
ಬಾಗಲಕೋಟೆ: ಮುದ್ರಣ ಕ್ಷೇತ್ರದಲ್ಲಿ ಎಷ್ಟೇ ಏಳು ಬೀಳುಗಳು ಬಂದರೂ, ಅಂಜದೇ ಗಟ್ಟಿತನದಿಂದ ದಿಟ್ಟ ಹೆಜ್ಜೆಯಿನ್ನಿಟ್ಟು ದೇಶದಲ್ಲಿ ಬಹಳಷ್ಟು ಮುದ್ರಣಾಲಯಗಳು ಮುಂದುವರಿದಿವೆ. ಅಷ್ಟೇ ವೇಗವಾಗಿ ಬೆಳವಣಿಗೆಯಾಗಿದೆ ಎಂದು ಮಲ್ಲಿಕಾರ್ಜುನ ಸಕ್ರೋಜಿ ಹೇಳಿದರು.
ಬಾಗಲಕೋಟೆ ಮುದ್ರಣಾಲಯಗಳ ಒಡೆಯರ ಸಂಘದಿಂದ ನಗರದ ವಾಸವಿ ಪ್ರಿಂಟರ್ಸ್ ಕಾರ್ಯಾಲಯದಲ್ಲಿ ಮಂಗಳವಾರ ಜೋಹಾನ್ಸ್ ಗುಟೆನ್ ಬರ್ಗ್ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಮುದ್ರಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗುಟೆನ್ ಬರ್ಗ್ ಅವರು ಮುದ್ರಣ ಅಚ್ಚು ಹಾಗೂ ಮುದ್ರಣ ಯಂತ್ರ ಕಂಡು ಹಿಡಿಯದಿದ್ದಲ್ಲಿ ನಾವುಗಳು ಮುದ್ರಕರಾಗುತ್ತಿರಲಿಲ್ಲ ಎಂದರು.
ಒಂದು ಕಾಲದಲ್ಲಿ ಅಚ್ಚು ಮುದ್ರಣಾಲಯ ಅಂದವಾಗಿತ್ತು. ನಂತರ ಆಫ್‌ಸೆಟ್ ಪ್ರಿಂಟ್ ಬಂದಿತು. ತದನಂತರ ಮಲ್ಟಿ ಕಲರ್ ಪ್ರಿಂಟ್, ಡಿಜಿಟಲ್ ಪ್ರಿಂಟ್ ಬಂದಿದೆ. ಚೆಂದದ ಮುದ್ರಣ ಮಾಡಲು ಸಾಧ್ಯವಾಗುತ್ತಿದೆ. ಇಂತಹ ಪವಿತ್ರ ಮುದ್ರಣ ಕ್ಷೇತ್ರವನ್ನು ನಾವೆಲ್ಲರೂ ಸೇರಿ ಉಳಿಸಿ, ಬೆಳೆಸೋಣ ಎಂದು ಹೇಳಿದರು.
ಅತಿಥಿಗಳಾಗಿದ್ದ ಎನ್.ಬಿ. ಗಲಗಲಿ, ಬಿ.ಎ. ಗೌಡರ, ವಿ.ಡಿ. ಗಂಗಾವತಿ ಮಾತನಾಡಿ, ಅಚ್ಚು ಮುದ್ರಣ ಹಾಗೂ ಸ್ಕ್ರೀನ್ ಪ್ರಿಂಟ್‌ಗಳು ಮರೆಯಾಗಿವೆ. ಆಫ್‌ಸೆಟ್ ಮತ್ತು ಡಿಜಿಟಲ್ ಪ್ರಿಂಟ್ ಉಳಿದಿದ್ದು, ಅವುಗಳನ್ನು ಮುಂದುವರಿಸಿಕೊಂಡು ಹೋಗೋಣ ಎಂದರು.
ಸಂಘದ ಅಧ್ಯಕ್ಷ ಮಂತ್ರಪ್ಪ ರಾಜನಾಳ, ಶಿವಾನಂದ ಕುಂಬಾರ ಮಾತನಾಡಿ, ಹಿಂದಿನ ಮುದ್ರಣದ ದಿನಗಳಲ್ಲಿ ಸ್ಮರಿಸಿಕೊಂಡರು. ಪ್ರಧಾನ ಕಾರ್ಯದರ್ಶಿ ನಾಗರಾಜ ಹೊನ್ನುಟಗಿ, ಸಂಗಮೇಶ ಲಾಯದಗುಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.