ಮಹಾಲಿಂಗಪುರ: ಸಮೀಪದ ಚಿಮ್ಮಡ ಗ್ರಾಮದಲ್ಲಿ ಗುರುವಾರ ಕಿಚಡಿ ಪ್ರಸಾದವನ್ನು ಸವಿಯುವ ಮೂಲಕ ಲಕ್ಷಾಂತರ ಭಕ್ತರು ಪ್ರಭುಲಿಂಗೇಶ್ವರ ಜಾತ್ರೆಯಲ್ಲಿ ಸಂಭ್ರಮದಲ್ಲಿ ಪಾಲ್ಗೊಂಡರು.
ಬೆಳಿಗ್ಗೆ ರುದ್ರಾಭಿಷೇಕ, ನಂತರ ಷಟ್‍ಸ್ಥಲ ಧ್ವಜಾರೋಹಣ, ಅಡ್ಡಪಲ್ಲಕ್ಕಿ ಮಹೋತ್ಸವ, ಚಿಂತನಗೋಷ್ಠಿ ನಡೆದವು. ಮಧ್ಯಾಹ್ನ ಆರಂಭಗೊಂಡ ಕಿಚಡಿ ಪ್ರಸಾದ ವಿತರಣೆಯಲ್ಲಿ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆ ಅಲ್ಲದೆ, ನೆರೆಯ ಮಹಾರಾಷ್ಟ್ರದಿಂದಲೂ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಅಂದಾಜು 210 ಕೆ.ಜಿ ಅಕ್ಕಿ, ಬೇಳೆ, 30 ಕ್ವಿಂಟಲ್ ಮಸಾಲೆ ಪದಾರ್ಥಗಳಿಂದ ತಯಾರಿಸಲಾಗಿದ್ದ ಕಿಚಡಿ ಪ್ರಸಾದವನ್ನು ಭಕ್ತರು ಸವಿದರು.
ಸಂಜೆ ಗೊಂಬೆ ವೇಷಧಾರಿ ಸೋಗು, ಕರಡಿ ಮಜಲು, ಡೊಳ್ಳು, ಬ್ಯಾಂಡ ಬಾಜಾ, ಹಲಗಿ ಮೇಳ ಸೇರಿದಂತೆ ವಿವಿಧ ವಾದ್ಯವೃಂದಗಳೊಂದಿಗೆ ಅಲಂಕೃತ ಜೋಡಿ ನಂದಿಕೋಲ ಉತ್ಸವ ಹಾಗೂ ಪ್ರಪ್ರಥಮ ರಥೋತ್ಸವ ಸಂಭ್ರಮದಿಂದ ನೆರವೇರಿತು. ರಾತ್ರಿ ಪ್ರಭುಲಿಂಗೇಶ್ವರ ಕಲೆ ಮತ್ತು ಸಾಂಸ್ಕೃತಿಕ ನಾಟ್ಯ ಸಂಘದಿಂದ ‘ಶೆರೆ ಅಂಗಡಿ ಸಂಗವ್ವ’ ಹಾಗೂ ಕರಿಸಿದ್ಧೇಶ್ವರ ಯುವಕ ನಾಟ್ಯ ಸಂಘದಿಂದ ‘ಕಲಿತ ಜೀವಕ್ಕೆ ಬೆರೆತ ಜೀವ’ ನಾಟಕ ಪ್ರದರ್ಶನಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.