ADVERTISEMENT

ತಾಂತ್ರಿಕ ಸಮಸ್ಯೆ ನೆಪ: ಖಾಸಗಿ ಭೂಮಾಪಕರ ಸಂಕಷ್ಟ

4 ತಿಂಗಳಿಂದ ಬಿಡಿಗಾಸೂ ಇಲ್ಲ

ವೆಂಕಟೇಶ್ ಜಿ.ಎಚ್
Published 21 ಡಿಸೆಂಬರ್ 2019, 20:07 IST
Last Updated 21 ಡಿಸೆಂಬರ್ 2019, 20:07 IST

ಬಾಗಲಕೋಟೆ: ಕಂದಾಯ ಇಲಾಖೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ 1,800 ಮಂದಿ ಖಾಸಗಿ ಪರವಾನಗಿ ಹೊಂದಿದ ಭೂಮಾಪಕರು ಕಳೆದ ನಾಲ್ಕು ತಿಂಗಳಿನಿಂದ ಸಂಭಾವನೆ ಸಿಗದೆ ಪರದಾಡುತ್ತಿದ್ದಾರೆ.

ಸರ್ವೆಗೆ ಸಂಬಂಧಿಸಿದ ಕನಿಷ್ಠ 30 ಕಡತಗಳ ವಿಲೇವಾರಿ ಹೊಣೆಯನ್ನು ಭೂಮಾಪನ ಇಲಾಖೆ, ಭೂಮಾಪಕರಿಗೆ ಪ್ರತಿ ತಿಂಗಳು ನೀಡುತ್ತದೆ. ಪ್ರತಿ ಕಡತಕ್ಕೆ ಸರ್ಕಾರ ₹800 ಸಂಭಾವನೆ ಕೊಡುತ್ತಿದೆ. ಒಬ್ಬೊಬ್ಬರು ಕನಿಷ್ಠ 40ರಿಂದ ಗರಿಷ್ಠ 70 ಕಡತಗಳ ವಿಲೇವಾರಿ ಮಾಡುತ್ತಾರೆ. ಆದರೆ ವಿಲೇವಾರಿಯಾದ ಕಡತಗಳಿಗೆ ಸೆಪ್ಟೆಂಬರ್‌ ತಿಂಗಳಿಂದ ಸಂಭಾವನೆ ಪಾವತಿಸಿಲ್ಲ.

‘ಭೂಮಾಪನಕ್ಕೆ ಸಲ್ಲಿಕೆಯಾದ ಅರ್ಜಿಗಳ ವಿಲೇವಾರಿ ವಿಚಾರದಲ್ಲಿ ಆಂಧ್ರಪ್ರದೇಶ ಬಿಟ್ಟರೆ ಕರ್ನಾಟಕವೇ ಮುಂದಿದೆ. ಈ ಗರಿಮೆಗೆ ಖಾಸಗಿಪರವಾನಗಿ ಹೊಂದಿದ ಭೂಮಾಪಕರ ಕೊಡುಗೆ ಅಪಾರ. ಆದರೆ ತಾಂತ್ರಿಕ ಸಮಸ್ಯೆಗಳ ನೆಪವೊಡ್ಡಿ ಇಲಾಖೆ ಇನ್ನೂ ಹಣ ಬಿಡುಗಡೆ ಮಾಡಿಲ್ಲ. ನಮಗೆ ದಿನ ನಿತ್ಯದ ಬದುಕೇ ದುಸ್ತರವಾಗಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಭೂಮಾಪಕರೊಬ್ಬರು ಅಳಲು ತೋಡಿಕೊಳ್ಳುತ್ತಾರೆ.

ADVERTISEMENT

‘ಸ್ವಂತ ಖರ್ಚಿನಲ್ಲಿ ಹಳ್ಳಿಗಳಿಗೆ ಹೋಗಬೇಕಿದೆ. ಚೈನ್‌ ಹಿಡಿಯಲು ನಮ್ಮೊಡನೆ ಕರೆದೊಯ್ಯುವ ಸಹಾಯಕನಿಗೆ ₹200 ಕೂಲಿ ಜೇಬಿನಿಂದಲೇ ಕೊಡುತ್ತೇವೆ.ನಿಗದಿತ ಗುರಿ ತಲುಪದಿದ್ದರೆ ಮೇಲಧಿಕಾರಿಗಳು ನೋಟಿಸ್ ಕೊಡುತ್ತಾರೆ. ಮಾಡಿದ ಕೆಲಸಕ್ಕೆ ಹಣ ಕೊಡದೇ ಬರೀ ಕೆಲಸದಲ್ಲಿ ಪ್ರಗತಿ ಕೇಳಿದರೆ ಹೇಗೆ? ಆ ಬಗ್ಗೆ ಪ್ರಶ್ನಿಸಿದರೆಅಶಿಸ್ತು ಎಂದು ಪರಿಗಣಿಸಿ ಬೇರೆ ತಾಲ್ಲೂಕಿಗೆ ನಿಯೋಜಿಸುತ್ತಾರೆ’ ಎಂದು ಅವರು ಹೇಳಿದರು.

ಎರಡೂವರೆ ವರ್ಷದಿಂದ ಹಣ ಇಲ್ಲ: ‘ರೈತರ ಜಮೀನುಗಳನ್ನು ಉಚಿತವಾಗಿ ಪೋಡಿ ಮಾಡಿಕೊಡಲು ಆರಂಭಿಸಿದ್ದ ಪೋಡಿಮುಕ್ತ ಯೋಜನೆಯಡಿ ಮೊದಲ ಹಂತದಲ್ಲಿ ಮಾಡಿದ್ದ ಸರ್ವೆ ಕೆಲಸಕ್ಕೆ ಎರಡೂವರೆ ವರ್ಷಗಳಾದರೂ ಸರ್ಕಾರ ಹಣ ಕೊಟ್ಟಿಲ್ಲ. ಆಗ ಪ್ರತಿಯೊಬ್ಬರಿಗೂ ತಲಾ 10 ಹಳ್ಳಿಗಳ ಗುರಿ ನೀಡಲಾಗಿತ್ತು. ಒಬ್ಬೊಬ್ಬರಿಗೆ ₹50 ಸಾವಿರದಿಂದ 1 ಲಕ್ಷದವರೆಗೆ ಬರಬೇಕಿದೆ’ ಎಂದು ಭೂಮಾಪಕರೊಬ್ಬರು ಹೇಳುತ್ತಾರೆ.

ಎಂ.ಟೆಕ್ ಪದವೀಧರರೂ ಭೂಮಾಪಕರು...
ಜೆಒಸಿ ಓದಿದವರು ಭೂಮಾಪಕರ ಕೆಲಸಕ್ಕೆ ಸೇರುತ್ತಿದ್ದರು. ಆದರೆ, ಈಗ ಡಿಪ್ಲೊಮಾ, ಬಿ.ಇ ಪದವೀಧರರು ನೇಮಕಗೊಂಡಿದ್ದಾರೆ. ಮೂವರು ಎಂ.ಟೆಕ್ ಮುಗಿಸಿದವರೂ ಇದ್ದಾರೆ. ‘ಕೆಲಸ ಕಾಯಂ ಆಗಬಹುದು ಎಂಬ ಆಶಾಭಾವನೆಯೇ ನಮ್ಮನ್ನು ಈ ಕೆಲಸಕ್ಕೆ ಪ್ರೇರೇಪಿಸಿದೆ. ಕೆಲಸಕ್ಕೆ ಮಾತ್ರ ತಪ್ಪದೇ ಬನ್ನಿ, ಕೂಲಿ ಕೇಳಬೇಡಿ ಎಂಬ ಧೋರಣೆ ತಾಳಿದರೆ ನಾವು ಬದುಕುವುದು ಹೇಗೆ’ ಎಂದು ಭೂಮಾಪಕರೊಬ್ಬರು ಪ್ರಶ್ನಿಸುತ್ತಾರೆ.

*
ಭೂಮಾಪಕರ ಸಮಸ್ಯೆ ಈಗ ಗೊತ್ತಾಗಿದೆ. ಆಯುಕ್ತರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಿದ್ದೇನೆ.
-ಗೋಪಾಲ್ ಮಾಲಗಿತ್ತಿ, ಡಿಡಿಎಲ್‌ಆರ್, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.