ADVERTISEMENT

ಭಾಂಡಗೆ ತಮ್ಮ ಇತಿಹಾಸ ನೋಡಿಕೊಳ್ಳಲಿ

ರೋಲ್‌ಕಾಲ್ ಹೋರಾಟಗಾರರು ಆರೋಪಕ್ಕೆ ಕರವೇ ಜಿಲ್ಲಾ ಘಟಕ ತಿರುಗೇಟು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2020, 10:50 IST
Last Updated 28 ನವೆಂಬರ್ 2020, 10:50 IST

ಬಾಗಲಕೋಟೆ: ಕನ್ನಡಪರ ಮಾತಾಡುವವರನ್ನು ರೋಲ್‌ಕಾಲ್ ಹೋರಾಟಗಾರರು ಎಂದು ಕರೆದಿರುವ ವಿಧಾನಪರಿಷತ್ ಮಾಜಿ ಸದಸ್ಯ ನಾರಾಯಣ ಸಾ ಭಾಂಡಗೆ ಮೊದಲು ತಮ್ಮ ಇತಿಹಾಸ ನೋಡಿಕೊಳ್ಳಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಬದನೂರ ಛೇಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉದ್ಧಟತನದ ಮಾತಿಗೆ ನಾರಾಯಣ ಸಾ ಭಾಂಡಗೆ ಸಂಘಟನೆಗಳ ಕ್ಷಮೆ ಯಾಚಿಸಲಿ. ಇಲ್ಲದಿದ್ದರೆ ಅವರ ಹಿನ್ನೆಲೆ ಹಾಗೂ ಬಂಡವಾಳ ನಾವೇ ಬಯಲು ಮಾಡಬೇಕಾಗುತ್ತದೆ. ಬೆಳಗಾವಿಯ ಮಾಜಿ ಮೇಯರ್ ವಿಜಯ ಮೋರೆಗೆ ಆದ ಗತಿ ನಿಮಗೂ ಆಗಲಿದೆ ಎಂದು ಎಚ್ಚರಿಸಿದರು.

ನಾರಾಯಣ ಸಾ ಭಾಂಡಗೆ ತಾವು ಪ್ರತಿನಿಧಿಸುವ ಕ್ಷತ್ರೀಯ ಸಮಾಜ ಮರಾಠ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತದೆಯೇ ಎಂಬುದನ್ನು ನೋಡಿಕೊಳ್ಳಲಿ. ತಮ್ಮ ಸಮುದಾಯಕ್ಕೆ ನ್ಯಾಯ ಕಲ್ಪಿಸಲು ಆಗದವರು ಕನ್ನಡಪರ ಹೋರಾಟಗಾರರ ಬಗ್ಗೆ ಮಾತನಾಡಿದರೆ ಸಹಿಸುವುದಿಲ್ಲ ಎಂದರು.

ADVERTISEMENT

ಬಿಜೆಪಿ ವರಿಷ್ಠರನ್ನು ಮೆಚ್ಚಿಸಲು ಈ ರೀತಿ ಮಾತಾಡುವ ಬದಲು ಕ್ಷತ್ರೀಯ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಲು ಹೋರಾಟ ಮಾಡಲಿ. ಇಲ್ಲವೇ ಕ್ಷತ್ರೀಯ ಮಹಾಸಭಾ ಪ್ರಾಧಿಕಾರ ರಚಿಸಿ ₹100 ಕೋಟಿ ಮೀಸಲಿಡಲು ಮುಖ್ಯಮಂತ್ರಿಗೆ ಒತ್ತಾಯಿಸಲಿ ಎಂದು ಆಗ್ರಹಿಸಿದರು.

ಬಿಜೆಪಿಯವರಿಗೆ ನದಿ, ಗಡಿ, ಭಾಷೆಯ ಹೋರಾಟದ ಅಸ್ಮಿತೆಯೇ ಗೊತ್ತಿಲ್ಲ. ಬರೀ ಧರ್ಮ, ಸಮಾಜಗಳ ನಡುವೆ ಒಡಕು ಮೂಡಿಸಿ ಅಧಿಕಾರಕ್ಕೆ ಪಡೆಯುತ್ತಿದ್ದಾರೆ. ಪ್ರತಿ ವರ್ಷ ನವೆಂಬರ್ 1ರಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಿಸುವ ಎಂಇಎಸ್ ಸಂಘಟನೆಯನ್ನುತಾಕತ್ತಿದ್ದರೆ ನಿಷೇಧಿಸಲಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಧರ್ಮಂತಿ, ರವಿ ಶಿಂಧೆ, ಮಂಜುಪವಾರ, ಮಲ್ಲು ಕಟ್ಟಿಮನಿ, ಗಣಪತಿ ಭೋವಿ, ಬಸವರಾಜ ಅಂಬಿಗೇರ, ಆತ್ಮಾರಾಮ ನೀಲನಾಯಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.