ನಿಷೇಧಾಜ್ಞೆ
ಬಾಗಲಕೋಟೆ: ‘ಮೂರು ದಿನಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ವ್ಯಾಪಾರ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ನವನಗರ, ವಿದ್ಯಾಗಿರಿಯಲ್ಲಿನ ನಿಷೇಧಾಜ್ಞೆ ವಾಪಸ್ ಪಡೆಯಲಾಗಿದೆ. ಬಾಗಲಕೋಟೆಯಲ್ಲಿ ಮಾತ್ರ ಫೆ.28ರವರೆಗೆ ಮುಂದುವರಿಯಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಸಿದ್ದಾರ್ಥ ಗೋಯಲ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾಮಾಜಿಕ ಜಾಲತಾಣದಲ್ಲಿ ಕೆಲವು ಸಂಘಟನೆಗಳವರು ಫೆ.26ರಂದು ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ತಿಳಿಸಿರುತ್ತಾರೆ. ನಿಷೇಧಾಜ್ಞೆ ಇರುವುದರಿಂದ ಯಾವುದೇ ಪ್ರತಿಭಟನೆಗೆ ಅವಕಾಶ ಇರುವುದಿಲ್ಲ’ ಎಂದರು.
‘ಮುಂಬರುವ ಹೋಳಿ, ಯುಗಾದಿ ಹಾಗೂ ರಂಜಾನ್ ಹಬ್ಬಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಪ್ರತಿಭಟನೆಯನ್ನು ಮಾಡದೇ ಶಾಂತಿ ಕಾಪಾಡಲು ಸಹಕರಿಸಬೇಕು. ಪ್ರತಿಭಟನೆ ಕೈಗೊಂಡು ನಗರದಲ್ಲಿ ಅಶಾಂತಿ ಸೃಷ್ಟಿಯಾದರೆ ಸಂಘಟಕರನ್ನೇ ಹೊಣೆಗಾರರನ್ನಾಗಿಸಿ ಕ್ರಮಕೈಗೊಳ್ಳಲಾಗುವುದು’ ಎಂದರು.
‘ಘಟನೆಗೆ ಸಂಬಂಧಿಸಿದಂತೆ ಮೂರು ಪ್ರಕರಣಗಳನ್ನು ದಾಖಲಿಸಿಕೊಂಡು, ಕೆಲವರನ್ನೂ ಈಗಾಗಲೇ ಬಂಧಿಸಲಾಗಿದೆ. ಸಾಕ್ಷಿ ಆಧರಿಸಿ ತನಿಖೆ ಮುಂದುವರಿಸಲಾಗಿದೆ. ಯಾವುದೇ ಸಮುದಾಯ ನೋಡದೇ ತಪ್ಪು ಮಾಡಿದವರನ್ನು ಬಂಧಿಸಲಾಗುವುದು. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಸಂಗಪ್ಪ ಮಾತನಾಡಿ, ‘ಈಗಾಗಲೇ ಹಿಂದೂ, ಮುಸ್ಲಿಮ ಮುಖಂಡರ ಜತೆಗೆ ಸಭೆ ಮಾಡಿದ್ದೇವೆ. ಶಾಂತಿ ಕದಡುವ ಕೆಲಸ ಆಗಬಾರದು. ಆರೋಪಿಗಳನ್ನು ಬಂಧಿಸಲಾಗಿದೆ. ನಿಷ್ಪಕ್ಷಪಾತವಾಗಿ ಕ್ರಮ ಜರುಗಿಸಲಾಗಿದೆ’ ಎಂದರು.
‘ವ್ಯಾಪಾರಸ್ಥರ ಸಂಘದವರು ವಹಿವಾಟಿಗೆ ಧಕ್ಕೆಯಾಗುತ್ತಿದೆ ಎಂದು ಮನವಿ ಸಲ್ಲಿಸಿದ್ದಾರೆ. ವ್ಯಾಪಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು. ಎಲ್ಲರೂ ಸಹಬಾಳ್ವೆಯಿಂದ ಇರಬೇಕು’ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ತೇಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.