜ್ಯದ ಮಸೀದಿಗಳಲ್ಲಿ ಮದ್ದು–ಗುಂಡು ಸಂಗ್ರಹಿಸಿಡಲಾಗಿದೆ ಎಂದು ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ. ಅದು ಯಾವ ಮಸೀದಿ ಎಂಬುದನ್ನು ಬಹಿರಂಗಪಡಿಸಲಿ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲಿ’ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ’ಮಸೀದಿಯಲ್ಲಿ ಮದ್ದು–ಗುಂಡು ಸಂಗ್ರಹಿಸಿಡುವ ವಿಚಾರ ಬಹಳ ಗಂಭೀರವಾದದ್ದು, ಅದರ ಬಗ್ಗೆ ರೇಣುಕಾಚಾರ್ಯ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಿ. ಕೇಂದ್ರ ಹಾಗೂ ರಾಜ್ಯದಲ್ಲಿ ಅವರದ್ದೇ ಸರ್ಕಾರ ಇರುವುದರಿಂದ ತನಿಖೆಯೂ ನಡೆಯಲಿ. ಇಲ್ಲದಿದ್ದರೆ ಉಡಾಫೆ ಹೇಳಿಕೆ ನೀಡಿದ್ದೇನೆ ಎಂದು ಅವರು ರಾಜ್ಯದ ಜನರ ಕ್ಷಮೆ ಯಾಚಿಸಲಿ‘ ಎಂದು ಒತ್ತಾಯಿಸಿದರು.

ವಾರದ ಗಡುವು: ರೇಣುಕಾಚಾರ್ಯ ಇನ್ನೊಂದು ವಾರದಲ್ಲಿ ತಮ್ಮ ಹೇಳಿಕೆಗೆ ಸಾಕ್ಷ್ಯ ಒದಗಿಸಲಿ. ಇಲ್ಲದಿದ್ದರೆ ಅವರ ವಿರುದ್ಧ ಬಾಗಲಕೋಟೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗುವುದು. ಆ ನಿಟ್ಟಿನಲ್ಲಿ ಪಕ್ಷದ ಜಿಲ್ಲಾ ಘಟಕದಿಂದ ಈಗಾಗಲೇ ಕಾನೂನು ತಜ್ಞರ ಅಭಿಪ್ರಾಯ ಪಡೆಯಲಾಗಿದೆ ಎಂದರು.

ADVERTISEMENT

ಮಂದಿರ, ಮಸೀದಿ ಹಾಗೂ ಚರ್ಚ್‌ಗಳಲ್ಲಿ ಭಗವಂತ ಇದ್ದಾನೆ ಎಂಬುದು ನಮ್ಮ ಜನರ ನಂಬಿಕೆ. ಆದರೆ ರೇಣುಕಾಚಾರ್ಯ ಅವರ ಈ ಬೇಜವಾಬ್ದಾರಿ ಹೇಳಿಕೆಯಿಂದ ಸಮಾಜದಲ್ಲಿ ಕಲುಷಿತ ವಾತಾವರಣ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಂತಹ ಹುದ್ದೆಯಲ್ಲಿ ಇರುವವರು ಆ ಸ್ಥಾನದ ಘನತೆಗೆ ತಕ್ಕಂತೆ ಗಂಭೀರವಾಗಿ ಮಾತನಾಡಲಿ ಎಂದು ಕಿವಿಮಾತು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಅನಿಲ್‌ಕುಮಾರ ದಡ್ಡಿ, ನಾಗರಾಜ ಹದ್ಲಿ, ರಾಜು ಮನ್ನಿಕೇರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.