
ಬಾಗಲಕೋಟೆ: ಶೋಷಣೆಗೊಳಗಾದ ಸಮಾಜದ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಬೆಳೆಸುವ ಮೂಲಕ ಸಮುದಾಯದವರನ್ನು ಮುಖ್ಯವಾಹಿನಿಗೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.
ನವನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಚಲವಾದಿ ಸಮಾಜದ ಹಿರಿಯ ನಾಗರಿಕರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಚಲವಾದಿ ಸಮಾಜದ ಎಸ್‍ಎಸ್‍ಎಲ್‍ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ನಿವೃತ್ತಿ ಹೊಂದಿದ ನೌಕರರಿಗೆ, ಹಿರಿಯ ನಾಗರಿಕರು ಮತ್ತಿತರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡದಿರುವುದರಿಂದ ನಮ್ಮ ಸಮಾಜ ಹಿಂದುಳಿದಿದೆ. ಎಲ್ಲ ರಂಗಗಳಲ್ಲಿ ದಲಿತ ಸಮುದಾಯದ ಅಧಿಕಾರಿಗಳಿಗೆ ಬಡ್ತಿ ಸಿಗದಂತೆ ಅಡೆತಡೆಗಳನ್ನು ಒಡ್ಡಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಅಭ್ಯಾಸ ಮಾಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿ ಅಸ್ಪ್ರಶ್ಯತೆ ಇನ್ನೂ ಕಂಡು ಬರುತ್ತಿದೆ. ಇದನ್ನು ತಡೆಯುವ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ದಲಿತ ಸಮುದಾಯ ಉನ್ನತ ಮಟ್ಟದಲ್ಲಿರುವ ಅಧಿಕಾರಿ ವರ್ಗದವರು ಶ್ರಮ ವಹಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ವಿಷ್ಣುವರ್ಧನ ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅಧ್ಯಯನ ಕೇಂದ್ರ ಆರಂಭಿಸಿ ಅಂಬೇಡ್ಕರ್ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ನೀಡಲಾಗುವುದು ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿ ಮನೆಯಲ್ಲಿ ಕುಳಿತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಕೌಶಲ ಅಭಿವೃದ್ಧಿ ತರಬೇತಿ ನೀಡುವ ಚಿಂತನೆ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಅಪ್ಪಗೇರಿ ಸೋಮಶೇಖರ ಮಾತನಾಡಿ, ಅಂಬೇಡ್ಕರ್ ಅವರ ಬಗ್ಗೆ ತಿಳಿಯಲು ಅವರು ಬರೆದಿರುವ ಬರಹಗಳು, ಭಾಷಣ, ಆತ್ಮಕಥೆ, ಜಾತಿ ವಿನಾಶ ಪುಸ್ತಕ ಓದುವ ಮೂಲಕ ಅವರ ಕೊಡುಗೆಯನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಚಲವಾದಿ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಅಶೋಕ ನಾರಾಯಣಿ ವಹಿಸಿದ್ದರು. ಡಾ.ಮಂಜುನಾಥ, ಸುಭಾಸಚಂದ್ರ ನಾಟೀಕಾರ, ಲವಕುಮಾರ ಸಿಂದಗೇರಿ, ಶರಣಪ್ಪ ಅಮದಿಹಾಳ, ವಿವೇಕಾನಂದ ಗರಸಂಗಿ, ಎಚ್.ಡಿ.ಹುನ್ನೂರ, ಗುಣವಂತಿ ನಡೋಣಿ, ಎಂ.ಎಂ.ಚಬನೂರ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.