ADVERTISEMENT

ಬಾಗಲಕೋಟೆ: ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

ಒಳಮೀಸಲಾತಿ ಗೊಂದಲದ ಗೂಡಾಗಿಸಿದ ಸರ್ಕಾರ: ಆರೋಪ

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 7:11 IST
Last Updated 8 ಜನವರಿ 2026, 7:11 IST
ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬುಧವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾದಿಗ ಸಮಗಾರ ಡೊಹರ ದಕ್ಕಲಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ಮಾಡಿದರು
ಒಳ ಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬುಧವಾರ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾದಿಗ ಸಮಗಾರ ಡೊಹರ ದಕ್ಕಲಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ಮಾಡಿದರು   
ನ್ಯಾಯ ಒದಗಿಸುವಲ್ಲಿ ರಾಜ್ಯ ಸರ್ಕಾರ ವಿಫಲ | ಒಳಮೀಸಲಾತಿ ಶೀಘ್ರ ಜಾರಿಗೆ ಆಗ್ರಹ | ಅವೈಜ್ಞಾನಿಕ ಹಂಚಿಕೆ

ಬಾಗಲಕೋಟೆ: ಒಳಮೀಸಲಾತಿ ಜಾರಿಯಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾದಿಗ ಸಮಗಾರ ಡೊಹರ ದಕ್ಕಲಿಗ ಜಾತಿ ಉಪಜಾತಿ ಸಂಘಟನೆಗಳ ಒಕ್ಕೂಟದ ಮುಖಂಡರು ಪ್ರತಿಭಟನೆ ಮಾಡಿದರು.

ರಾಜ್ಯ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸುವ ಸುವರ್ಣವಕಾಶ ಕಳೆದುಕೊಂಡು, 101 ಜಾತಿಗಳಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ವಿಫಲವಾಗಿದೆ. ಮತ ಬ್ಯಾಂಕ್ ರಾಜಕಾರಣಕ್ಕೆ ಒಳಮೀಸಲಾತಿ ಸೀಮಿತಗೊಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಪ್ರೀಂಕೋರ್ಟ್ ತೀರ್ಪು ಬಂದು 16 ತಿಂಗಳು ಕಳೆದರೂ ಒಳಮೀಸಲಾತಿ ಜಾತಿ ಸಮರ್ಪಕವಾಗಿ ಆಗದೆ ಎಲ್ಲ ಪರಿಶಿಷ್ಟ ಜಾತಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಹರಿಯಾಣ, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳು 6 ತಿಂಗಳಲ್ಲಿ ಒಳಮೀಸಲಾತಿಯನ್ನು ಜಾರಿ ಮಾಡಿವೆ. ರಾಜ್ಯ ಸರ್ಕಾರವೂ ತಾನೇ ಸೃಷ್ಟಿಸಿದ ಗೊಂದಲಗಳಿಂದಾಗಿ ಜಾರಿಗೊಳಿಸಲಾಗದೇ ತಿಣುಕಾಡುತ್ತಿದೆ ಎಂದು ಟೀಕಿಸಿದರು.

ADVERTISEMENT

ರಾಜ್ಯ ಸರ್ಕಾರವು ತಾನೇ ರಚಿಸಿದ್ದ ನಾಗಮೋಹನ್ ದಾಸ್ ಆಯೋಗ ಶಿಫಾರಸಿನಂತೆ ಒಳಮೀಸಲಾತಿ ಹಂಚಿಕೆ ಮಾಡದೇ, ಅವೈಜ್ಞಾನಿಕವಾಗಿ ರಾಜಕೀಯ ಸೂತ್ರ ರಚಿಸಿ, ಎಲ್ಲರನ್ನೂ ಸಂಕಷ್ಟಕ್ಕೆ ದೂಡಿತು. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರದ ವಿಷಯದಲ್ಲಿಯೂ ಗೊಂದಲ ಹಾಗೆಯೇ ಮುಂದುವರೆದಿದೆ. ಇದರಿಂದಾಗಿ ಒಳಮೀಸಲಾತಿ ಉದ್ದೇಶವೇ ವಿಫಲವಾಗಿದೆ ಎಂದು ದೂರಿದರು.

ಪರಿಶಿಷ್ಟ ಜಾತಿಗಳಿಗೆ ಮೂಲಸೌಕರ್ಯ ಒದಗಿಸಲು ಎಸ್‌ಸಿಪಿ ರೂಪಿಸಲಾಗಿದೆ. ಇಲ್ಲಿಯೂ ಒಳಮೀಸಲಾತಿ ಕಲ್ಪಿಸಬೇಕು ಎಂಬುದು ಆಗ್ರಹವಾಗಿತ್ತು. ಆದರೆ, ಅಲ್ಲಿ ಜಾರಿಗೆ ತಂದಿಲ್ಲ. ಅರೆ ಮನಸ್ಸಿನಿಂದ ಜಾರಿಗೆ ಮುಂದಾಗಿರುವುದೇ ಗೊಂದಲಗಳಿಗೆ ಕಾರಣವಾಗಿದೆ ಎಂದು ಟೀಕಿಸಿದರು.

ಅತ್ಯಂತ ಹಿಂದುಳಿದ, ಅತಿ ಸಣ್ಣ 59 ಜಾತಿಗಳಿರುವ ಅಲೆಮಾರಿಗಳ ಗುಂಪಿಗೆ ನಾಗಮೋಹನ್ ದಾಸ್ ಅವರ ಆದ್ಯತೆ ಒದಗಿಸಿ ಪ್ರವರ್ಗ 1ರಲ್ಲಿ ಪ್ರತ್ಯೇಕ ಅವಕಾಶ ಮಾಡಲು ಶಿಫಾರಸು ಮಾಡಿತ್ತು. ಅವರನ್ನು ಬಲಿಷ್ಠ ಜಾತಿಯ ಗುಂಪುಗಳ ಜೊತೆಗೆ ಸೇರಿಸಿ ಅನ್ಯಾಯಮಾಡಿದೆ. ಇದು ನ್ಯಾಯಾಲಯದ ಆದೇಶವನ್ನೇ ಕಡೆಗಣಿಸಿದೆ ಎಂದು ದೂರಿದರು.

ರಾಜ್ಯ ಉಪಾಧ್ಯಕ್ಷ ಯಲ್ಲಪ್ಪ ಬೆಂಡಿಗೇರಿ, ರಾಜ್ಯ ಸಂಘಟನಾ ಸಂಚಾಲಕ ಮುತ್ತಣ್ಣ ಬೆಣ್ಣೂರ, ಜಿಲ್ಲಾ ಅಧ್ಯಕ್ಷ ಶಿವಾನಂದ ಟವಳಿ, ವೈ.ಸಿ. ಕಾಂಬಳೆ ಮಾತನಾಡಿ, ರಾಜ್ಯ ಸರ್ಕಾರದ ವೈಫಲ್ಯವನ್ನು ಎಳೆ, ಎಳೆಯಾಗಿ ಬಿಚ್ಚಿಟ್ಟರು. ಶೀಘ್ರ ಜಾರಿಗೆ ಕ್ರಮಕೈಗೊಳ್ಳಿದಿದ್ದರೆ, ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸೋಮು ಚುರಿ, ಸಚಿನ್ ಕೊಡತೆ, ರಾಮ ಕದಂ, ಹಣಮಂತ ಚಿಮ್ಮಲಗಿ, ಧರ್ಮಣ ಸಣಕ್ಯಾನವರ, ರಾಯಪ್ಪ ಬಿರಕಬ್ಬಿ, ಕಾಂತಿಚಂದ್ರ ಜ್ಯೋತಿ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.