ಮಹಾಲಿಂಗಪುರ: ಕೃಷಿಯಲ್ಲಿ ಯಂತ್ರಗಳ ಬಳಕೆ ಹೆಚ್ಚಾದಂತೆ ಜಾನುವಾರುಗಳ ಸಂಖ್ಯೆ ಕಡಿಮೆಯಾಗಿ ಕಾರಹುಣ್ಣಿಮೆಯು ಎಂದಿನ ಸಂಭ್ರಮ ಕಳೆದುಕೊಂಡಿದೆ. ಆದರೂ ಮುಂಗಾರು ಹಂಗಾಮಿನ ಬಿತ್ತನೆ ಖುಷಿಯಲ್ಲಿರುವ ರೈತರು ಕಾರಹುಣ್ಣಿಮೆಯನ್ನು ಸಾಂಪ್ರದಾಯಿಕವಾಗಿ ಭರ್ಜರಿಯಾಗಿ ಆಚರಣೆ ಮಾಡಲು ಸಿದ್ಧತೆ ನಡೆಸಿದ್ದಾರೆ.
ಉತ್ತರ ಕರ್ನಾಟಕದ ರೈತರ ಹಬ್ಬ ಕರಿ ಹರಿಯುವ ಕಾರಹುಣ್ಣಿಮೆಯನ್ನು ಜೂ.11ರಂದು ಆಚರಣೆ ಮಾಡಲಾಗುತ್ತಿದೆ. ಇದಕ್ಕಾಗಿ ರೈತರು ಎತ್ತುಗಳನ್ನು ಶೃಂಗಾರ ಮಾಡುವ ಸಲುವಾಗಿ ಮಂಗಳವಾರದ ‘ವಾರದ ಸಂತೆ’ಯಲ್ಲಿ ವಿವಿಧ ರೀತಿಯ ಅಲಂಕಾರಿಕ ಸಾಮಗ್ರಿಗಳನ್ನು ಖರೀದಿಸಿದರು.
ಜಾನುವಾರುಗಳ ಅಲಂಕಾರಿಕ ವಸ್ತುಗಳಾದ ರೇಶ್ಮಿ ಹಗ್ಗ, ನೂಲು ಹಗ್ಗ, ಗರಗರಿ ಹಗ್ಗ, ವೈಯರ್ ಹಗ್ಗ ಒಂದು ಕೆ.ಜಿ.ಗೆ ₹200ರಿಂದ ₹300, ಹಣೆಕಟ್ಟು ಜೋಡಿಗೆ ₹120-₹250, ಲಡ್ಡ ₹30-₹60, ಡಿಸೈನ್ ಬಾರಕೋಲ ₹100-₹250, ಗೊಂಡೆ ದೊಡ್ಡದು ₹200, ಚಿಕ್ಕದು ₹100, ಮೂಗುದಾರ ₹10-50, ಜತ್ತಗಿ ₹200-300, ಕೋಡುಗಳ ಹಿತ್ತಾಳೆಯ ಕೊಂಬಣಸು ₹1200, ಸ್ಟೀಲ್ ಕೊಂಬಣಸು ₹650, ಸಾದಾ ಕೊಂಬಣಸು ₹250, ಬೋರಗಂಡಿ ₹10-₹50 ದರದಂತೆ ಮಾರಾಟವಾದವು.
‘ಕೃಷಿ ಚಟುವಟಿಕೆಗೆ ಎತ್ತುಗಳ ಬದಲಿಗೆ ಯಂತ್ರಗಳನ್ನು ಬಳಸಲಾಗುತ್ತಿದೆ. ರೈತರ ಮನೆಗಳಲ್ಲಿ ಎತ್ತುಗಳ ಸಂಖ್ಯೆ ಕಡಿಮೆಯಾಗಿದ್ದು, ಅವುಗಳ ಶೃಂಗಾರ ಮಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ಹೀಗಾಗಿ ವ್ಯಾಪಾರಕ್ಕೂ ಹೊಡೆತ ಬಿದ್ದಿದೆ’ ಎನ್ನುತ್ತಾರೆ ವ್ಯಾಪಾರಿಗಳಾದ ಡಿ.ಎಂ.ನದಾಫ್, ಕುತುಬುದ್ದೀನ್ ಮಾರಾಪುರ.
‘ಕಾರಹುಣ್ಣಿಮೆ ಪ್ರಯುಕ್ತ ಮನೆ ಹಾಗೂ ಹೊಲಗಳಲ್ಲಿ ಕಟ್ಟಲಾದ ದನು-ಕರುಗಳನ್ನು ಸ್ನಾನ ಮಾಡಿಸಿ ರಂಗು ರಂಗಿನ ಬಣ್ಣ ಬಳೆಯುತ್ತೇವೆ. ಕೋಡುಗಳಿಗೆ ಬಣ್ಣ, ಗೊಂಡೆ ಕಟ್ಟುತ್ತೇವೆ. ಇನ್ನಿತರ ವಸ್ತುಗಳಿಂದ ಸಿಂಗರಿಸಿ ಪೂಜೆ, ನೈವೇದ್ಯ ಸಲ್ಲಿಸುತ್ತೇವೆ. ಕೃಷಿ ಉಪಕರಣಗಳಿಗೂ ಬಣ್ಣ ಹಚ್ಚಿ ಸಿಂಗರಿಸುತ್ತೇವೆ’ ಎಂದು ಅಲಂಕಾರಿಕ ಸಾಮಗ್ರಿ ಖರೀದಿಸಲು ಬಂದಿದ್ದ ಬೀಸನಕೊಪ್ಪದ ರೈತ ಹಣಮಂತ ವಡರಟ್ಟಿ ಹೇಳಿದರು.
ಮಣ್ಣಿನ ಎತ್ತುಗಳ ಪೂಜೆ
ಕಾರಹುಣ್ಣಿಮೆ ಅಂಗವಾಗಿ ಪಟ್ಟಣದಲ್ಲಿ ಮಣ್ಣಿನ ಎತ್ತುಗಳ ಪೂಜೆ ಸಂಭ್ರಮದಿಂದ ನಡೆಯಿತು. ಮನೆಗಳಲ್ಲಿ ಎತ್ತು ಇಲ್ಲದವರು ಕುಂಬಾರರು ಮಾಡಿದ ಮಣ್ಣಿನ ಎತ್ತುಗಳನ್ನು ತಂದು ಮನೆಯ ಕೋಣೆಯ ಜಗುಲಿ ಮೇಲಿಟ್ಟು ಅವುಗಳನ್ನು ಪೂಜಿಸುವ ವಾಡಿಕೆ ಇದೆ.
ಕಾರಹುಣ್ಣಿಮೆ ಮುನ್ನಾದಿನ ಹೊನ್ನುಗ್ಗಿಯ ಮಂಗಳವಾರ ಮಣ್ಣಿನ ಜೋಡು ಎತ್ತುಗಳನ್ನು ಮನೆಗೆ ತಂದು ಸಾರ್ವಜನಿಕರು ಪೂಜಿಸಿದರು. ನಂತರ ಕೋಡುಬಳೆಗಳಿಂದ ಅವುಗಳ ಕೋಡುಗಳನ್ನು ಸಿಂಗರಿಸಿ ಸಂಭ್ರಮಿಸಿದರು. ಮಲ್ಲಯ್ಯನ ದೇವಸ್ಥಾನದ ಬಳಿ ಕುಂಬಾರ ಕುಟುಂಬದವರು ಮಣ್ಣಿನಿಂದ ಎತ್ತುಗಳನ್ನು ತಯಾರಿಸಿ ಮಾರಾಟ ಮಾಡಿದರು. ಕೆಲವರು ಮನೆಮನೆಗೆ ತೆರಳಿ ಮಾರಾಟ ಮಾಡಿದರು. ₹50ರಿಂದ ₹150 ವರೆಗೆ ಜೋಡು ಮಣ್ಣಿನ ಎತ್ತುಗಳು ಮಾರಾಟಗೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.