ADVERTISEMENT

ಸಮಸ್ಯೆಗೆ ಸ್ಪಂದಿಸದ ಪಿಡಿಒ: ಗ್ರಾ.ಪಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 15:45 IST
Last Updated 20 ಜೂನ್ 2025, 15:45 IST
ಹುನಗುಂದ ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯಿತಿ ಕಚೇರಿಗೆ ಗ್ರಾಮಸ್ಥರು ಬೀಗ ಹಾಕಿ ಪ್ರತಿಭಟನೆ ನಡೆಸಿದರು 
ಹುನಗುಂದ ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯಿತಿ ಕಚೇರಿಗೆ ಗ್ರಾಮಸ್ಥರು ಬೀಗ ಹಾಕಿ ಪ್ರತಿಭಟನೆ ನಡೆಸಿದರು    

ಹುನಗುಂದ: ತಾಲ್ಲೂಕಿನ ಅಮರಾವತಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ರ‍್ಯಾಕಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಅಮರಾವತಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಗುರುವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಮುಖಂಡ ಹಾಗೂ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗೌಡ ಮಾತನಾಡಿ, ಪಿಡಿಒ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಜೊತೆಗೆ ಸಮಸ್ಯೆ ಹೇಳಿಕೊಂಡು ಬರುವ ಸಾರ್ವಜನಿಕರಿಗೆ ಗೌರವ ಕೊಡುತ್ತಿಲ್ಲ. ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಅವರನ್ನು ವರ್ಗಾವಣೆ ಮಾಡುವವರಿಗೆ ಹೋರಾಟ  ನಿಲ್ಲಿಸುವುದಿಲ್ಲ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕರು ಪಂಚಾಯಿತಿಗೆ ಆಗಮಿಸುವವರೆಗೆ ಪ್ರತಿಭಟನೆ  ಹಿಂಪಡೆಯುವುದಿಲ್ಲ ಜೊತೆಗೆ ಕಚೇರಿ ಬಾಗಿಲು ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಪ್ರತಿಭಟನೆ ಸ್ಥಳಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರಳಿಧರ ದೇಶಪಾಂಡೆ ಭೇಟಿ ನೀಡಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕರಿಗೆ ದೂರವಾಣಿ ಮೂಲಕ ತಿಳಿಸಿದಾಗ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ADVERTISEMENT

ಗ್ರಾಮದ ಮುಖಂಡ ಶರಣಪ್ಪ ಗೋಪಲಪ್ಪನವರ ಮಾತನಾಡಿ, ‘ಒಂದು ವರ್ಷವಾದರೂ ಗ್ರಾಮದ ಜನರಿಗೆ ಜಾಬ್ ಕಾರ್ಡ್‌ ಮಾಡಿಕೊಡದೆ ಜನರನ್ನು ಸತಾಯಿಸುತ್ತಿದ್ದಾರೆ. ಕೆಲಸ ಮಾಡಿದ ಕಾರ್ಮಿಕರಿಗೆ ಸರಿಯಾಗಿ ಹಣ ಪಾವತಿಸುತ್ತಿಲ್ಲ. ದನದ ಕೊಟ್ಟಿಗೆ ನಿರ್ಮಿಸಿಕೊಂಡ ರೈತರಿಗೆ ಮತ್ತು ಜನತಾ ಮನೆಗಳ ಬಿಲ್ ಸರಿಯಾಗಿ ಪಾವತಿಸುತ್ತಿಲ್ಲ. ಪಿಡಿಒ ಮತ್ತು ಕಂಪ್ಯೂಟರ್ ಆಪರೇಟರ್ ಕಚೇರಿಗೆ ಸರಿಯಾಗಿ ಬರುತ್ತಿಲ್ಲ. ಗ್ರಾಮದಲ್ಲಿ ರಸ್ತೆ, ಚರಂಡಿ, ಶೌಚಾಲಯ ಸರಿಯಾಗಿ ಇಲ್ಲ ಹಾಗೂ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಮೃತ್ಯುಂಜಯ ಕಪರದ, ಮಹಾಂತೇಶ ಚಿತ್ತವಾಡಗಿ, ಮಂಜುನಾಥ ಹುನಕುಂಟಿ, ಆನಂದ ಹುನಕುಂಟಿ, ಮುತ್ತುರಾಜ ಗೌಡರ, ಅಜಯ ಕಂಬಳಿ, ಶಿವು ಗೌಡರ, ಬಸವರಾಜ ಗೋಲಪ್ಪನವರ, ಚಂದಪ್ಪ ಗೂಳಿ, ಶಶಿಕುಮಾರ ಗೋಲಪ್ಪನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.